ಗುರಿಯಿಟ್ಟು ಬಿಟ್ಟ ಬಾಣದರಿವಿರದೆ ಹಕ್ಕಿ
ಹಾರುವುದು ರೆಕ್ಕೆ ಬಿಚ್ಚಿ
ನೊರೆ ಮುಗಿಲ ಹಾದು ಸೀಮಾತೀತ ನಭದ
ವಿಸ್ತಾರವನ್ನೆ ನೆಚ್ಚಿ
ಬಿಟ್ಟ ಕ್ಷಣದಿಂದ ಬಿಡುವ ಕ್ಷಣ ತನಕ
ಮಧ್ಯಂತರ ಇರುವ ಬದುಕು
ಕ್ಷಣವೊ ಯುಗವೊ ಅದು ಅಷ್ಟು ಸಾಕೊ ಇನ್ನಷ್ಟು ಬೇಕೊ
ಯಾರು ನಿರ್‍ಧರಿಸಬೇಕು?
ನೆತ್ತದಾಟವೊ ಇದು ಹುಟ್ಟುಸಾವುಗಳ
ಡೊಂಬರಾಟವೊ
ಎತ್ತ ಸಾಗುವುದೆಂಬ ಅರಿವಿರದೆ ಬಿಟ್ಟ
ಕಣ್ಕಟ್ಟಿನಾಟವೊ
ಇದ ಕೇಳಿದರು ಹಿಂದೆ ಇವ ಕೇಳುವರು ಮುಂದೆ
ಇದಕುತ್ತರವೆ ಇಲ್ಲವೆಂದೆ
ಬುದ್ಧ ತಳೆದನು ಮೌನ ಆದಿ ಅನಾದಿಗಳ ಮಧ್ಯೆ
ವರ್‍ತಮಾನವೊಂದೇ
ಹಾರುತಿರುವ ಹಕ್ಕಿ ಹಾರಲೇಬೇಕೀಗ
ಲೆಕ್ಕಿಸದೆ ಬರುವ ಮರಣ
ಬಿಟ್ಟವನು ಕೂಡ ಹಿಂತೆಗೆಯಲಾರ
ಆ ಅಂಥ ಕಟ್ಟಕಡೆಯ ಬಾಣ
ಗಾಳಿ ಬೀಸುವುದು ಮೋಡ ಹಾಯುವುದು
ಹಕ್ಕಿಗಾಗಿ ದುಃಖಿಸದೆ
ನಾಳೆ ಬರದೇ ಅದು ನಿನ್ನೆಯಾಗದೇ
ಮೊನ್ನೆಗಳ ಜತೆ ಸೇರದೇ
ಇದು ಗಹನ ಇದು ಗಂಭೀರ ವಾದಿಯನ
ಇದರೆಡೆಯಲೇ ಬದುಕಬೇಕು ಜೀವ
ಬದುಕಬೇಕು ಕೊನೆಯಿಲ್ಲದಂತೆ ಮೊದಲಿಲ್ಲದಂತೆ
ಒಂದೊಂದೂ ಚಿರಂಜೀವ
*****