ಅಮ್ಮ ಹೇಳುತ್ತಿದ್ದಳು ನನಗೆ
ಸುಂದರ ಅಪ್ಸರೆಯ ಕಥೆಗಳನ್ನೇ
ನನ್ನ ಅಂಗಳದ ಮಾವಿನಗಿಡವೇ
ನನಗೆ ಜಗತ್ತಿನ ಸುಂದರ ವಸ್ತುವಾಗಿತ್ತು
ಮರಕೋತಿ ಆಟಕ್ಕೆ ಮೈದಾನವಾಗಿತ್ತು
ನಿರಂತರ ನನ್ನ ಭಾರ ಸಹಿಸುತ್ತಿತ್ತು.
ಟೊಂಗೆ ಟೊಂಗೆಯಲಿ ತುಂಬಿದ
ಗೆಳೆಯ-ಗೆಳತಿಯರ ಕಿಲಕಿಲವಿತ್ತು
ಮಿಡಿಗಾಯಿ ಕದ್ದು ತಂದು
ಜೇಬಿಗೆ ಉಪ್ಪು ತುರುಕಿಕೊಂಡದ್ದು
ಅಮ್ಮನಿಗೇನು ಗೊತ್ತು?
ಚಿಗುರು ಚಿಗುರಿಗೆ ಕುಳಿತ
ಗಿಳಿ ಕೋಗಿಲೆಗಳಿಂಚರ
ಹೂ-ಎಲೆ-ಮಿಡಿ ಹೊತ್ತ
ಮರ ಅದೆಷ್ಟು ಚಂದ
ಪಕ್ಕದ ಮನೆಯವರು
ಹಬ್ಬ ಹರಿದಿನಕ್ಕೆಂದು
ಕೀಳುತ್ತಿದ್ದರು ಮರದ ಎಲೆಗಳನ್ನು
ಆದರೂ ಅಂಗಳದಗಲಕ್ಕೂ
ಹಬ್ಬಿತ್ತು ಅದರ ವಿಶಾಲನೆರಳು!
ಇಂದು ಮರ ಬಿಕೋ ಎನ್ನುತ್ತಿದೆ
ಊರಿನ ಓಣಿ, ಗಲ್ಲಿ, ರಸ್ತೆಗಳೂ
ನನ್ನೊಂದಿಗೆ ಮುನಿಸಿಕೊಂಡಿವೆಯಲ್ಲ.
ಗೆಳತಿಯರೂ ಚಾಳಿ ಬಿಟ್ಟಿದ್ದಾರೆ
ಅದೊಂದು ದಿನವಿತ್ತು ಆಗ ನನ್ನೊಂದಿಗೆ
ಎಲ್ಲ ರಸ್ತೆಗಳೂ ಆಡಲು ಬರುತ್ತಿದ್ದವು
ಗಿಳಿ ಕೋಗಿಲೆಗಳೂ ಹಾಡುತ್ತಿದ್ದವು.
ಬಿಟ್ಟ ಕಣ್ಣು ಬಿಟ್ಟುಕೊಂಡು
ಇಂದು ತಾರಸಿ ನೋಡುತ್ತಿರುವೆ.
ಅದೊಂದು ದಿನವಿತ್ತು ಆಗ
ರಾತ್ರಿಯ ರೆಪ್ಪೆಗಳೂ ಭಾರ
ಮಾತಿನಲಿ ನದಿಯೇ ಹರಿಯುತ್ತಿತ್ತು.
ಈಗ ಮಾತಿನಲಿ ತೇವವಿಲ್ಲ
ಗೆಳತಿಯರ ಕಿಲಕಿಲವಿಲ್ಲ.
ನದಿಯು ಉಕ್ಕಿ ಹರಿಯುವುದಿಲ್ಲ.
*****