ನಮ್ಮಯ ಹಳ್ಳಿ ಚಿಕ್ಕದು
ದೇಶಕೆ ಅನ್ನ ಇಕ್ಕುವುದು
ಊರ ಸುತ್ತ ಬೆಟ್ಟ
ಹಾಕಿದಂತೆ ಅಟ್ಟ
ಕಾರಿ ಟೆಂಗು ಕವಳೆ
ಸೀತಾಫಲ ನೇರಳೆ
ಅಗಸಿ ಊರ ಮುಂದೆ
ಆಲದ ಕಟ್ಟೆ ಹಿಂದೆ
ಸುಂದರ ದೇವಸ್ಥಾನ
ನೋಡು ರಥದ ಚಂದಾನ
ಊರ ಹೊರಗೆ ಶಾಲೆ
ನಮ್ಮ ಓದು ಅಲ್ಲೆ
ಬೇವಿನ ಮರಗಳೆರಡು
ಆಗಿವೆ ಗಂಧದ ಕೊರಡು
ಊರ ಹಿಂದೆ ಹಳ್ಳ
ಆಗಿದೆ ಅದು ಕೊಳ್ಳ
ಮಳೆಗಾಲದಲ್ಲಿ ಉಕ್ಕಿ
ಅಲ್ಲಿ ಉಲಿವವು ಹಕ್ಕಿ
ಬಟ್ಟೆ ಒಗೆಯುವ ತಾಣ
ಬದಿಗೆ ಕಬ್ಬಿನ ಗಾಣ
ಬನ್ನಿ ಹಾಲು ಕುಡಿಯೋಣ
ಅದರ ರುಚಿಯ ಸವಿಯೋಣ
ಸಣ್ಣ ಪುಟ್ಟ ಓಣಿ
ಅಲ್ಲೇ ಒಂದು ಗಿರಣಿ
ಸಂಜೆಗೆ ಜೋಳ ತಂದು
ಹಿಟ್ಟು ಮಾಡಿಸಿಕೊಂಡು
ಜೋಳದ ಬಿಸಿ ರೊಟ್ಟಿ
ತಿಂದರೆ ಹ್ಯಾಂಗ ಗಟ್ಟಿ
ಮೇಲೆ ಹಾಲು ಮಜ್ಜಿಗೆ
ಎಂಥ ಔಷಧಿ ನಿದ್ದೆಗೆ
ಎಲ್ಲರ ಮನೆಗಳ ಎತ್ತು
ಹಳ್ಳಿ ಬಾಳಿನ ಮುತ್ತು
ನಿತ್ಯ ಉತ್ತು ಬಿತ್ತಿ
ರೈತರ ಬಾಳ ಸಾಥಿ
ರಾಗಿ ಜೋಳ ಸೆಜ್ಜೆ
ಹುರುಳಿ ಸೇಂಗಾ ಗೆಜ್ಜೆ
ಹಲಸು ಮಾವು ತೋಪು
ಶುದ್ಧಗಾಳಿ ತಂಪು
ಮೂರು ಹೊತ್ತು ರೈತ
ಇರುವ ಹೊಲದಿ ಗೇಯುತ
ಗಡಿಯಲ್ಲಿ ಜೈ ಜವಾನ್
ಹಳ್ಳಿಯಲಿ ಜೈಕಿಸಾನ್
ಸಂತೆ ವಾರಕ್ಕೊಮ್ಮೆ
ಜಾತ್ರೆ ವರ್ಷಕ್ಕೊಮ್ಮೆ
ನೆಂಟರಿಷ್ಟರು ಬಂದು
ನಲಿದಾಡುವರು ಅಂದು
ಊರಿಗೆ ಯಾರೇ ಬರಲಿ
ನಮ್ಮ ಅತಿಥಿಯಾಗಲಿ
ಇದು ನಮ್ಮಯ ಹಂಬಲ
ನಿಮಗಿದೋ ತಾಂಬೂಲ.
*****