ಟೀಚರ್ ಹೇಳ್ತಾರೆ ನಮ್ಗೆ
ಕಲಿಬೇಕಂತೆ ಹಾಡು
ಹಾಡ್ತಾ ಹಾಡ್ತಾ ನಾವು
ಕಟ್ಬೇಕಂತೆ ನಾಡು
ಟೀಚರ್ ಹೇಳ್ತಾರೆ ನಮ್ಗೆ
ಉತ್ಬೇಕಂತೆ ನೆಲ
ಎಷ್ಟೆ ಕಷ್ಟ ಬಂದ್ರೂ
ಬಿಡಬಾರದಂತೆ ಛಲ
ಟೀಚರ್ ಹೇಳ್ತಾರೆ ನಮ್ಗೆ
ರೈತ ದೊಡ್ಡೋನಂತೆ
ಎಲ್ಲಾ ಕಷ್ಟ ಸಹಿಸಿಕೊಂಡು
ಅನ್ನ ನೀಡ್ತಾನಂತೆ
ಟೀಚರ್ ಹೇಳ್ತಾರೆ ನಮ್ಗೆ
ಓದ್ಬೇಕಂತೆ ಪೇಪರ್
ಓದ್ತಾ ಓದ್ತಾ ನಾವು
ಆಗ್ತಿವಂತೆ ಸೂಪರ್
ಟೀಚರ ಹೇಳ್ತಾರೆ ನಮ್ಗೆ
ಮಾಡ್ಬೇಕಂತೆ ಪ್ರೀತಿ
ನೆಲ, ಜಲ, ದೇಶ, ಭಾಷೆ
ನಮ್ಗೆ ತಾಯಿ ರೀತಿ
ಟೀಚರ್ ಹೇಳ್ತಾರೆ ನಮ್ಗೆ
ಕಡಿಬಾರದಂತೆ ಮರ
ಗಾಳಿ, ನೆರಳು ಕೊಡೋ ಅವು
ದೇವರು ಕೊಟ್ಟ ವರ
ಟೀಚರ್ ಹೇಳ್ತಾರೆ ನಮ್ಗೆ
ಕಲಿಬಾರ್ದಂತೆ ಚಟ
ಕಲಿತೋರೆಲ್ಲ ಹಾಳಾಗ್ತಾರೆ
ಅನ್ನೋದಂತೂ ದಿಟ
ಟೀಚರ್ ಹೇಳ್ತಾರೆ ನಮ್ಗೆ
ಮಾಡ್ಬಾರ್ದಂತೆ ಕಾಪಿ
ಓದ್ದೇ ಪಾಸು ಮಾಡ್ದೋರೆಲ್ಲ
ಆಗ್ತಾರಂತೆ ಪಾಪಿ
ಟೀಚರ್ ಹೇಳ್ತಾರೆ ನಮ್ಗೆ
ಬಿಡಬಾರದಂತೆ ನೀತಿ
ಹಂಚಿ ತಿನ್ನೋ ಮನಸ್ಸಿಗಿಂತ
ದೊಡ್ಡದೇನಲ್ಲ ಜಾತಿ
ಟೀಚರ್ ಹೇಳ್ತಾರೆ ನಮ್ಗೆ
ಇರಬೇಕಂತೆ ಶುಚಿ
ಹಲ್ಲು ನಾಲಗೆ ಉಜ್ಜದೇ ಇದ್ರೆ
ಸಿಗುತ್ತೇನು ರುಚಿ
ಟೀಚರ್ ಹೇಳ್ತಾರೆ ನಮ್ಗೆ
ಮಾಡ್ಬಾರ್ದಂತೆ ಸ್ಟ್ರೈಕು
ಬಸ್ಸು, ಕಾರು ಸುಟ್ಟಿದ್ದು
ಇನ್ನಾದ್ರು ಸಾಕೋ, ಸಾಕು.
*****