ರಾಜು ಮನೆಯ ಗೋಡೆಯಲ್ಲಿ
ಗುಬ್ಬಿಯ ಗೂಡು ಇರುವುದು
ಹೆಣ್ಣು-ಗಂಡು ನೆಮ್ಮದಿಯಿಂದಲಿ
ಬದುಕುತಿದ್ದವು ಆ ಮನೆಯಲ್ಲಿ
ಅನ್ನವನ್ನು ಹುಡುಕಲು ಗುಬ್ಬಿಗಳು
ಗೂಡು ತೊರೆದು ಹೋಗುವವು
ಕಾಳು ಹುಳುಗಳ ಕಚ್ಚಿಕೊಳುತ
ಗೂಡಿಗೆ ಮತ್ತೆ ಮರಳುವವು
ದಿನಗಳು ಹೀಗೆ ಗತಿಸಿದವು
ಹೆಣ್ಣು ಮೊಟ್ಟೆಗಳ ಇಟ್ಟಿತ್ತು
ಮೇಲೆ ಕುಳಿತು ಕೊಡಲು ಕಾವು
ಎರಡು ಮರಿಗಳಿಗೆ ಜೀವ ಕೊಟ್ಟಿತು
ಎರಡು ವಾರ ಹಾಗೆ ಕಳೆದಿರಲು
ಮರಿಗಳು ಚಿಂವ್ ಚಿಂವ್‌ಗುಟ್ಟಲು
ತಾಯಿ ಗುಬ್ಬಿ ಕೊಡುತ್ತ ಗುಟುಕನು
ತುಂಬಿಸುತ್ತಿತ್ತು ತೆರೆದ ಬಾಯನು
ಜಾರಿ ಬಿದ್ದಿತು ಒಂದು ಮರಿ
ಗುಬ್ಬಿ ಅಳುತಲಿದ್ದ ಪರಿ ನೋಡಿ
ಎತ್ತಿಟ್ಟ ಸ್ವಸ್ಥಾನದಲಿ ರಾಜು
ಚಿಂವ್‌ಗುಟ್ಟಿ ತಿಳಿಸಿತು ನೀ ಮಹಾರಾಜ
ಪ್ರಾಣಿ-ಪಕ್ಷಿಗಳಲಿ ತೋರಬೇಕು ಪ್ರೀತಿ
ದಯವೇ ಧರ್ಮದ ಮೂಲ ಆಗಬೇಕು ನೀತಿ
ಮಕ್ಕಳೆ ನೀವೆಲ್ಲ ಮರುಕ ತೋರಿರಿ
ಬುದ್ಧ ಮಹಾವೀರ ಬಸವ ತತ್ವ ಉಸಿರಿರಿ
*****