ಭಿಕ್ಷುಕಿ:-
ಬಿಕ್ಷಾಂದೇಹಿ! ಭಿಕ್ಷಾಂದೇಹಿ!
(ಅರಸನು ಬೀದಿಯಲ್ಲಿಯ ಇವಳನ್ನು ನೋಡಿ)
ಅರಸ:-
ಹಗಲಿರುಳು ಗಣಿಸದಲೆ, ಮಳೆಗಾಳಿಯೆಣಿಸದಲೆ
ಮನೆಮಾರು ನೆನೆಯದಲೆ, ಬಳಗವನು ಕೂಡದಲೆ
ಹರಕು ಸೀರೆಯನುಟ್ಟು, ಮಾಸಿದಾ ತಲೆಬಿಟ್ಟು
ಕರದಿ ಜೋಳಿಗೆ ತೊಟ್ಟು, ಕಣ್ಣೆರಡು ಒಳನಟ್ಟು
ಬೀದಿ ಬೀದಿಯ ಹಿಡಿದು, ಓಣಿ ಓಣಿಯ ಹಿಡಿದು
ಅಲೆದಲೆದು ತಿರುಗುತಿಹ ಭಿಕ್ಷುಕಿಯು ಆರಿವಳು?
ಅಲ್ಲಿಹಳು ನೋಡವಳ ಸೌಂದರ್ಯ ನೋಡು.
ಚೆಲ್ವರಿವ ಮೊಗ ನೋಡು, ಕುಡಿಹುಬ್ಬುಗಳ ನೋಡು;
ಕೆಂಪು ತುಟಿಗಳ ನೋಡು, ನಿಡಿಯ ನಾಸಿಕ ನೋಡು;
ಉದ್ದ ಹೆಳಲನು ನೋಡು, ಉಬ್ಬಿದೆದೆಯನು ನೋಡು;
ಸಣ್ಣ ನಡವನು ನೋಡು, ತೋಳ್ಗಳೆರಡನು ನೋಡು;
ತರುಣಿ ತಾನಾಗಿಹಳು, ಭಿಕ್ಷೆಯನ್ನು ಬೇಡುವಳು;
ಬೇಡಿದುದ ಕೊಡಲಿಹೆನು ರಾಣಿ ತಾನಾಗುವಳೇ?
ಸೇವಕನೆ, ಬಾರಿಲ್ಲಿ ಜವದಿಂದಬಾರೊ,
ಭಿಕ್ಷುಕಿಯ ಕರೆತಂದು ನಗೆಮೊಗವದೋರೊ!
(ಸೇವಕನು ಹೋಗಿ ಬೀದಿಯಲ್ಲಿಯ ಭಿಕ್ಷುಕಿಯನು ಕರೆತಂದು ಅರಸನೆದುರಿಗೆ ನಿಲ್ಲಿಸುವನು)
ಭಿಕ್ಷುಕಿ:-
ವಂದನೆಯು ಮಹರಾಜ ಭಿಕ್ಷುಕಿಯ ಕರೆಸಿದುದೆ?
ಅರಸ:-
ಅಹುದಹುದು ಭಿಕ್ಷುಕಿಯೆ ಭಿಕ್ಷೆಯನ್ನು ನೀಡಲಿದೆ.
ಅದಕಾಗಿ ಕರೆಸಿದುದು ಪೇಳುವಿಯಾ ಪೆಸರೇನು?
ಭಿಕ್ಷುಕಿ:-
ಭಿಕ್ಷೆಯನು ನೀಡಲ್ಕೆ ಪೆಸರನ್ನು ಕೇಳ್ದಪುದೆ?
ಅರಸ:-
ಇರಲಿರಲಿ ಭಿಕ್ಷುಕಿಯೆ ಪತಿದೇವನಿಹನೆ?
ಭಿಕ್ಷುಕಿ:-
ಪತಿದೇವನಿರ್ದೊಡೀ ಜೋಳಿಗೆಯಕಟ್ಟುವೆನೆ?
ಅರಸ:- ತಾಯ್ತಂದೆಗಳು ಜಗದಿ ಬಾಳಿಹರೆ ಭಿಕ್ಷುಕಿಯೆ?
ಭಿಕ್ಷುಕಿ:-
ಬಾಳಿಹರು, ಬಾಳಿಹರು ಬಾಳಿರ್ದು ನನಗೇನು?
ಜೋಳಿಗೆಯ ಕೊಟ್ಟಿಹರು, ತಿರಿದುಣಲು ಕಳಿಸಿಹರು.
ಅರಸ:-
ಬಿಸಿಲೊಳಗೆ ತಿರುತಿರುಗಿ ಬಾಡಿರುವಿ ಭಿಕ್ಷುಕಿಯೆ;
ಮಳೆಗಾಳಿಯೊಳು ಬಳಲಿ ಬೆಂದಿರುವಿ ಭಿಕ್ಷುಕಿಯೆ;
ಮಜ್ಜನವ ನೀಗೈದು ಭೋಜನವ ಸಲೆಗೈದು
ಜರದುಡುಪು ನೀತೊಟ್ಟು, ವಜ್ರದುಂಗುರವಿಟ್ಟು
ನನ್ನೆಡಕೆ ನೀ ತೋರು, ಎನಗಾನಂದವನೆ ಬೀರು.
ಭಿಕ್ಷುಕಿ:-
ನುಡಿಯದಿರಾಮಾತ ಬೇಡೆನಗೆ ಮಹರಾಜ.
ನೂರೆಂಟು ಮಡದಿಯರು ಗೋಳಿಡುತಲಿರುತಿಹರು
ಭಿಕ್ಷುಕಿಯ ಕರೆತಂದು ಬಂಧನದೊಳಿಡಲಿಹೆಯಾ?
ಬೇಡೆನಗೆ, ಬೇಡೆನಗೆ, ಬೇಡೆನಗೆ ಮಹರಾಜ.
ಸ್ವಾತಂತ್ರ್ಯ ಗುಡಿಸಲೊಳು ತೋಷದಿಂ ಸಾಯುವೆನು.
ಪರತಂತ್ರ ಬಾಳ್ವಿಕೆಯ ಅರಮನೆಯು ಬೇಡೆನಗೆ.
ನಾಕೇಳ್ವ ಭಿಕ್ಷೆಯನು ನೀನರಿಯೆ ಮಹರಾಜ.
ಪೋಗಗೊಡು ಪೋಗಗೊಡು ವಂದಿಸುವೆ ಶಿರಬಾಗಿ.
ಅರಸ:-
ಬೇಡಿದುದ ಕೊಡಲಿಹೆನು ದಿಟವಾಗಿ ಭಿಕ್ಷುಕಿಯೆ;
ರಾಜ್ಯವನು ನಿನಗೀವೆ ಕೇಳೆನ್ನ ಭಿಕ್ಷುಕಿಯೆ.
ಭಿಕುಕಿ:-
ಆಗದಾಗದು ಪ್ರಭುವೆ ಬೇಡೆನಗೆ ರಾಜ್ಯವದು.
ಐಶ್ವರ್ಯನಾನೊಲ್ಲೆ. ಪೌತ್ರಸಂಪದವಿರಲಿ,
ದಾಸಿಯರು ಬಹಳಿರಲಿ, ಸೇವಕರ ಬಲವಿರಲಿ,
ವಜ್ರಮಾಣಿಕವಿರಲಿ, ಛತ್ರಚಾಮರವಿರಲಿ
ಕಾಲಾಳುಗಳು ಇರಲಿ, ತುರಗ ಗಜ ಭಟರಿರಲಿ
ಬೇಡೆನಗೆ, ಬೇಡೆನಗೆ ಒಡಬಡೆನು ಮಹರಾಜ.
ನಾಕೇಳ್ವ ಭಿಕ್ಷೆಯನು ಭೂಪಾಲ ಕೊಡಲರಿಯ.
ಪ್ರೇಮ ಭಿಕ್ಷೆಯು ಬೇಕು ಭೂಪತಿಯೆ ನೀಡುವಿಯಾ?
ಅರಸ:-
ಆನಂದವೆನಗಾಯ್ತು, ಸಿದ್ದನಿಹೆ, ಸಿದ್ದನಿಹೆ.
ಅಪ್ಪುವೆನು ಬಾ! ಬಾ! ಬೇಗದಲಿ ಬಾ! ಬಾ!
ಭಿಕ್ಷುಕಿ:
ಜರದುಡುಪು ತೊಟ್ಟಿಹಿರಿ ಭಂಗಾರವಿಟ್ಟಿಹಿರಿ.
ಬೆಳ್ಳಿ ತಲೆಬುರುಡಿ ನಿಲದೆ ಚಲಿಸುತಿದೆ.
ಮೊಗವೆಲ್ಲ ಬತ್ತಿಹುದು ದೇಹವದು ಬಾಗಿಹುದು.
ಬಚ್ಚಬಾಯನು ತೆರೆದು ಊರಗೋಲನು ಪಿಡಿದು
ಭಿಕ್ಷೆಯನ್ನು ನೀಡಲಿದೆ ಸ್ವೀಕರಿಸಿರುವೆನೆ?
ರಾಟಿಯನು ತಿರುವುತಿಹ, ಖಾದಿಯನು ಧರಿಸುತಿಹ
ನಾರಿಯರನುದ್ಧರಿಪ, ಹಳ್ಳಿಗರನುದ್ಧರಿಪ
ಸ್ವಾತಂತ್ರ್ಯ ಸಮರದಲಿ ಹೋರಾಡಿ ಸಾಯಲಿಹ
ಭಿಕ್ಷುಕಿಯ ಭಿಕ್ಷೆಯನು ಪ್ರೇಮದಿಂ ಬೇಡಲಿಹ
ಯುವಕ ಭಿಕ್ಷುಕನ ಭಿಕ್ಷೆಯಂ ಬೇಡಲಿಹೆ.
ಮಾತಾಡು, ಮಾತಾಡು ನೀಡುವಿಯಾ ಭೂಪಾಲ?
ಅರಸ:-
ವಿಧವೆ ನೀನಾಗಿರುವೆ ತರುಣನಂ ಬಯಸುವುದೆ?
ಭಿಕ್ಷುಕಿ:-
ಆಗದೇತಕೆ ಪ್ರಭುವೆ,
ವಿಧುರನಾಗಲಿ ಪುರುಷ, ಆಗದಿರಲವನು,
ಒಂದಲ್ಲ ಎರಡಲ್ಲ ನೂರೆಂಟು ಸ್ತ್ರೀಯರಂ
ಕೈಪಿಡಿದು ಆಳಕ್ಕೆ ಹಕ್ಕುಂಟು; ವಿಧಿಯುಂಟು.
ವಿಧಿವಶದಿ ತಾನೊಮ್ಮೆ ವಿಧವೆಯಾಗಲು ನಾರಿ
ಕೇಶಗಳ ತೆಗೆದಿಟ್ಟು, ಕೆಂಪುಬಟ್ಟೆಯನುಟ್ಟು,
ಕೆರೆಗಳಲಿ ಹೊಳೆಗಳಲಿ ತಣ್ಣೀರ ಮುಳುಮುಳುಗಿ
ಕಷ್ಟದಲಿ, ತಾಪದಲಿ ಜೀವನವ ನಡಿಸಲ್ಕೆ
ಎಲ್ಲೆಲ್ಲು ಸ್ತ್ರೀಯರಿಗೆ ಹಕ್ಕುಂಟು, ವಿಧಿಯುಂಟು.
ಅದುನೋಡು ಮಹರಾಜ ಕಣ್ದೆರೆದುನೋಡು.
ವೇಶ್ಯಯರ ಬಳಗದಾ ಜೀವನವ ನೋಡು.
ಶಿಶುಹತ್ಯೆಯನ್ನು ನೋಡು; ಆತ್ಮಹತ್ಯೆಯ ನೋಡು.
ಕೆರೆಗಳಲಿ, ಹೊಳೆಗಳಲಿ, ಧುಮುಕುತಲಿ, ಮಡಿಯುತಲಿ
ತೇಲುತಿಹ ವಿಧವೆಯರ ಶವಗಳನು ನೋಡು.
ವಿಧವೆಯರ ಜೀವನವು ವಿಪರೀತ ಜೀವನವೆ?
ಎಲ್ಲಿಯದು ಈ ನ್ಯಾಯ, ಪುರುಷರೀ ಅನ್ಯಾಯ!
ಕುರುಡನಾಗಿಹ ಪುರುಷ, ಮಲಗಿಹನು ಆ ದೇವ.
ಎಚ್ಚರಾಗೆಲೆ ದೇವ ವಿಧವೆಯರನುದ್ದರಿಸು.
ಪುರುಷರಿಗೆ ದಯೆಯಿಲ್ಲ, ಕನಿಕರವು ಎನಿತಿಲ್ಲ.
ಮುಕ್ಕಣ್ಣ ಕೊಡುನಿನ್ನ ಮೂರನೆಯ ಉರಿಗಣ್ಣ,
ಸುಟ್ಟು ಹಾಕುವೆನಾನು; ಸಿಡಿದುಸಾಯಲಿಪುರುಷ.
ಮಹದೇವಿ ಕೊಡುನಿನ್ನ ಕರದಲಿಹಖಡ್ಗವನು
ಕಡಿಕಡಿದು ಚೆಲ್ಲುವೆನು; ತುಂಡರಿಸಿ ಕೊಲ್ಲುವೆನು.
ಶ್ರೀಕೃಷ್ಣ ಕೊಡು ನಿನ್ನ ಬೆರಳಲಿಹ ಚಕ್ರವನು
ರುಂಡಗಳ ಚಂಡಾಡಿ ಸಂಹರಿಪೆ ಪುರುಷರನು.
ಮೌನವೇತಕೆ ದೇವ? ಕನಿಕರವು ನಿನಗಿಲ್ಲೆ?
ದುರ್ದೈವವೆನಗಿನ್ನು ಗತಿಯಿಲ್ಲ, ವಿಧಿಯಿಲ್ಲ.
ಇದುನೋಡು ಭೂಪಾಲ ಕಣ್ದೆರೆದು ನೋಡು.
ಮಹಿಳೆಯರ ಮಾನಿನಿಯು, ವಿಧವೆಯರಿಗಾಧಾರ
ಇರಿದುಕೊಳ್ಳುವೆನೋಡು, ನೆತ್ತರವ ನೀ ನೋಡು.
ನೆತ್ತರನ ಕಾರುತಲಿ ಸತ್ತು ಹೋಗಲಿ ಪುರುಷ.
ಆದುನೋಡು ಯಮಧರ್ಮ, ಯಮರಾಜ ಬರುತಿಹನು.
ಬಾ, ಯಮನೆ, ಯಮರಾಜ, ನರಕಕೆಳೆಯಲು ಬಂದೆ?
ಪುರುಷರನ್ಯಾಯವನ್ನು ತಡೆಯದಲೆ ಮಡಿಯಲಿಹೆ
ವಿಧವೆ ಭಿಕ್ಷುಕಿಯ ನರಕಕೆಳೆದೊಯ್ವೆಯಾ?
ಪುರುಷನೈ ಯಮನೀನು, ಪಕ್ಷಪಾತಿಯು ನೀನು.
ಇರಲಿರಲಿ ಸರಿಯತ್ತ, ಹಿಂತಿರುಗಿ ಪೋಗತ್ತ.
ಸ್ವರ್ಗವನ್ನು ಸೇರುವೆನು: ಶಿವನಡಿಯಾಣುವೆನು
ಪೋಗುವೆನು ಪೋಗುವೆನು ವಂದನೆಯು ಮಹರಾಜ
ಕೆಳದಿಯೆಲೆ ಕೂಡೆನ್ನ ಹೃದಯ ….
(ಆರಸು ಪುತ್ರನು ಒಮ್ಮೆಲೆ ಪ್ರವೇಶಿಸಿ ಅವಳ ಕೈಹಿಡಿದು)
ಅ. ಪುತ್ರ:-
ಏನಿದೀ ಭಿಕ್ಷುಕಿಯ ಭೀಷಣವು ಪಿತನೆ?
ಅರಸ:- ಪ್ರೇಮಭಿಕ್ಷೆಯಬೇಡಿ ಮಡಿಯಲ್ಕೆ ನಿಂದಿಹಳು.
ಅ. ಪುತ್ರ:-
ವಜ್ರ ಹೃದಯದ ಪಿತನೆ ಸಾಕಿನ್ನು ಅನ್ಯಾಯ!
ಭಿಕ್ಷುಕಿಯೆ, ಸಿದ್ದನಿಹೆ ಅಭಯವನು ನಾನೀವೆ.
ನಾರಿಯರ, ವಿಧವೆಯರ ಉದ್ಧಾರವನುಗೈದು
ಜೀವನವ ಪಾವನವಗೊಳಿಸಲ್ಕೆ ಸಿದ್ಧನಿಹೆ.
(ಅರಸುಪುತ್ರ-ಭಿಕ್ಷುಕಿಯರ ವಿವಾಹ ಜರಗುವದು.)
*****