ಮೂಲತಃ ನಮ್ಮ ಹಿರಿಯರು ಮಣ್ಣಿನ ಮಡಿಕೆ ಕುಡಿಕೆಗಳಲ್ಲಿ ಆಹಾರವನ್ನು ಬೇಯಿಸಿ ಊಟಮಾಡುತ್ತಿದ್ದರು. ನಂತರ ಕಂಚು, ಹಿತ್ತಾಳೆ ಪಾತ್ರೆಗಳಲ್ಲಿ (ಕಲಾಯಿಮಾಡಿದ) ಅಡುಗೆ ಮಾಡಲಾರಂಭಿಸಿದರು. (ಇಂದಿಗೂ ಹಿರಿಯರ ಮನೆಗಳಲ್ಲಿ ಒಂದೊಂದು ಈ ವಸ್ತುಗಳಿವೆ) ಇದಾದ ನಂತರ ಸಂಶೋಧನೆಯ ಫಲವಾಗಿ ಅಲ್ಯೂಮಿನಿಯಂ ಪಾತ್ರೆಗಳು ಅಡುಗೆಮನೆಯನ್ನು ಅಲಂಕರಿಸಿದವು. ಇದೀಗ ಇವುಗಳ ಸ್ಥಳವನ್ನು ಸ್ಟೀಲು, ಫೈಬರ್ ಪಾತ್ರೆಗಳು ಆಕ್ರಮಿಸಿಕೊಂಡಿವೆ. ಆದಾಗ್ಯೂ ಬಡವರ ಮನೆಯಲ್ಲಿ ಕಡಿಮೆದರದಲ್ಲಿ ದೊರೆಯುವ ಈ ವಸ್ತುಗಳಲ್ಲಿ ಇಂದಿಗೂ ಅಡುಗೆ ಮಾಡುವುದನ್ನು ಕಾಣುತ್ತೇವೆ. ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಇತರೆ ಕಾರಣಗಳಲ್ಲಿ ಈ ಅಲ್ಯೂಮಿನಿಯಂ ಪಾತ್ರೆಗಳನ್ನೇ ಅಡುಗೆಗೆ ಉಪಯೋಗಿಸಲಾಗುತ್ತದೆ. ಈ ಅಲ್ಯೂಮಿನಿಯಂ ಒಂದು ವಿಧದಲ್ಲಿ ‘ಬಡವರ ಬೆಳ್ಳಿ’ ಎಂದೇ ಹೇಳಬಹುದು. ಆದರೆ ಇತ್ತೀಚಿನ ಸಂಶೋಧನೆಗಳಿಂದ ಅಲ್ಯುಮಿನಿಯಂ ಪಾತ್ರೆಗಳಲ್ಲಿ ಅಡುಗೆ ಮಾಡಿ ಸೇವಿಸುವುದು ಆಪತ್ಕಾರಿ, ಎಂದು ದೃಢಪಟ್ಟಿದೆ. ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುತ್ತದೆಂದು ಸಂಶೋಧಕರು ಹೇಳುತ್ತಾರೆ.
ಈ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸಿದಾಗ ಲೋಹದ ಸ್ವಲ್ಪಾಂಶ ಕರಗಿ ಆಹಾರದ ಮೂಲಕ ನಮ್ಮ ದೇಹವನ್ನು ಸೇರುತ್ತದೆ. ಆಮ್ಲೀಯ ಆಹಾರವನ್ನು ಹೆಚ್ಚೆಚ್ಚು ಬೇಯಿಸಿ ಸೇವಿಸಿದಂತೆ ಇಲ್ಲವೇ ಅಲ್ಯೂಮಿನಿಯಂ ಪಾತ್ರೆ, ಡಬ್ಬಗಳಲ್ಲಿ ಸಂಗ್ರಹಿಸಿಟ್ಟು ಬಳಸಿದರೆ ಶರೀರದಲ್ಲಿ ಅದರ ಅಂಶ ಸೇರುವುದು ಹೆಚ್ಚು. ಹಾಗೆ ನೋಡಿದರೆ ಆಹಾರ, ನೀರು, ಹಣ್ಣು ತರಕಾರಿ, ಔಷಧ, ಶೃಂಗಾರ ಸಾಧನೆಗಳ ಮೂಲಕ ನಾವು ಅಲ್ಯೂಮಿನಿಯಂ ಅನ್ನು ಸ್ವೀಕರಿಸುತ್ತಲೇ ಇರುತ್ತವೆ. ಇತ್ತೀಚೆಗೆ ಈ ಬಗೆಗೆ ಸಂಶೋಧಿಸಿದ ವಿಜ್ಞಾನಿಗಳು ಅಲ್ಯೂಮಿನಿಯಂ ಬಳಕೆಯಿಂದ ಆಲ್ಜೈಮರನ ರೋಗವುಂಟು ಮಾಡುವಲ್ಲಿ ಇದು ಸಹಾಕಾರಿಯಾಗಿದೆ, ಇದೊಂದು ಮಿದುಳು ನಸಿಶಿಹೋಗುವ ರೋಗವಾಗಿದೆ. ಜತೆಗೆ ಮಿದುಳಿನ ನರಕೋಶಗಳನ್ನು ಅಪಾಯಕ್ಕೀಡು ಮಾಡುವ ಅಸ್ತ್ರ ಈ ಅಲ್ಯೂಮಿನಿಯಂ ಆಗಿದೆ. ಮಣ್ಣು ಮತ್ತು ನೀರಿನ ಜತೆಯಲ್ಲಿಯೇ ಕೆಲಸ ಮಾಡುವ ಜನಾಂಗಕ್ಕೆ ನರಸಂಚಾರದ ಕಾಯಿಲೆಗಳು ಕಾಣಿಸುತ್ತವೆ, ಏಕೆಂದರೆ ಈ ಮಣ್ಣು ನೀರಿನಲ್ಲಿ ಅಲ್ಯುಮಿನಿಯಂ ಹೆಚ್ಚಿನ ಮಟ್ಟದಲ್ಲಿ ಅಂತರ್ಗತವಾಗಿರುತ್ತದೆ. ಶಿಶುಗಳು ಅಲ್ಯುಮಿನಿಯಂನಿಂದಾಗುವ ಅಪಾಯಗಳಿಗೆ ಬೇಗನೇ ಗುರಿಯಾಗುತ್ತಾರೆ. ಅಲ್ಯೂಮಿನಿಯಂ ಪಾತ್ರೆ ಡಬ್ಬಿಗಳಲ್ಲಿ ಹಾಲಿನ ಪುಡಿಯನ್ನಿಟ್ಟು ಬಳೆಸುವುದನ್ನು ನಿಲ್ಲಿಸಬೇಕು. ಅಲ್ಯೂಮಿನಿಯಂ ಹೊಂದಿರುವ ಶೃಂಗಾರ ಸಾಧನಗಳ ಬಳಕೆ ತಪ್ಪಿಸಬೇಕು. ಮುಖಕ್ಕೆ ಬಳಿಯುವ ಕ್ರೀಮಿನಲ್ಲೂ ಅಲ್ಯೂಮಿನಿಯಂ ವಿಶೇಷವಾಗಿರುತ್ತದೆ. ಈ ವಸ್ತು ನಮ್ಮದೇಹಕ್ಕೆ ಅತ್ಯಗತ್ಯ ವಸ್ತು ಅಲ್ಲವೇ ಅಲ್ಲ.
ಅಲ್ಯೂಮಿನಿಯಂ ಪಾತ್ರೆಗಳನ್ನು ಬಳೆಸುವವರ ಬಗೆಗೆ ಪೌಷ್ಠಿಕ ಆಹಾರಗಳ ತಜ್ಞರು ಹೀಗೆ ಹೇಳುತ್ತಾರೆ
೧. ಅಲ್ಯೂಮಿನಿಯಂ ಪಾತ್ರೆಗಳನ್ನು ಬಳಸುವವರು ಅಡುಗೆ ಪಾತ್ರೆಗಳಿಗೆ ಲೇಪನಮಾಡಿರಬೇಕು.
೨. ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಬೇಯಿಸುವಾಗ ಅಧಿಕ ಜ್ವಾಲೆ ಉರಿಸಬಾರದು.
೩. ನೀರಿನ ಮೂಲದ ಆಹಾರ ಬೇಯಿಸುವಲ್ಲಿ ಅಪಾಯ ಕಡಿಮೆ ಇದೆ. ಸಾಧ್ಯವಿದ್ದಷ್ಟು ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಬೇಯಿಸುವಾಗ ಮರದ ಚಮಚೆ (Spoon) ಬಳಸಿ ಆಹಾರವನ್ನು ಕಲೆಸಬೇಕು.
೪. ಅಲ್ಯೂಮಿನಿಯಂ ಪಾತ್ರೆಯಲ್ಲಿ ಆಮ್ಲೀಯ ಆಹಾರಗಳನ್ನು (ಎಣ್ಣೆಪದಾರ್ಥಗಳನ್ನು) ಬೇಯಿಸಬಾರದು. ಉಪ್ಪು ಸಹ ಅಲ್ಯೂಮಿನಿಯಂ ಜೊತೆ ವಕ್ರವಾಗಿ ವರ್ತಿಸುತ್ತದೆ. ಆದ್ದರಿಂದ ಬೇಯಿಸಿದ ಆಹಾರಕ್ಕೆ ಉಪ್ಪು ಬೆರಸುವ ಮುನ್ನ ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗೆ ವರ್ಗಾಯಿಸಿಕೊಳ್ಳಬೇಕು.
೫. ಟೀ ಅಥವಾ ಕಾಫಿಗಳನ್ನು ಸಹ ಹೆಚ್ಚು ಕಾಲ ಅಲ್ಯೂಮಿನಿಯಂ ಪಾತ್ರೆಯಲ್ಲಿ ಬೇಯಿಸುವುದು ಅಪಾಯಕಾರಿಯಾಗಿದೆ.
*****