ಎಚ್ಚರಾದ ಎಷ್ಟೋ ಹೊತ್ತಿನ ಮೇಲೆ
ತೊಡೆಯಲ್ಲಿ ಜೀವಾಡುವ ಗೊಂಬೆ.
ಗಾಜಿನೆರಕ ಹೊಯ್ದು ತೆಗೆದದ್ದೋ?
ಸ್ಪಟಿಕದ್ದೋ? ಸ್ಪರ್ಶಕ್ಕೆ ನಿಲುಕದ ಬೆರಗು
ಇದೇನಿದು?
ಪಕ್ಕೆಗಳೆರಡಕ್ಕೆ ಅಂಟಿಕೊಂಡಂತೆ
ಕಂಡೂ ಕಾಣದಂತಾ ಎಳಸು ರೆಕ್ಕೆ?
ನೆತ್ತಿಯ ಮೇಲೆ ಕೂದಲೊಂದಿಗೇ
ಪುಕ್ಕದಂತಾ ಜುಟ್ಟು?
ಪಾದಕ್ಕೆ ಟಿಸಿಲೊಡೆದ ಸಣ್ಣ ಸಣ್ಣ ಬೇರು!
ಇದೇನು ಹಾರಲು ಕಾದಿರುವ ಹಕ್ಕಿಯೋ?
ಬೇರೂರಲು ಹವಣಿಸುತಿಹ ಮರವೋ?
ಮೊಲೆ ಹೀರಲು ಕಾದಿರುವ ಕಂದಮ್ಮನೋ?
ಇಲ್ಲ….
ಜೀವ ಬಿರಿಯಿತು ತಳ್ಳಂಕದಲ್ಲಿ.
ಎಲ್ಲಿದ್ದರೋ ಅವರು
ಪಕ್ಕೆಯ ಎಳೆ ರೆಕ್ಕೆ ಹರಿದು
ತಲೆಯ ಮೇಲಿನ ಪುಕ್ಕ ತರಿದು
ಪಾದಕ್ಕೆ ಬೆಳೆದ ಬೇರು ಮುರಿದು
ಈಗೆಲ್ಲಾ ಸರಿಯಾಯ್ತೆಂದು ಬೀಗಿದರು.
ಬೆತ್ತಲೆ ಮಗುವಾಗಿಹೋಯ್ತು!
ಅಯ್ಯೋ ಇದೇನು ಮಾಡಿದರವರು?
ಕೊಲೆಯೋ? ಜೀವದಾನವೋ?
*****