ಕೆಸರಲ್ಲಿ ಬಿದ್ದ ಬಡಪಶುವಿನಂತೆ
ಆನು ದೆಸೆದೆಸೆಗೆ ಬಾಯಿ ಬಿಡುತ್ತಿದ್ದೇನೆ
ಅಯ್ಯಾ
ಆರೈವವರಿಲ್ಲ
ಅಕಟಕಟಾ ಪಶುವೆಂದೆನ್ನ
ಕೂಡಲ ಸಂಗಮದೇವ
ಕೊಂಬ ಹಿಡಿದೆತ್ತುವನ್ನಕ್ಕ
[ಆನು-ನಾನು, ಆರೈವರಿಲ್ಲ-ಆರೈಕೆಮಾಡುವವರಿಲ್ಲ]
ಬಸವಣ್ಣನ ಈ ವಚನ ಅಸಹಾಯಕತೆಯನ್ನು ಕುರಿತದ್ದು. ಈ ವಚನವನ್ನು ಕುರಿತು ಹೇಳುತ್ತಾ ಸುಜನಾ ಅವರು ಆಡಿದ ಮಾತುಗಳನ್ನು ಮರೆಯಲು ಆಗಿಲ್ಲ.
ಬಸವಣ್ಣ ಇಲ್ಲಿ ತನ್ನನ್ನು ಕೆಸರಿನಲ್ಲಿ ಸಿಕ್ಕಿಕೊಂಡ ಹಸುವಿಗೆ ಹೋಲಿಸಿಕೊಂಡಿದ್ದಾನೆ. ಅಸಹಾಯಕನಾಗಿ, ನನ್ನನ್ನು ಯಾರೂ ಆರೈಕೆ ಮಾಡುವವರಿಲ್ಲ, ವಿಚಾರಿಸುವವರಿಲ್ಲ, ಕೂಡಲಸಂಗಮನೇ ಬಂದು ಕೊಂಬ ಹಿಡಿದು ಎತ್ತಬೇಕು ಅನ್ನುತ್ತಾನೆ. ಸರಿ. ಆದರೆ ಗಮನಿಸಿ ನೋಡಿ. ಸಾಮಾನ್ಯ ಕವಿಯಾಗಿದ್ದರೆ ಕೊನೆಯ ಸಾಲಿಗೆ ಬರುವವೇಳೆಗೆ `ನನ್ನ ಕೈ ಹಿಡಿದು ಎತ್ತುವವರೆಗೆ’ ಅನ್ನಬಹುದಿತ್ತು. ಆದರೆ ಬಸವಣ್ಣ ಇಲ್ಲಿ ಕೇವಲ ಹಸುವಿನ ಹೋಲಿಕೆಯನ್ನು ಬಳಸುತ್ತಿಲ್ಲ, ರೂಪಕವನ್ನು ಬಳಸುತ್ತಿದ್ದಾನೆ. ಅಲ್ಲ, ತಾನೇ ಕೆಸರಿನಲ್ಲಿ ಸಿಕ್ಕಿಬಿದ್ದ ಹಸುವಾಗಿದ್ದಾನೆ. ಅಷ್ಟು ತನ್ಮಯತೆ ಇರುವುದರಿಂದಲೇ ಕೊನೆಯ ಸಾಲಿನಲ್ಲಿ ಕೊಂಬ ಹಿಡಿದೆತ್ತು ಎಂದಿದ್ದಾನೆ. ಇದು ಸುಜನಾ ಅವರು ಕೊಟ್ಟ ವಿವರಣೆ.
ಮಾತಿನಲ್ಲಿ ತನ್ನನ್ನು ಹಸುವಿಗೆ ಹೋಲಿಸಿಕೊಂಡವನು ತಲ್ಲೀನನಾಗಿ ತಾನೇ ಹಸು ಎಂದು ಭಾವಿಸುವಷ್ಟು ತಾದಾತ್ಮ್ಯ ಹೊಂದುವುದು ಇದೆಯಲ್ಲ ಅದು ಅಪರೂಪ. ಕವಿಗೆ ಮತ್ತು ಭಕ್ತನಿಗೆ ಇಬ್ಬರಿಗೂ ಇಂಥ ತಾದಾತ್ಮ್ಯ ಬೇಕು. ಆಗ ಮಾತ್ರ ಮಾತು ಬರಿಯ ಮಾತಾಗಿ ಉಳಿಯದೆ ಶಕ್ತಿಯಾಗುತ್ತದೆ. ಇಂಥ ತಾಕತ್ತು ಇರುವ ವ್ಯಕ್ತಿ ಮಾತ್ರ ನುಡಿದಂತೆ ನಡೆಯುವ ಮಾತು ಆಡಬಲ್ಲ.
*****