ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ ಹಿಡಿದಹೆನೆಂದರೆ
ಸಿಕ್ಕದೆಂಬ ಬಳಲಿಕೆಯ ನೋಡಾ
ಕಂಡುದನೆ ಕಂಡು ಗುರುಪಾದವ ಹಿಡಿದಲ್ಲಿ
ಕಾಣದುದ ಕಾಣಬಹುದು ಗುಹೇಶ್ವರಾ
ಅಲ್ಲಮನ ವಚನ. ಕಂಡದ್ದನ್ನು ಬಿಟ್ಟು ಕಾಣದಿರುವುದನ್ನು ಹುಡುಕಿ ಹಿಡಿಯುತ್ತೇನೆಂದು ಹೊರಟರೆ ಸಿಕ್ಕದು ಎಂಬ ಬಳಲಿಕೆಯಷ್ಟೇ ಆಗುತ್ತದೆ. `ಕಾಣುತ್ತಿರುವುದು’ ಸಾಮಾನ್ಯವೆಂದೂ ಅರ್ಥಹೀನವೆಂದೂ ಬಗೆದು ಕಾಣದ ಸತ್ಯವನ್ನು ಹುಡುಕಿ ನಾವೆಲ್ಲ ಬಳಲುವುದೇ ಹೆಚ್ಚು. ಹೀಗೆ ಕಣ್ಣೆದುರಿಗೆ ಇರುವುದನ್ನು ಸರಿಯಾಗಿ ನೋಡದೆ ಕಾಣದ ಸತ್ಯಕ್ಕೆ ಬಳಲುವುದು ವ್ಯರ್ಥ ಅನ್ನುತ್ತಾನೆ ಅಲ್ಲಮ.
ಕಂಡುದನೆ ಕಂಡು ಅನ್ನುವಾಗ ಕಾಣು ಅನ್ನುವ ಪದದ ಸಮಗ್ರ ಅರ್ಥವನ್ನು ಮನಸ್ಸಿಗೆ ತಂದುಕೊಳ್ಳಬೇಕು. ನೋಡುವುದಕ್ಕೂ ಕಾಣುವುದಕ್ಕೂ ಇರುವ ವ್ಯತ್ಯಾಸವನ್ನೂ ಗಮನಿಸಬೇಕು. ನಾವೆಲ್ಲ ಸಾಮಾನ್ಯವಾಗಿ ಸುಮ್ಮನೆ ನೋಡುವುದೇ ಹೊರತು ಗಮನಿಸಿ ಕಾಣುವುದು ಕಡಮೆ. ಮರವೊಂದನ್ನು ಒಟ್ಟಾರೆಯಾಗಿ ಸುಮ್ಮನೆ ನೋಡುತ್ತೇವೆ, ಅದರ ರಂಬೆ, ಕೊಂಬೆ, ಟಿಸಿಲು, ಎಲೆ, ಕಾಂಡ, ತೊಗಟೆ ಇತ್ಯಾದಿಯಾಗಿ ಇರುವುದನ್ನೆಲ್ಲ ಗಮನಿಸಿ ನೋಡುವುದು ಕಡಮೆ. ಆದ್ದರಿಂದಲೇ ಕಾಣುವುದನ್ನೆ `ಕಂಡರೆ’ ಹಾಗೆ ಕಾಣಿಸಬಲ್ಲ ಗುರುವನ್ನು ಒಪ್ಪಿಕೊಂಡರೆ ಕಾಣದೆ ಇರುವುದು ಕೂಡ ಕಾಣುತ್ತದೆ ಅನ್ನುತ್ತಾನೆ.
ಕಾಣಬಲ್ಲ ಗಮನಕ್ಕೆ ಕಾಣಿಸದ ಸಂಗತಿ ಯಾವುದೂ ಇರಲಾರದು. ಬುದ್ಧಿ ಇದನ್ನು ಒಪ್ಪಿತು, ಆದರೆ ಕಾಣುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ನಮಗೆ ಅಡ್ಡಿಯಾಗಿರುವುದಾದರೂ ಏನು?
*****