ಒತ್ತಿಬಹ ಕಷ್ಟಗಳನೆಲ್ಲ ಹಿಂದಿಕ್ಕೆಂದು
ಸೌಖ್ಯಸಾಗರದಲ್ಲಿ ಮೀಯಿಸೆಂದು
ಬೇಡಿಕೊಳ್ಳುವದಿಲ್ಲ ಎದುರಿಸುವ ಧೈರ್ಯವನು
ನೀಡೆಂದು ಬೇಡುವೆನು ಕರುಣಸಿಂಧು
ನೋವುಗಳ ಮುಳ್ಳುಗಳು ಎದೆಗೆ ಚುಚ್ಚುತಲಿರಲು
ತೆಗೆಯೆಂದು ಬೇಡುವೆನೆ ಓ ಅನಂತ
ತಡೆದುಕೊಳ್ಳುವ ಕಸುವ ನನ್ನ ಹೃದಯಕೆ ನೀಡು
ಮತ್ತೇನು ಬೇಕೆನಗೆ ಮೈಮೆವಂತ?
ಬಾಳ ಕೋಲಾಹಲದಿ ಹೆರರ ತೋಳಾಸರಕೆ
ಬಾಯಿತೆರೆಯುವಹಾಗೆ ಮಾಡಬೇಡ
ನನ್ನ ಸಾಮರ್ಥ್ಯವನ್ನು ನಂಬಿ ಮುಂದರಿಯುವಾ
ಆತ್ಮವಿಶ್ವಾಸವನ್ನು ನನಗೆ ನೀಡ
“ಉಳಿಸು ಉಳಿಸೈ” ನನ್ನ ಎಂಬ ಕನವರಿಕೆಯಲಿ
ಮುಳುಗದಿರಲೈ ದೀನವಾಗಿ ಬಾಸೆ
ಗೆಲ್ಲುವೆನು ನನ್ನಾತ್ಮ ಸ್ವಾತಂತ್ರವನು ಎಂದು
ತಾಳ್ಮೆಯಿಂದಲಿ ದುಡಿಯುತಿರಲಿ ಆಸೆ
ದಿವ್ಯವಾಗಿಹ ನಿನ್ನ ಕಾರುಣ್ಯದನುಭೂತಿ
ಓ ತಂದೆ ಗೆಲುವಿನಲ್ಲಿ ಮಾತ್ರ ಸಾಕೆ?
ಮಾಡದಿರು ಹೇಡಿಯನು! ನಿನ್ನ ಕರುಣೆಯ ಸುಖವು
ಸೋಲಿನಲ್ಲಿಯು ಕೂಡ ಬೇಡ ಯಾಕೆ?
*****