ಮಳೆ ಸುರಿದು ಎಲೆಗಳಿಂದ ಹನಿಹನಿ
ನಿನ್ನ ನೆನಪಿನ ಬಾಷ್ಪ. ಈ ತಿಳಿ ಸಂಜೆ
ಆಲಿಸುತ್ತಿದೆ ಹಕ್ಕಿ ಇಳಿ ಹೊತ್ತಿನ ಹಾಡು.
ಹೂವರಳಿ ಸುವಾಸನೆಯ ಗಾಳಿ ಬೀಸು.
ದೇವರ ಮನೆಯಲ್ಲಿ ನಂದಾದೀಪದ ಬೆಳಕು.
ಹನಿಯುವ ಆಳ ನಿರಾಳದ ಸಿಂಚನಕೆ
ಅವನ ಮೃದು ಸ್ಪರ್ಶ ಸೋಕಿ ಒದ್ದೆಯಾದ ಮನ.
ಮನೆಯ ಅಂಗಳದ ತುಂಬ ಮುರಿದುಬಿದ್ದ,
ಆಕಾಶದ ನೀಲಿ ಕವಿತೆಗಳ ಮೌನಯಾನ.
ತಂಪಾದ ಬಯಲಲಿ ಮೂಡಿದ ಹೆಜ್ಜೆ ಗುರುತುಗಳು.
ಪುಟ್ಟ ಮಳೆಯ ಜಾರುಬಂಡಿಯಲಿ ಮಕ್ಕಳು,
ಜಗದ ಹಾದಿ ತುಂಬ ತಣ್ಣಗೆ ಉರಿಯುವ ಬೆಳಕು,
ಬೇರಿಗಂಟಿದ ಮಣ್ಣವಾಸನೆ ಎದೆಯೊಳಕೆ ಇಳಿದು,
ಅಂವ ಬರುವ ದಾರಿತುಂಬ ತಂಪು ಸುಹಾಸನೆ.
ದಾರಿ ತೋರಿಸಿದ ಅರಳಿ ಎಲೆ ತುಂಬ ತೊಟ್ಟಿಕ್ಕಿದ ಧ್ಯಾನ.
ಜೋರು ಗಾಳಿಗೆ ಉದುರಿದ ಎಲೆ ತೇಲಿ ತೇಲಿ,
ಅವಳ ಕಣ್ಣುಗಳಲಿ ಅರಳಿವೆ ತುಂಬ ಕನಸು,
ಇಳಿಜಾರಿನಲಿ ಮಳೆ ನೀರು ಹರಿದು ತುಂಬಿ ತೋಡಿ,
ಭತ್ತದ ಸಸಿಗುಂಟ ಇಳಿದ ಜೀವ ಜಲ ಹಣತೆ,
ಇಂಗಿದ ತೇವದಲಿ ತೋಯ್ಯುತಿದೆ ಒಂದು ನಕ್ಷತ್ರ.
*****