ಇಲ್ಲಿ, ಅಲ್ಲಿಹ, ಎಲ್ಲೆಲ್ಲೂ ಅವ ಮುಖಕ್ಕೆ ಪ್ರತಿಮುಖನಾಗಿಹನು
ಹಮ್ಮಿನ ಕೋಟೆಯ ಗೋಡೆಯ ತನ್ನಯ ಬಲಭುಜದಲಿ ಸೈತಾಗಿಹನು
ನಾನೋ ಅಗಸೆಯ ಸೀಮೆಗೆ ನಿಂತು ದಿಟ್ಟಿಸಿ ನೋಡೇ ನೋಡುವೆನು
ಬಯಲು ಬಯಲು ನಿರವಯಲಿನಾಚೆ ನಾನನಂತ ಅನಂತ ತೋಡುವೆನು
ಒಡವೆ ಒಡನೆ ಒಮ್ಮಗಲು ಕಾಂಬುದು ಅಗ್ಗಲು ಹಿಗ್ಗಲು ಭೂಭೂಮಾ
ಅದರ ಕಿಟಕಿಯಿಂದಿಣಿಕಿ ನೋಡಿದರೆ ಕಾಂಬೊಲವೆಲ್ಲವು ನಿಃಸೀಮಾ
ಸೆರೆಮನೆ ಎನ್ನುವುದು ಏತಕೊ ಒಡಲಿಗೆ ಕಾಂಬುದು ಅರಮನೆ ತುಣುಕು ಅದು
ಕೀಲುಕೀಲದಲಿ ಪೀಲುಪೀಲಿನಲಿ ರನ್ನದ ಕಣ ಕಣ ಮಿಣುಕುವದು
ಒಡಲು ನನ್ನದೋ ಒಡವೆಯು ಅವನದು ಉಸಿರವನದು ನಾ ಬರಿ ಹೆಸರು
ಖೇದಮೋದಗಳ ಪಯರಿನಲ್ಲಿಯೂ ಹಚ್ಚಗೆ ಎಸೆವುದು ಆ ಹೆಸರು
ಚಿರಂತನದ ಒಪ್ಪೆನುವೊಲು ಜನನದ ಘನಘನ ಮಾಲೆಯು ಸಾಗುವುದು
ನನ್ನ ಮರಣ ಅವನಮರತೆ-ಸೇರುವ ಸೇರುವೆ ಬಾಗಿಲವಾಗುವುದು
ಆಳ ಆಳ ಪಾತಾಳ ರಸಾತಳ ಕಾವಣದೊಳೊ ಎನೆ ಬಾಳುವನು
ಪೂಜೆಯಿಲ್ಲದಾ ಪೂಜ್ಯನು ಹೃದಯದಿ ಪೂ-ನಗೆ ಮುಗುಳಿಸಿ
ತಾಳುವನು.
*****