ಆಗಸದ ಕಡಲೊಡೆದು ಉಕ್ಕಿ ಹರಿಯುತಲಿಹುದು
ಲೋಕದೀ ಬೊಕ್ಕಸವ ತುಂಬುತಿಹುದು.
ಬೆಟ್ಟ ಗಿರಿ ತೂರೆ ತೋಡು ಕೆರೆ ಕುಂಟೆ ನದಿ ನದವು
ಬರುವ ಗಂಗೆಯ ಕರೆದು ಮನ್ನಿಸುವುವು.
ಆಗಸಕು ಭೂಮಿಗೂ ಬಾಂಧವ್ಯವನ್ನು ಬೆಳೆಸಿ
ಮಣ್ಣೊಳಿಹ ಸತ್ವಗಳ ತೆಗೆದು ಸೂಸಿ;
ಧನ್ಯರಾವ್ ಅಹಯೆಂದು ಕೆರೆನದಿಗಳುಕ್ಕೇರಿ
ಪಚ್ಚೆ ಪೈರುಗಳನ್ನು ತಗೆದು ತೋರಿ.
ಎಂಥೆಂಥ ರಸಮಿಹುದು ಈ ಭೂಮಿಯೊಳಗೆಂದು
ಎಳೆನೀರು ಸವಿಜೇನು ಕೊಳ್ಳಿ ಬಂದು
ಮಾಗಾಯಿ ನಾರಂಗ ರಸವಾಳೆ ದಾಳಿಂಬ
ನಗುನಗುತ ಬಳೆದಿಹವು ಮರದ ತುಂಬ
ಸ್ವರ್ಗಲೋಕದ ಸುರರೆ ಸವಿಯಿರಿದ ನೀವೆನುತ
ನೀಡಿಹಳು ನೆಲವೆಣ್ಣು ಲೋಕವಿದಿತ.
ಅಮರಲೋಕದ ವರ್ಷ ಮಣ್ಣಿನೊಳು ತಾನಿಳಿದು
ಒಳಗಿನೊಳಗಿನ ಸವಿಯ ಸೆಳೆಯುತಿಹುದು.
ಹನಿಹನಿಯು ಹರಳಾಗಿ ಸುರಿವನಿಯು ರಸವಾಗಿ
ನೆಲದೊಳಗೆ ಹೊನ್ನಾಗಿ ಹೊಳೆಯುತಿಹುದು
ಭಾರತಿಯು ನೀಡಿರುವ ವಜ್ರವಿಂದ್ರಂಗಾಯ್ತು
ವೃತ್ರನಂ ಕೊಲ್ಲುವೊಡೆ ಚಾಪಮಾಯ್ತು
ಎಮ್ಮ ಸಾಗರದೆರವು ಶಕ್ರನಾ ಮುಗಿಲೊಡ್ಡು
ಮತ್ತಲ್ಲಿ ಬೇರಿಹುದೆ ಸೌಖ್ಯದೊಡ್ಡು
ಇಲ್ಲಿಗಿಳಿವರು ಸರುವ ದೇವತೆಗಳಾದರದಿ
ಇಲ್ಲಿನೀ ಸವಿಯುಣಲು ಬಯಸಿ ಭರದಿ.
ನೆಲದ ವೀರರು ಹೋಗಿ ಸುರರ ಕಾಪಿಡಲಾಯ್ತು
ಇಂದಿನಾ ಇಂದ್ರಂಗೆ ರಾಜ್ಯಮಾಯ್ತು.
ಅಮರಲೋಕದ ಸುರರು ನರಲೋಕಕೆರವಿಗರು
ಅವರ ಹಂಗೆಮಗಿಲ್ಲ ನೋಡಿ ಸುರರು.
ಈ ರಸವು ಈ ನೀರು ಈ ಸುಖದ ಸವಿಯೂಟ
ನಮ್ಮ ಬಾಳಿಗೆ ಭೂಮಿಯಿತ್ತ ಮಾಟ.
ತುಂಬಲೀ ಧರೆಯೆಂದು ಗಗನ ವಿಶ್ವಾಸದಲಿ
ಇತ್ತ ಕಾಣಿಕ ಮಳೆಯು ನಿತ್ಯದಲ್ಲಿ.
*****