೧
ಬರು ನನ್ನ ಬಳಿಗೆ ಜೀಯಾ,
ಮೊರೆಯ ಕೇಳಿ
ಸುರಿಸು ನಲ್ಮೆಯ ಸುಧೆಯ !
ಸುರತರುವಿನಂದದಲಿ ಸುಜನರ
ಹಿರಿಯ ಕೊರತಗಳೆಲ್ಲ ಕಳೆಯುತ
ಪೊರೆವವರು ನೀನಲ್ಲದಲೆ ಯಾ-
ರಿರರು ಎಂದರಿತಿರುವೆ ರೇಯಾ !
ಬರು ನನ್ನ ಬಳಿಗೆ ಜೀಯಾ!
೨
ತಾಯಾವು ತೊಲಗಿರಲು-
ಕರುವು ಬಲು
ಬಾಯನು ಬಿಡುತಿರಲು,
ಮೇಯಲಡವಿಗೆ ಹೋದ ಹಸುವಿಗೆ
ಆಯೆಳೆಯ ಕರುವೊರಲುತಿಹ ನಸು
ಬಾಯಿ ಕೇಳಲು ಓಡಿ ಬರುತಲಿ
ನೇಯದೊಳು ಮೊಲೆಯುಣಿಸುವಂದದಿ
ಬರು ನನ್ನ ಬಳಿಗೆ ಜೀಯಾ!
೩
ಎಳೆಯನು ಬಿಸಿಲಿನಲಿ-
ತೊಳಲುತಿರೆ,
ಬಳಲಿ ಬಿದ್ದಡವಿಯಲಿ….
ತಳಮಳಿಸುವುದು ತಿಳಿಯೆ ತಾಯಿಯು
ಕಳವಳಿಸಿ ಕೈಗೆಲಸವುಳಿಯುತ-
ಗಳಿಲನೇಳುತ ತೆರಳಿ ಅಲ್ಲಿಗೆ
ಎಳೆಯನನು ಸಂತಯಿಸುವಂದದಿ
ಬರು ನನ್ನ ಬಳಿಗೆ ಜೀಯಾ !
೪
ದೂರದೂರಿಗೆ ಹೋಗಿಹ
ತೋಟಿಗನು ತಾ
ಸೇರಿ ಮರಳಿ ತೋಟವ-
ನೀರ ಕಾಣದೆ ಕೊರಗಿ ಬಾಡಿದ
ಮೋರೆಯಿಂದಿಹ ಎಳೆಯ ಬಾಳೆಯು
ತೋರಲೆದುರಿಗೆ ಮರುಗಿ ಬೇಗನೆ
ನೀರುಣ್ಣಿಸಿ ಪೊರೆಯುವಂದದಿ
ಬರು ನನ್ನ ಬಳಿಗೆ ಜೀಯಾ !
*****