ಅಪಪ್ರಚಾರ
ಆ ದಿನವೇ ರಂಗಣ್ಣ ತಿಪ್ಪೇನಹಳ್ಳಿಯ ಮೇಷ್ಟರ ಮತ್ತು ಸೀತಮ್ಮನ ಅರ್‍ಜಿಗಳನ್ನು ತಕ್ಕ ಶಿಫಾರಸುಗಳೊಂದಿಗೆ ಸಾಹೇಬರಿಗೆ ಕಳಿಸಿಬಿಟ್ಟನು. ಜೊತೆಗೆ ಒಂದು ಖಾಸಗಿ ಕಾಗದವನ್ನು ಅವರಿಗೆ ಬರೆದು ಈಗ ಹಾಕಿರುವ ಜುಲ್ಮಾನೆಗಳಿಂದ ತನ್ನ ಮನಸ್ಸು ಬಹಳವಾಗಿ ನೊಂದಿರುವುದೆಂದೂ, ದಯವಿಟ್ಟು ಅವುಗಳನ್ನು ವಜಾ ಮಾಡಬೇಕೆಂದೂ ಕೇಳಿಕೊಂಡಿದ್ದನು. ಯಾವ ದಿನ ಆ ಕಾಗದಗಳು ಸಾಹೇಬರ ಕಚೇರಿಗೆ ಹೋದುವೋ ಆ ದಿನವೇ ಸಾಹೇಬರು ಹೊಸಬರಿಗೆ ಅಧಿಕಾರ ವಹಿಸಿಕೊಡುವ ದಿನವಾಗಿತ್ತು. ಆ ದಿನ ಕಚೇರಿಯಲ್ಲಿ ಎಂದೂ ಇಲ್ಲದಿದ್ದ ತರಾತುರಿಗಳು ; ಹೊಸಬರಿಗೆ ಬಿಡದೆ ತಾವೇ ಆರ್‍ಡರುಗಳನ್ನು ಮಾಡುವ ಮತ್ತು ಆರ್ಡರ್ ಆದ ಕಾಗದಗಳನ್ನು ಬೇಗ ಬೇಗ ರುಜು ಮಾಡುವ ಸಂಭ್ರಮ ; ಅಹವಾಲುಗಳನ್ನು ಹೇಳಿಕೊಳ್ಳುವ ಮೇಷ್ಟರುಗಳ ಮತ್ತು ಗುಮಾಸ್ತೆಯರ ಪರದಾಟ ; ಹಳಬರನ್ನು ಬೀಳ್ಕೊಡುವುದು, ಹೊಸಬರನ್ನು ಸ್ವಾಗತಿಸುವುದು – ಇವಕ್ಕೆ ಬೇಕಾದ ಒಂದು ಸಮಾರಂಭದ ಏರ್‍ಪಾಟು. ಈ ಗಲಭೆಗಳಲ್ಲಿ ಸಾಮಾನ್ಯ ಕಾಗದಗಳು ಅಸಿಸ್ಟೆಂಟರ ಮೇಜಿನ ಮೇಲೆಯೇ ಕೊಳೆಯುತ್ತಿರುವುದು ವಾಡಿಕೆ. ರಂಗಣ್ಣ ಕಳಿಸಿದ ಶಿಫಾರಸಿನ ಕಾಗದಗಳೂ ಹೀಗೆಯೇ ಕೊಳೆಯಬೇಕಾಗಿದ್ದುವು. ಆದರೆ ರಂಗಣ್ಣ ಸಾಹೇಬರಿಗೆ ಬರೆದಿದ್ದ ಖಾಸಗಿ ಕಾಗದ ಅವರ ಕೈಗೆ ನೇರವಾಗಿ ಹೋಯಿತು. ಅವರು ಅದನ್ನು ಓದಿಕೊಂಡು ಕೂಡಲೇ ಆ ಶಿಫಾರಸು ಕಾಗದಗಳನ್ನು ತರುವಂತೆ ಅಸಿಸ್ಟೆಂಟರಿಗೆ ಹೇಳಿದರು. ಅಸಿಸ್ಟೆಂಟರು ಕಷ್ಟ ಪಟ್ಟು ಹುಡುಕಿ ತೆಗೆದುಕೊಂಡು ಹೋಗಿ ಸಾಹೇಬರ ಕೈಗೆ ಕೊಟ್ಟರು. ಆಗ ಸಾಹೇಬರು, ‘ಹಾಕಿದ ಜುಲ್ಮಾನೆಯನ್ನು ನಾನು ವಜಾ ಮಾಡಿದ್ದು ಇದುವರೆಗೂ ಇಲ್ಲ. ಆದರೆ ರಂಗಣ್ಣನವರು ಶಿಫಾರಸು ಮಾಡಿದ್ದಾರೆ. ಈ ಬಾರಿಗೆ ವಜಾ ಮಾಡುತ್ತೇನೆ. ಆತ ರೇಂಜನ್ನು ಚೆನ್ನಾಗಿಟ್ಟು ಕೊಂಡಿದ್ದಾನೆ! ಜೊತೆಗೆ ಆತನಲ್ಲಿ ಒಳ್ಳೆಯ ಸಭ್ಯ ಗುಣಗಳಿವೆ!’ ಎಂದು ಹೇಳುತ್ತಾ, ‘ಜುಲ್ಮಾನೆಗಳನ್ನು ಈ ಬಾರಿಗೆ ವಜಾ ಮಾಡಿದೆ’ ಎಂದು ಆರ್‍ಡರು ಮಾಡಿದರು. ಕೂಡಲೇ ಇದನ್ನು ಟೈಪು ಮಾಡಿಸಿ ತನ್ನಿ, ಈಗಲೇ ಇದನ್ನು ಕಳಿಸಿಬಿಡಬೇಕು’ ಎಂದು ಅಸಿಸ್ಟೆಂಟರಿಗೆ ಹುಕುಂ ಮಾಡಿದರು. ಅದರಂತೆ ಸಾಹೇಬರು ತಮ್ಮ ಅಧಿಕಾರದಲ್ಲಿದ್ದಾಗಲೇ ಜುಲ್ಮಾನೆಗಳನ್ನು ವಜಾ ಮಾಡಿ, ಆ ಆರ್ಡರುಗಳನ್ನು ರಂಗಣ್ಣನಿಗೆ ಕಳಿಸಿಬಿಟ್ಟರು.
ತನ್ನ ಶಿಫಾರಸುಗಳು ಸಫಲವಾಗಿ ಜುಲ್ಮಾನೆಗಳು ವಜಾ ಆದುದನ್ನ ಕಂಡು ರಂಗಣ್ಣನಿಗೆ ಬಹಳ ಸಂತೋಷವಾಯಿತು. ಮೇಷ್ಟರುಗಳಿಗೆ ಆಗಿದ್ದ ಅನ್ಯಾಯಗಳು ಈಗ ಪರಿಹಾರವಾದುವಲ್ಲ ಎಂಬುದೊಂದು ಕಾರಣ. ತನ್ನ ಮಾತಿಗೆ ಸಾಹೇಬರು ಬೆಲೆ ಕೊಟ್ಟರಲ್ಲ ಎಂಬುದು ಮತ್ತೊಂದು ಕಾರಣ. ಸಾಹೇಬರು ತಾನು ಮೊದಲು ಭಾವಿಸಿದ್ದಷ್ಟು ನಿರ್‍ದಯರೂ ಅವಿವೇಕಿಗಳೂ ಅಲ್ಲ; ದರ್ಪದಮೇಲೆ ಆಡಳಿತ ನಡೆಸಬೇಕೆಂಬ ಮನೋ ಭಾವದವರು ಇರಬಹುದು – ಎಂದು ತನ್ನ ಅಭಿಪ್ರಾಯವನ್ನು ಬದಲಾಯಿಸಿಕೊಂಡನು. ಈ ಆರ್ಡರುಗಳ ವಿಚಾರವನ್ನು ತನ್ನ ಹೆಂಡತಿಗೆ ತಿಳಿಸಿದಾಗ ಆಕೆ, ‘ನಿಮ್ಮ ಸಾಹೇಬರಿಗೆ ಅವರ ಹೆಂಡತಿ ವಿವೇಕ ಹೇಳಿರಬೇಕೆಂದು ತೋರುತ್ತದೆ ! ಹೇಗಾದರೂ ಆಗಲಿ, ಜುಲ್ಮಾನೆಗಳು ವಜಾ ಆದುವಲ್ಲ, ನನಗೂ ಬಹಳ ಸಂತೋಷ’ ಎಂದು ಹೇಳಿದಳು.
ಆ ಹೊತ್ತಿಗೆ ಆವಲಹಳ್ಳಿಯ ದೊಡ್ಡ ಬೋರೇಗೌಡರು ರಂಗಣ್ಣನನ್ನು ನೋಡಲು ಮನೆಗೆ ಬಂದರು. ರಂಗಣ್ಣ ತನ್ನ ಹೆಂಡತಿಗೆ, ‘ಗೌಡರು ಅಪರೂಪವಾಗಿ ನಮ್ಮ ಮನೆಗೆ ಬಂದಿದ್ದಾರೆ. ಕಾಫಿ ತಿಂಡಿ ಏನಾದರೂ ಸರಬರಾಜು ಮಾಡು, ನೋಡೋಣ’ ಎಂದು ಹೇಳಿ, ಕೊಟಡಿಯಿಂದ ಎದ್ದು ಬಂದು ಗೌಡರನ್ನು ಸ್ವಾಗತಿಸಿದನು. ಕೊಟಡಿಯಲ್ಲಿ ಇಬ್ಬರೂ ಕುಳಿತುಕೊಂಡರು.
‘ಏನು ಸ್ವಾಮಿ! ತಮ್ಮ ಹೆಸರು ಎಲ್ಲ ಕಡೆಗಳಲ್ಲೂ ಬಹಳ ಪ್ರಖ್ಯಾತವಾಗಿದೆಯಲ್ಲ!’ ಎಂದು ನಗುತ್ತಾ ಗೌಡರು ಹೇಳಿದರು.
‘ತಮ್ಮಂಥ ಹಿತಚಿಂತಕರೂ ಆಪ್ತರೂ ನನ್ನ ಬೆಂಬಲಕ್ಕಿರುವಾಗ ಹೆಸರು ಪ್ರಖ್ಯಾತಿಗೆ ಬಾರದೆ ಏನಾಗುತ್ತದೆ?’ ಎಂದು ರಂಗಣ್ಣನೂ ನಗುತ್ತಾ ಉತ್ತರಕೊಟ್ಟನು.
‘ನನ್ನಿಂದ ತಮಗೇನೂ ಸಹಾಯವಾಗಿಲ್ಲ ಸ್ವಾಮಿ! ಮೊನ್ನೆ ಬೆಂಗಳೂರಿಗೆ ಹೋಗಿದ್ದೆ. ಅಠಾರಾ ಕಚೇರಿಯಲ್ಲಿ ಕೆಲಸವಿತ್ತು. ದಿವಾನರು ನಮ್ಮ ತಾಲ್ಲೂಕಿನ ವರ್ತಮಾನಗಳನ್ನು ಪ್ರಸ್ತಾಪಮಾಡುತ್ತ ತಮ್ಮ ಹೆಸರನ್ನು ಹೇಳಿ, – ಏನು ಬಹಳ ಪುಕಾರುಗಳು ಬರುತ್ತಿವೆಯಲ್ಲ ಆ ಇನ್ಸ್‌ಪೆಕ್ಟರ ಮೇಲೆ! ನಿಮಗೇನಾದರೂ ಅವರ ವಿಚಾರ ಗೊತ್ತೇ? – ಎಂದು ಕೇಳಿದರು.’
ರಂಗಣ್ಣ ಏನು ಮಾತನ್ನೂ ಆಡಲಿಲ್ಲ ; ಕುತೂಹಲವನ್ನೂ ತೋರಿಸಲಿಲ್ಲ. ಸರ್ಕಾರದವರೆಗೂ ತನ್ನ ಹೆಸರು ಹೋಯಿತಲ್ಲ! ಏನೇನು ಚಾಡಿಗಳನ್ನು ಕಂಡವರೆಲ್ಲ ಹೇಳಿದ್ದಾರೋ, ಮೇಲಿನವರು ಸತ್ಯಾಂಶಗಳನ್ನು ತಿಳಿದುಕೊಳ್ಳದೆ ಏನು ದುರಭಿಪ್ರಾಯಗಳನ್ನಿಟ್ಟು ಕೊಳ್ಳುತ್ತಾರೋ ಎಂಬುದಾಗಿ ಚಿಂತಿಸುತ್ತಿದ್ದನು. ದೊಡ್ಡ ಬೋರೇಗೌಡರು ತಮ್ಮ ಮಾತನ್ನು ಮುಂದುವರಿಸಿ, ‘ನಾನೇನನ್ನು ಹೇಳಲಿ ಸ್ವಾಮಿ! ಆ ಕಲ್ಲೇಗೌಡ ಮತ್ತು ಕರಿಯಪ್ಪ ಮೇಲೆಲ್ಲ ತುಂಬಾ ಚಾಡಿಗಳನ್ನು ಹೇಳಿ ತಮ್ಮ
ಹೆಸರು ಕೆಡಿಸಿ ಬಿಟ್ಟಿದ್ದಾರೆ!’ ಎಂದರು.
‘ನಾನು ಮಾಡಿರುವುದನ್ನು ಹೇಳಿದರೆ ನನ್ನ ಹೆಸರೇಕೆ ಕೆಡುತ್ತದೆ ಗೌಡರೇ?’
‘ಮಾಡಿದ್ದನ್ನು ಹೇಳುತ್ತಾರೆಯೇ ಸ್ವಾಮಿ? ಮಾಡದೇ ಇರುವುದನ್ನೇ ಅವರು ಹೇಳುವುದು. ಜೊತೆಗೆ, ಮಾಡಿದ್ದಕ್ಕೆ ಬಣ್ಣ ಕಟ್ಟಿ ಇಲ್ಲದ ಆರೋಪಣೆಗಳನ್ನು ಮಾಡಿ ಹೇಳುವುದು! ಚಾಡಿಕೋರರು ಮಾಡುವುದೇ ಅದು!’
‘ಹೇಳಿದರೆ ಹೇಳಲಿ! ಸರಕಾರಕ್ಕೆ ಕಣ್ಣು ಕಿವಿಗಳಿವೆ. ಸರಿಯಾಗಿ ನೋಡಿ ತಿಳಿದು ಕೊಳ್ಳುತ್ತಾರೆ, ಸರಿಯಾದವರಿಂದ ಕೇಳಿ ತಿಳಿದು ಕೊಳ್ಳುತ್ತಾರೆ.’
‘ಆವರೂ ಹಾಗೇ ವಿಚಾರಿಸಿಕೊಳ್ಳುತ್ತಾರೆ ಅನ್ನಿ! ಚಾಡಿಕೋರರು ಹೇಳಿದ್ದನ್ನೇ ನಂಬಿ ಕೆಲಸ ಮಾಡುತ್ತಾರೆಯೆ? ಅಂತೂ ತಮಗೆ ವಿಚಾರ ತಿಳಿಸೋಣ ಎಂದು ಬಂದೆ. ತಾವು ಸಂಘದ ಸಭೆಗಳನ್ನು ಹಳ್ಳಿಗಳಲ್ಲಿ ಸೇರಿಸುತ್ತಿದ್ದೀರಷ್ಟೆ. ಗ್ರಾಮಸ್ಥರಿಂದ ದವಸ ಧಾನ್ಯ ವಸೂಲ್ಮಾಡಿ ಮನೆಗೆ ತೆಗೆದುಕೊಂಡು ಹೋಗುತ್ತೀರಂತೆ! ಊಟದ ಖರ್‍ಚು ಏಳುವ ಬಗ್ಗೆ ಉಪಾಧ್ಯಾಯರಿಂದ ಮೀಟಂಗೊಂದಕ್ಕೆ ಎಂಟಾಣೆ ವಸೂಲ್ಮಾಡುತ್ತೀರಂತೆ! ನಿಮ್ಮಿಂದ ಹಳ್ಳಿಯವರಿಗೂ ಮೇಷ್ಟ್ರುಗಳಿಗೂ ಬಹಳ ಹಿಂಸೆಯಂತೆ! ಚಿರೋಟಿ ಲಾಡುಗಳ ಸಮಾರಾಧನೆ ಮಾಡಿಸಿಕೊಂಡು ಹಳ್ಳಿಗಳನ್ನು ಕೊಳ್ಳೆ ಹೊಡೆಯತ್ತಿದ್ದೀರಂತೆ!- ಇವೆಲ್ಲ ನಿಮ್ಮ ಮೇಲೆ ಪುಕಾರು!
‘ವಿಚಾರವೆಲ್ಲ ನಿಮಗೆ ತಿಳಿದಿದೆ ಗೌಡರೇ! ನಾನು ಪುನಃ ಏಕೆ ಹೇಳಲಿ? ನಿಮ್ಮ ಆಹ್ವಾನದ ಮೇಲೆ ಆವಲಹಳ್ಳಿಯಲ್ಲಿ ಸಭೆ ಸೇರಿತ್ತು. ಅಲ್ಲಿ ಏನಾಯಿತು ಎಂಬುದು ನಿಮಗೆ ತಿಳಿದಿದೆ. ಹಳ್ಳಿಗಳಲ್ಲಿ ಸಭೆ ಸೇರ ಬೇಕಾದರೆ ಗ್ರಾಮ ಪಂಚಾಯತಿಗಳು ರೆಜಲ್ಯೂಷನ್ ಮಾಡಿ ಆಹ್ವಾನ ಕೊಡುತ್ತಾರೆ. ಆ ಪಂಚಾಯತಿ ಸದಸ್ಯರೇ ಬಂದು ಕರೆಯುತ್ತಾರೆ. ಕೆಲವು ಸಂದರ್‍ಭಗಳಲ್ಲಿ ತಮ್ಮಂಥ ಉದಾರಿಗಳಾದ ರೈತರು ತಾವೇ ಖರ್ಚನ್ನೆಲ್ಲ ವಹಿಸಿಕೊಂಡು ಒಪ್ಪೊತ್ತು ಊಟವನ್ನು ಬಡ ಮೇಷ್ಟರುಗಳಿಗೆ ಹಾಕುತ್ತಾರೆ. ಅಲ್ಲಿ ಏನು ಸಮಾರಾಧನೆ ನಡೆಯುತ್ತೆ? ಯಾರೋ ಗ್ರಾಮಸ್ಥರು ಕೆಲವರು ಉತ್ಸಾಹದಿಂದ ಒಂದಿಷ್ಟು ಚಿತ್ರಾನ್ನ, ಎರಡು ಆಂಬೊಡೆ ಮಾಡಿಸಿ ಹಾಕುತ್ತಾರೆ. ಅವುಗಳಿಲ್ಲದೆ ಸಾಮಾನ್ಯ ಅಡಿಗೆಯೂ ಎಷ್ಟೋ ದಿನಗಳಲ್ಲಿ ನಡೆದಿಲ್ಲವೆ? ಗ್ರಾಮಸ್ಥರು ಕರೆಯದೇ ನಾವು ಅಲ್ಲಿ ಸಭೆ ಸೇರಿಸುವುದಿಲ್ಲ. ನನ್ನ ಮೇಲೆ ಪುಕಾರು ಬರುವುದಕ್ಕೆ, ಅರ್ಜಿ ಹೋಗುವುದಕ್ಕೆ ಕಾರಣವಿಲ್ಲ!’
‘ಅರ್ಜಿಗಳು ಹೋಗಿವೆ ಸ್ವಾಮಿ! ಯಾರು ಬರೆದು ಕಳಿಸಿದ್ದೂ ಏನೋ! ಹೋಗಿವೆ, ಅಷ್ಟು ನನಗೆ ಗೊತ್ತಿದೆ. ನಾನು ದಿವಾನರಿಗೆ ಸತ್ಯಾಂಶಗಳನ್ನು ತಿಳಿಸಿದೆ. ಆವಲಹಳ್ಳಿಯಲ್ಲಿ ನಡೆದದ್ದನ್ನೆಲ್ಲ ವಿವರಿಸಿದೆ. ಅವರು ಸಂತೋಷಪಟ್ಟು ಕೊಂಡು, – ಗ್ರಾಮಸ್ಥರನ್ನೂ ಉಪಾಧ್ಯಾಯರನ್ನೂ ಸೇರಿಸಿ, ಎಲ್ಲರಿಗೂ ತಿಳಿವಳಿಕೆ ಕೊಟ್ಟು ಚೆನ್ನಾಗಿ ಕೆಲಸ ಮಾಡುತ್ತಿದಾರಲ್ಲ ನಿಮ್ಮ ಇನ್ಸ್‌ಪೆಕ್ಟರು! ಆಕ್ಷೇಪಣೆಗೆ ಏನೂ ಕಾರಣವಿಲ್ಲವಲ್ಲ! ಎಂದು ಅಪ್ಪಣೆ ಕೊಡಿಸಿದರು.’
‘ಸರಿ, ಒಂದು ಆರೋಪಣೆಯಂತೂ ಆಯಿತು. ಇನ್ನೇನಿದೆ ನನ್ನ ಮೇಲೆ?’
‘ಇನ್ನೇನಿದೆ ಸ್ವಾಮಿ! ಪುಂಡ ಪೋಕರಿಗಳ ಮಾತು! ಅವಕೆಲ್ಲ ಬೆಲೆ ಕೊಡುವುದಕ್ಕಾಗುತ್ತದೆಯೆ?’
‘ನೀವು ಏತಕ್ಕೆ ಮುಚ್ಚಿಟ್ಟು ಕೊಳ್ಳುತ್ತೀರಿ? ನನಗೆ ಆಗದವರು ಅರ್ಜಿಗಳನ್ನು ಹಾಕಿದ್ದಾರೆ. ಅವು ವಿಚಾರಣೆಗೆ ಬಂದೇ ಬರುತ್ತವೆ. ದೊಡ್ಡ ಸಾಹೇಬರು ಒಂದೊ ಇಲ್ಲಿಗೆ ಬರುತ್ತಾರೆ, ಇಲ್ಲವೋ ನನ್ನನ್ನೇ ಕರೆಸಿ ಕೊಳ್ಳುತ್ತಾರೆ. ನನ್ನ ಸಮಜಾಯಿಷಿಗಳನ್ನು ಕೇಳಿ ತಿಳಿದುಕೊಳ್ಳುತ್ತಾರೆ’
‘ಅದು ಯಾರು ಸ್ವಾಮಿ ಆ ತಿಮ್ಮಮ್ಮ ಎಂಬೋ ಹೆಂಗಸು? ಹಿಂದೆ ಆಕೆಯನ್ನು ಈ ರೇಂಜು ಬಿಟ್ಟು, ವರ್‍ಗ ಮಾಡಿಸಿದ್ದರೆ, ಪುನಃ ನೀವು ಆಕೆಯನ್ನು ಇಲ್ಲಿಗೆ ಕರೆಸಿಕೊಳ್ಳಬೇಕು ಎಂದು ಪ್ರಯತ್ನ ನಡೆಸುತ್ತಿದ್ದೀರಂತೆ! ಆಕೆಗೂ ನಿಮಗೂ ಕಾಗದಗಳು ಓಡಾಡುತ್ತಿವೆಯಂತೆ!’
‘ಈ ಅಪವಾದವೊಂದನ್ನು ನನ್ನ ತಲೆಗೆ ಕಟ್ಟಿದ್ದಾರೋ!’
‘ಅದೇನು ಸ್ವಾಮಿ ಆ ವಿಚಾರ? ತಾವು ದೊಡ್ಡ ಮನುಷ್ಯರು. ಅಂಥ ಕೆಟ್ಟ ಚಾಳಿ ತಮ್ಮಲ್ಲಿ ಏನೂ ಇಲ್ಲ ಎಂಬುದನ್ನು ನಾನು ಬಲ್ಲೆ. ಆದರೂ ಸ್ವಲ್ಪ ಗಲಾಟೆ ಎದ್ದಿದೆ.’
‘ಗೌಡರೇ! ಆಕೆ ಯಾರೋ ನನಗೆ ಗೊತ್ತಿಲ್ಲ. ಆಕೆಯ ಮುಖವನ್ನೇ ನಾನು ನೋಡಿದವನಲ್ಲ. ರಿಕಾರ್ಡು ಮೂಲಕ ಮಾತ್ರ ಆಕೆಯನ್ನು ನಾನು ಬಲ್ಲೆ. ಆ ಚರಿತ್ರೆ ನಿಮಗೆ ಪೂರ್ತಿಯಾಗಿ ಹೇಳುತ್ತೇನೆ ಕೇಳಿ : ಹಿಂದೆ ಇದೇ ಊರಿನಲ್ಲಿ ಗರ್ಲ್ಸ್ ಸ್ಕೂಲಿನಲ್ಲಿ ಆಕೆ ಇದ್ದಳಂತೆ. ಈ ಊರಿನ ಮುನಿಸಿಪಲ್ ಕೌನ್ಸಿಲರು- ಒಬ್ಬರು ದೊಡ್ಡ ಮನುಷ್ಯರು
ಆಕೆಯ ರಕ್ಷಕರು, ಆಕೆಗೆ ಮೂರು ನಾಲ್ಕು ಮಕ್ಕಳು; ಎಲ್ಲವೂ ಆ ದೊಡ್ಡ ಮನುಷ್ಯರದಂತೆ! ಮೇಲಕ್ಕೆ ಅರ್ಜಿಗಳು ಹೋಗಿ, ಸಾಹೇಬರು ಬಂದು ಖುದ್ದಾಗಿ ನೋಡಿ ಆಮೇಲೆ ಆಕೆಯನ್ನು ಇಲ್ಲಿಂದ ವರ್ಗಮಾಡಿಬಿಟ್ಟರು. ಈಚೆಗೆ ಆ ಕೌನ್ಸಿಲರ್ ದೊಡ್ಡ ಮನುಷ್ಯರು ನನ್ನ ಹತ್ತಿರ ಬಂದಿದ್ದರು. ಕರಿಯಪ್ಪ ನವರಿಂದ ಶಿಫಾರಸು ಪತ್ರ ತಂದಿದ್ದರು ; ಪುನಃ ಇಲ್ಲಿಗೇನೆ ಆಕೆಯನ್ನು ವರ್‍ಗ ಮಾಡಿಸಿಕೊಡಬೇಕು, ಆಕೆಯನ್ನು ನೋಡಿಕೊಳ್ಳುವವರು ಪರಸ್ಥಳದಲ್ಲಿ ಯಾರೂ ಇಲ್ಲ, ಬಹಳ ಕಷ್ಟ ಪಡುತ್ತಿದಾಳೆ-ಎಂದೆಲ್ಲ ಹೇಳಿದರು. ರಿಕಾರ್ಡುಗಳನ್ನು ನೋಡುತ್ತೇನೆ, ಆಲೋಚನೆ ಮಾಡುತ್ತೇನೆ ಎಂದು ನಾನು ಅವರಿಗೆ ತಿಳಿಸಿದೆ. ಇದು ನಡೆದಿರುವ ವಿಚಾರ. ಆಕೆ ನನಗೆ ಕೆಲವು ಹುಚ್ಚು ಹುಚ್ಚು ಖಾಸಗಿ ಕಾಗದಗಳನ್ನು ಬರೆದಿದ್ದಳು. ನೇರವಾಗಿ ಕಾಗದ ಬರೆಯಕೂಡದು; ರೇಂಜಿನ ಇನ್ಸ್‌ಪೆಕ್ಟರ್ ಮೂಲಕ ಅರ್‍ಜಿಗಳನ್ನು ಕಳಿಸಬೇಕು ಎಂದು ಕಚೇರಿಯ ಮೂಲಕ ಒಂದೆರಡಕ್ಕೆ ಜವಾಬು ಹೋಯಿತು. ನನ್ನ ಹೆಂಡತಿಗೂ ಈ ವಿಷಯಗಳೆಲ್ಲ ಗೊತ್ತು. ಆಕೆ- ಈ ಹಾಳು ನೀತಿಗೆಟ್ಟ ಹೆಂಗಸರಿಗೆಲ್ಲ ಮೇಷ್ಟ್ರ ಕೆಲಸ ಏಕೆ ಕೊಡುತ್ತಾರೆ? ಹೆಣ್ಣು ಮಕ್ಕಳನ್ನು ಕೆಟ್ಟ ದಾರಿಗೆ ಎಳೆಯುವುದಿಲ್ಲವೇ? ಶೀಲ ಚೆನ್ನಾಗಿರುವ ಹೆಂಗಸರಿಗೆ ಮಾತ್ರ ಕೆಲಸ ಕೊಡ ಬೇಕು-ಎಂದು ಟೀಕಿಸಿದಳು. ಅಷ್ಟರಲ್ಲಿ ಅದು ಮುಗಿಯಿತು.’
‘ಸ್ವಾಮಿ! ನನಗೇಕೋ ಬಹಳ ಆಶ್ಚರ್ಯವಾಗುತ್ತದೆ. ನಿಮ್ಮ ಮೇಲೆ ಹೀಗೆ ಪುಕಾರು ಹುಟ್ಟಿಸಿದ್ದಾರಲ್ಲ! ಎಂಥಾ ಜನ! ಕೆಲವು ದಿನಗಳ ಹಿಂದೆ ಡೈರೆಕ್ಟರ್ ಸಾಹೇಬರು ಆಕೆಯನ್ನು ಕಚೇರಿಗೆ ಕರೆಸಿಕೊಂಡು ವಿಚಾರಣೆ ಮಾಡಿದರಂತೆ! ಆಕೆ ಏನೇನು ಹೇಳಿಕೆಗಳನ್ನು ಕೊಟ್ಟಿದ್ದಾಳೋ ನಿಮ್ಮ ಮೇಲೆ!’
ರಂಗಣ್ಣನ ಮುಖದ ಕಳೆ ಇಳಿದು ಹೋಯಿತು. ಆ ಹೊತ್ತಿಗೆ ಗೋಪಾಲ ಎರಡು ತಟ್ಟೆಗಳಲ್ಲಿ ಉಪಾಹಾರವನ್ನೂ ಎರಡು ಲೋಟಗಳಲ್ಲಿ ನೀರನ್ನೂ ತಂದು ಮೇಜಿನ ಮೇಲಿಟ್ಟನು. ಕಾರದವಲಕ್ಕಿ ಮತ್ತು ಮೈಸೂರುಪಾಕು ತಟ್ಟೆಯಲ್ಲಿದ್ದ ತಿಂಡಿಗಳು, ಗೌಡರು ಅದನ್ನು ನೋಡಿ, ‘ಸ್ವಾಮಿ! ಹೋಟೆಲಿಂದ ಇವುಗಳನ್ನೆಲ್ಲ ಏಕೆ ತರಿಸಿದಿರಿ? ಇವುಗಳಿಗೆಲ್ಲ ದುಡ್ಡನ್ನು ಏಕೆ ಖರ್ಚು ಮಾಡಿದಿರಿ?’ ಎಂದು ಕೇಳಿದರು. ರಂಗಣ್ಣ ತನ್ನ ಮನಸ್ಸನ್ನು ಸಮಾಧಾನ ಮಾಡಿಕೊಂಡು,
‘ಗೌಡರೇ! ನಮ್ಮ ಮನೆಗೆ ಹೋಟೆಲಿಂದ ತಿಂಡಿಪಂಡಿ ತರಿಸುವುದಿಲ್ಲ. ಇದನ್ನೆಲ್ಲ ಮನೆಯಲ್ಲೇ ಮಾಡುತ್ತಾರೆ’ ಎಂದನು.
ಗೌಡರು ಮೈಸೂರು ಪಾಕನ್ನು ಬಾಯಿಗೆ ಹಾಕಿಕೊಂಡರು. ‘ಏನು ಸ್ವಾಮಿ! ಹೋಟೆಲಿನಲ್ಲಿ ಕೂಡ ಇಷ್ಟು ಚೆನ್ನಾಗಿ ಮಾಡುವುದಿಲ್ಲವಲ್ಲ! ಅದರ ತಲೆಯ ಮೇಲೆ ಹೊಡೆದಂತೆ ಇದೆಯೇ!’
‘ಹೌದು. ಆದ್ದರಿಂದಲೇ ಹೋಟೆಲ್ ತಿಂಡಿಯ ಆಶೆ ನಮಗಾರಿಗೂ ಇಲ್ಲ. ಮನೆಯಲ್ಲಿ ಬೇಕಾದ ತಿಂಡಿ ಪಂಡಿಗಳನ್ನು ಆಕೆ ಮಾಡುತ್ತಿರುತ್ತಾಳೆ. ನಾನು ಸರ್‍ಕಿಟಿಗೆ ಹೊರಟಾಗಲಂತೂ ನನ್ನ ಕೈ ಪೆಟ್ಟಿಗೆಯಲ್ಲಿ ತುಂಬಿಡುತ್ತಾಳೆ!
‘ಹೌದು ಸ್ವಾಮಿ! ನನಗೆ ಜ್ಞಾಪಕವಿದೆ. ಹರಪುರದ ಕ್ಯಾಂಪಿನಲ್ಲಿ ತಾವು ಕೊಟ್ಟ ತೇಂಗೊಳಲು ಬೇಸಿನ್ ಲಾಡು, ಇನ್ನೂ ನನ್ನ ನಾಲಿಗೆಯಲ್ಲಿ ನೀರೂರಿಸುತ್ತಿವೆ!’
‘ನಾನು ಯಾವುದಕ್ಕೂ ತಾಪತ್ರಯ ಪಟ್ಟು ಕೊಳ್ಳಬೇಕಾದ್ದಿಲ್ಲ ಗೌಡರೇ! ದೇವರು ಯಾವ ವಿಚಾರಕ್ಕೂ ಕಡಮೆ ಮಾಡಿಲ್ಲ. ನಾನು ಸಂತೋಷವಾಗಿ ಮತ್ತು ಸೌಖ್ಯವಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದೇನೆ. ಎಲ್ಲವು ವಯಿನವಾಗಿವೆ. ಈ ಇನ್ಸ್‌ಪೆಕ್ಟರ್ ಗಿರಿಯಲ್ಲಿ ನನ್ನ ಕೆಲವು ಭಾವನೆಗಳನ್ನೂ ತತ್ತ್ವಗಳನ್ನೂ ಕಾರ್‍ಯರೂಪಕ್ಕೆ ತಂದು ವಿದ್ಯಾಭಿವೃದ್ಧಿಯನ್ನುಂಟುಮಾಡೋಣ, ಒಂದು ಮಾರ್ಗದರ್ಶನ ಮಾಡೋಣ, ಉಪಾಧ್ಯಾಯರನ್ನೂ ನಗಿಸುತ್ತ ನಾನೂ ನಗುನಗುತ್ತ ಕೆಲಸ ಮಾಡಿ ಕೊಂಡು ಹೋಗೋಣ – ಎಂಬ ಧೈಯಗಳನ್ನಿಟ್ಟು ಕೊಂಡಿದ್ದೇನೆ. ಆದರೆ ನನ್ನ ಮೇಲೆ ನಿಮ್ಮ ಮುಖಂಡರು ಛಲ ಸಾಧಿಸುತ್ತಿದಾರೆ. ನನ್ನ ಮೇಲೆ ಇಲ್ಲದ ನಿಂದೆಗಳನ್ನು ಹೊರಿಸುತ್ತಿದಾರೆ. ಅವರಿಗೆ ನಾನೇನು ಅಪಕಾರ ಮಾಡಿದ್ದೆನೆಂಬುದು ತಿಳಿಯದು. ನನ್ನೊಡನೆ ನೀವುಗಳೆಲ್ಲ ಸಹಕರಿಸುವಂತೆ ಅವರೂ ಸಹಕರಿಸಿದರೆ ಎಷ್ಟು ಚೆನ್ನಾಗಿರುತ್ತದೆ! ನನ್ನ ಮನಸ್ಸಿಗೂ ಎಷ್ಟೊಂದು ನೆಮ್ಮದಿಯುಂಟಾಗುತ್ತದೆ! ಒಳ್ಳೆಯ ಕೆಲಸಕ್ಕೂ ಹೀಗೆ ಅಡಚಣೆಗಳು ಬಂದರೆ ಹೇಗೆ? ಎಂದು ನಾನು ನೊಂದುಕೊಂಡಿದ್ದೇನೆ.’
‘ಸ್ವಾಮಿ! ತಾವು ನೊಂದುಕೊಳ್ಳಬೇಡಿ. ಆ ಮುಖಂಡರ ವಿಚಾರವೆಲ್ಲ ನನಗೆ ಗೊತ್ತಿದೆ. ಅವರಿಗೆ ಸರಕಾರದ ಅಧಿಕಾರಿಗಳನ್ನು ತಮ್ಮ ಹತೋಟಿಯಲ್ಲಿಟ್ಟು ಕೊಳ್ಳಬೇಕು, ತಾವು ಹೇಳಿದಂತೆ ವರ್ಗಾವರ್ಗಿಗಳನ್ನೂ ಪ್ರಮೋಷನ್ನುಗಳನ್ನೂ ಅಧಿಕಾರಿಗಳು ಮಾಡುತ್ತಿರಬೇಕು, ರಸ್ತೆ ಕಾಮಗಾರಿಯ ಕಂಟ್ರಾಕ್ಟೋ, ಕಟ್ಟಡಗಳನ್ನು ಕಟ್ಟುವುದರ ಕಂಟ್ರಾಕ್ಟೋ ಇದ್ದರೆ ಅವು ತಮಗೋ ತಮ್ಮ ಕಡೆಯವರಿಗೋ ದೊರೆಯಬೇಕು ಮುಂತಾದ ದುರಾಕಾಂಕ್ಷೆಗಳಿವೆ. ತಾವು ಈ ರೇಂಜಿಗೆ ಬಂದಮೇಲೆ ತಾವೇ ನೇರವಾಗಿ ಉಪಾಧ್ಯಾಯರೊಡನೆ ವ್ಯವಹರಿಸಿ ಎಲ್ಲವನ್ನೂ ಮಾಡಿಕೊಂಡು ಹೋಗುತ್ತಿದ್ದೀರಿ; ಮುಖಂಡರ ಕೈಗೊಂಬೆಯಾಗಿ ತಾವು ಏನನ್ನೂ ನಡೆಸುತ್ತಿಲ್ಲ. ಅವರನ್ನು ತಾವು ಅನುಸರಣೆ ಮಾಡಿಕೊಂಡು ಹೋಗುತ್ತಿಲ್ಲ. ಅವರ ಪ್ರತಿಷ್ಠೆಗೆ ಈಗ ಸ್ವಲ್ಪ ಕುಂದುಕ ಬಂದಿದೆ. ತಮಗೆ ಕಿರುಕುಳಗಳನ್ನು ಕೊಡುತ್ತಾರೆ. ಅಲ್ಪ ಜನ! ಸ್ವಾರ್ಥಿಗಳು! ತಾವು ಮನಸ್ಸಿಗೆ ಹಚ್ಚಿಸಿಕೊಳ್ಳಬೇಡಿ. ನಿಮ್ಮ ಕೆಲಸವನ್ನು ನಾವುಗಳೆಲ್ಲ ನೋಡುತ್ತಿದ್ದೇವೆ. ಜನರೆಲ್ಲ ನೋಡಿ ಸಂತೋಷ ಪಡುತ್ತಿದ್ದಾರೆ; ಉಪಾಧ್ಯಾಯರಂತೂ ತಮ್ಮಲ್ಲಿ ಭಕ್ತಿ ವಿಶ್ವಾಸಗಳನ್ನು ಬಹಳವಾಗಿ ಇಟ್ಟಿದ್ದಾರೆ. ಈ ರೇಂಜಿನಲ್ಲಿ ದಂಡನೆಯೇ ಇಲ್ಲದೆ ಎಲ್ಲರನ್ನೂ ತಾವು ಕಾಪಾಡಿಕೊಂಡು ಹೋಗುತ್ತಿದ್ದೀರಿ; ಮೇಷ್ಟ್ರುಗಳಿಂದ ಚೆನ್ನಾಗಿ ಕೆಲಸ ತೆಗೆಯುತ್ತಿದ್ದೀರಿ;
ಮಕ್ಕಳಲ್ಲಿ ವಿದ್ಯಾಭಿವೃದ್ಧಿಯನ್ನುಂಟುಮಾಡುತ್ತಿದ್ದೀರಿ.’
‘ತಮ್ಮಂಥ ದೊಡ್ಡ ಮನುಷ್ಯರ, ರೈತಮುಖಂಡರ ಪ್ರೋತ್ಸಾಹವೇ ನನಗೆ ಸ್ಫೂರ್ತಿಯನ್ನೂ ಶಕ್ತಿಯನ್ನೂ ಕೊಡುತ್ತಿವೆ. ನನ್ನ ಕೆಲಸವನ್ನು ನಿರ್‍ವಂಚನೆಯಿಂದ ಮಾಡಿಬಿಡುತ್ತೇನೆ. ಕೀರ್ತಿ ಅಪಕೀರ್ತಿಗಳು ದೈವಕೃಪೆ!’
ಗೋಪಾಲನು ಎರಡು ಲೋಟಗಳಲ್ಲಿ ಕಾಫಿ ತಂದು ಕೊಟ್ಟನು. ಕಾಫಿ ಸೇವನೆಯ ತರುವಾಯ ಗೌಡರು, ‘ನಾನು ಹೊರಡುತ್ತೇನೆ ಸ್ವಾಮಿ! ಆವಲಹಳ್ಳಿಯಲ್ಲಿ ಒಂದು ಮೊಕ್ಕಾಂ ಇಟ್ಟು ಕೊಳ್ಳಿರಿ’ ಎಂದು ಹೇಳಿ ಹೊರಟರು.
*****
ಮುಂದುವರೆಯುವುದು