ಶರಣೆಂಬೆವು ತಾಯಿ ಶರಣೆಂಬೆವು
ಶರಣಾಗತರಾಗಿಹೆವು ರಕ್ಷಿಸೆಮ್ಮನು
ಕರಮುಗಿದು ಬೇಡುವೆವು ವರವೊಂದನು ||
ಭುವನೇಶ್ವರಿಯೆ ತಾಯೆ ರಾಜ ರಾಜೇಶ್ವರಿಯೆ
ಕರುನಾಡ ತಾಯೆ ಕರುಣೆಯ ತೋರು
ಕರಮುಗಿದು ಬೇಡುವೆವು ವರವೊಂದನು ||
ನಿನ್ನ ಕರುಣೆಯೆ ನಮಗೆ ಶ್ರೀ ರಕ್ಷೆ
ನಿನ್ನೆದೆಯ ಭಾವವೆ ಅಭಯ ದೀಕ್ಷೆ
ನಿನ್ನ ಮಮತೆಯೆ ದಯಾದೀನವೂ
ಕರಮುಗಿದು ಬೇಡುವೆವು ವರವೊಂದನು
ಶರಣಾಗತರಾಗಿಹೆವು ರಕ್ಷಿಸೆಮ್ಮನು ||
ತಂಬಿಟ್ಟು ಹೋದಾವರೆ ನಿನಗರ್‍ಪಿಸಿ
ಕರ್‍ಪೂರದಾರತಿ ಮಾಡಿ ಮನದಿಂದೆ
ಭಕುತರ ಹರಸಿ ನೀ ಮನದಿಂದೆ
ಕರಮುಗಿದು ಬೇಡುವೆವು ವರವೊಂದನು
ಶರಣಾಗತರಾಗಿಹೆವು ರಕ್ಷಿಸೆಮ್ಮನು ||
ಬನಶಂಕರಿ ಮಹಾಮಾಯೆ ಮಾಹೇಶ್ವರಿ
ಜಗಧಾತ್ರೆ ರಕ್ಷಿಸಿ ಕರುಣೆ ತೋರು
ಶರಣಾಗತರಾಗಿಹೆವು ರಕ್ಷಿಸೆಮ್ಮನು ||
ಕಬ್ಬಿನ ಜಲ್ಲೆ ರಸದೌತಣ ನೈವೇದ್ಯ ನಿನಗರ್‍ಪಿಸಿ
ಮಲ್ಲೆ ಹೂಮಾಲೆ ಮುಡಿಪಾಗಿರಿಸಿ
ಜಗದಂಭಾ ಸ್ವರೂಪಿಣಿ ನಿನ್ನ ಲೀಲೆಯಲಿ
ಹೊನ್ನ ಹೂವುಗಳಾಗಿ ನಲಿವೆವು ನಿನ್ನ ಚರಣದಲಿ
ಕರ ಮುಗಿದು ಬೇಡುವೆವು ವರವೊಂದನು
ಶರಣಾಗಿಹೆವು ರಕ್ಷಿಸೆಮ್ಮನು ||
ಏಳೇಳು ಜನ್ಮಕೂ ನಿನ್ನ ಸೇವೆಯಲಿ
ಮುಡುಪಾಗಿರಿಸು ಎಮ್ಮನು ನಿನ್ನ ಮಣ್ಣಲಿ
ಚೈತನ್ಯವಾಗಿರಿಸಿ ಹರಸು ತಾಯೆ ಮಡಿಲ ಮಕ್ಕಳ
ಕರ ಮುಗಿದು ಬೇಡುವೆವು ಕರುಣೆಯಿಂದಲಿ
ನೀಡು ವರವೊಂದನು ||
*****