ಯಾಕಮ್ಮ ಈ ಕೋಪ, ಈ ರೋಷ,
ಇಷ್ಟೊಂದು ಆವೇಶ ಅವರ ಮೇಲೆ?
ಬೆಳೆಯ ಗೊಡಲಿಲ್ಲವೇ ಅವರು ನಮ್ಮ-
ನಾವಿಂದು ಇರುವ ಹಾಗೆ?
ಇರಲಿಲ್ಲವೇ ಲಕ್ಷ್ಮೀಬಾಯಿ ನಮ್ಮ ನಿಮ್ಮ ಹಾಗೆ
ಬೆಳೆಯಲಿಲ್ಲವೇ ಅವಳು ದೇಶಕ್ಕಾಗಿ ಜೀವತೆತ್ತು
ಝಾನ್ಸಿರಾಣಿ ಲಕ್ಷ್ಮೀಬಾಯಿಯಾಗಿ
ನಮಗಿಂತ ಭಿನ್ನವಾಗಿ?
ಇರಲಿಲ್ಲವೇ ಮಹಾದೇವಿ ನಮ್ಮ ನಿಮ್ಮ ಹಾಗೆ
ಬೆಳಯಲಿಲ್ಲವೇ ಅವಳು ಕಟ್ಟಿಕೊಂಡವನ ಬಿಟ್ಟು
ಉಳ್ಳಾಲದ ಉಕ್ಕಿನ ರಾಣಿಯಾಗಿ
ನಮಗಿಂತ ಭಿನ್ನವಾಗಿ?
ಇರಲಿಲ್ಲವೇ ಮಹಾದೇವಿ ನಮ್ಮ ನಿಮ್ಮ ಹಾಗೆ
ಬೆಳೆಯಲಿಲ್ಲವೇ ಅವಳು ಕಟ್ಟಿಕೊಂಡವನ ತೊರೆದು
ಅಕ್ಕ ಮಹಾದೇವಿಯಾಗಿ
ನಮಗಿಂತ ಭಿನ್ನವಾಗಿ?
ಇರಲಿಲ್ಲವೇ ಇಂದಿರಾ ನಮ್ಮ ನಿಮ್ಮ ಹಾಗೆ
ಬೆಳೆಯಲಿಲ್ಲವೇ ಅವಳು ಗಂಡಸರಲ್ಲಿ ಗಂಡಸಾಗಿ
ಯುಗಕ್ಕೊಬ್ಬಳೇ ರಾಜಕಾರಣಿಯಾಗಿ
ನಮಗಿಂತ ಭಿನ್ನವಾಗಿ?
ಬೆಳೆಯಲಿಲ್ಲವೇ ಇವರೆಲ್ಲ
ನಮ್ಮ ಹಾಗಿದ್ದೂ ನಮಗಿಂತ ಭಿನ್ನವಾಗಿ
ಹೆಣ್ಣಾಗಿದ್ದೂ ಗಂಡಿನಂತಾಗಿ
ಚರಿತ್ರೆಯ ಪುಟಗಳಲ್ಲಿ ದಾಖಲಾಗಿ?
ಮತ್ತೇಕೆ ಈ ಕೋಪ, ಈ ರೋಷ,
ಇಷ್ಟೊಂದು ಆವೇಶ ಅವರ ಮೇಲೆ,
ಬೆಳೆಯ ಗೊಡಲಿಲ್ಲವೇ ಅವರು, ನಮ್
ನಾವಿಂದು ಇರುವಹಾಗೆ?
ಗರ್ಭದೊಳಗೆ ಆಗ ತಾನೇ ಮೊಳಕೆಯೊಡೆದ
ಕುಡಿ ಹೆಣ್ಣೆಂದು ಭ್ರೂಣ ಹತ್ಯೆಗೆ ಒಪ್ಪುವವರು ನಾವು;
ಹೆತ್ತ ಮಗು ಹೆಣ್ಣೆಂದು ಜರಿಯುವವರು ನಾವು;
ಬಂದ ಹೆಣ್ಣು ವರದಕ್ಷಿಣೆ ತರಲಿಲ್ಲವೆಂದು
ಸುಟ್ಟು ಹಾಕಲು ಸಹಕರಿಸುವವರು ನಾವು;
ಒಂಟಿ ಹೆಣ್ಣು ತನಗಾಗಿ ಬದುಕುತ್ತಿರುವಾಗ
ಅವಳ ಚಾರಿತ್ರ್ಯ ವಧೆ ಮಾಡುವವರು ನಾವು;
ಜಾಹೀರಾತಿಗೆಂದು ಮೈ ಚಳಿ ಬಿಟ್ಟು
ಎಲ್ಲ ತೆರೆದು ಬರಿದಾಗಿ ನಿಲ್ಲುವವರು ನಾವು;
ಬೆಳೆಯ ಗೊಡಲಿಲ್ಲವೇ ಅವರು, ನಮ್ಮ
ನಮಗೆ ಬೇಕೆನಿಸಿದ ಹಾಗೆ?
ಈಗ ಯಾಕಮ್ಮ ಈ ಕೋಪ, ಈ ರೋಷ,
ಇಷ್ಟೊಂದು ಆವೇಶ ಅವರ ಮೇಲೆ
ಬೆಳೆಯಗೊಡಲಿಲ್ಲವೇ ಅವರು, ನಮ್ಮ-
ನಾವಿಂದು ಇರುವ ಹಾಗೆ?
ನಾವೇಕೆ ನಮ್ಮತನವ ಕಾಯ್ದು ಕೊಳ್ಳಲಿಲ್ಲ?
ನಾವೇಕೆ ನಮ್ಮ ಶೋಷಿಸುವವರ ಪ್ರತಿಭಟಿಸಲಿಲ್ಲ?
*****