ಪಾಂಡು-ಮಾದ್ರಿಯರ ಪ್ರಸಂಗ

-ಹಸ್ತಿನಾಪುರದಲ್ಲಿ ಧೃತರಾಷ್ಟ್ರನಿಗೆ ಗಾಂಧಾರಿ ಮತ್ತು ದಾಸಿಯರಿಂದ ದುರ್ಯೋಧನ ದುಶ್ಯಾಸನಾದಿಯಾಗಿ ನೂರೊಂದು ಮಂದಿ ಮಕ್ಕಳು ಜನಿಸಿ ಸಂತಸವನ್ನುಂಟುಮಾಡಿದ್ದರೆ, ಅತ್ತ ಪಾಂಡುವು ನಿಯೋಗಪದ್ಧತಿಯಲ್ಲಿ ಕುಂತಿಯಿಂದ ಯುಧಿಷ್ಠಿರ, ಭೀಮ, ಅರ್ಜುನರೆಂಬ ಮೂರು ಮಂದಿ ಮಕ್ಕಳನ್ನೂ ಮಾದ್ರಿಯಿಂದ ನಕುಲ, ಸಹದೇವರೆಂಬ ಇಬ್ಬರು ಮಕ್ಕಳನ್ನೂ ಪಡೆದುಕೊಂಡ ಬಳಿಕ ಇನ್ನೂ ಕೆಲವು ಕಾಲ ಅಲ್ಲಿನ ಪ್ರಶಾಂತ ವಾತಾವರಣದಲ್ಲಿಯೇ ಇರಲಿಚ್ಛಿಸಿ ಹಿಮಾಲಯದ ಶತಶೃಂಗ ಪರ್ವತಗಳ ತಪ್ಪಲಿನಲ್ಲಿ ಆಶ್ರಮವೊಂದನ್ನು ನಿರ್ಮಿಸಿಕೊಂಡು ಐವರು ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿದನು. ಹೀಗೆ ನಾಲ್ಕು ವರ್ಷಗಳು ಕಳೆದುವು-

ವಸಂತಮಾಸದ ಸಮಯದೊಳೊಂದಿನ ಎಲ್ಲೆಡೆಯಲ್ಲೂ ಸಂಭ್ರಮವು
ಮಾವಿನ ಚಿಗುರಲಿ ಕೋಗಿಲೆ ಕೂಜನ ಅರಳಿದ ಹೂಗಳ ಸಿರಿನಗುವು
ಸಂಭ್ರಮದಿಂದಲಿ ಮಧುವನು ಹೀರುವ ಸೊಕ್ಕಿದ ದುಂಬಿಯ ಝೇಂಕಾರ
ಸಗ್ಗದ ಸೊಬಗಿನ ಹಿಗ್ಗಿನ ಹಗಲಲಿ ಕಾಮನಬಿಲ್ಲಿನ ಠೇಂಕಾರ!
ಪಾಂಡುರಾಜನಲಿ ಹೊಸ ಬದಲಾವಣೆ ವರ್ಣಿಸಲಾಗದ ಅನುಭೂತಿ
ನವಚೇತನದುತ್ಸಾಹವು ಅವನಲಿ ಯೌವನ ಕಾಲದ ಸಂಕ್ರಾಂತಿ
ವೈದ್ಯರು ಅನುದಿನ ನೀಡಿದ್ದಂತಹ ಚಿಕಿತ್ಸೆ ಫಲಕೊಡತೊಡಗಿತ್ತು
ಪುರುಷತ್ವದ ಲಕ್ಷಣ ಅವನೆದೆಯಲಿ ಪುಟಿದೇಳಲು ಹಾತೊರೆದಿತ್ತು!
ಪೂರ್ಣ ಚಿಕಿತ್ಸೆಯು ಫಲಿಸುವವರೆಗೂ ಹೆಣ್ಣಿನ ಸಂಗವು ಬೇಡೆಂದು
ಮಕ್ಕಳ ಫಲಕ್ಕೆ ಚಿಕಿತ್ಸೆ ನೀಡಿದ ಸಿದ್ಧರು ನುಡಿದಿದ್ದರು ಅಂದು
ಆದರೆ ಸಿದ್ಧರ ಮಾತನು ಮರೆತನು ಚಿಕಿತ್ಸೆ ಫಲಿಸಿದ ಭರದಲ್ಲಿ
ಉತ್ಸಾಹದ ಅಮಲೇರುತಲಿದ್ದಿತು ಉಕ್ಕುವ ಅಲೆಗಳ ತೆರದಲ್ಲಿ!
ಹಲವು ವರುಷಗಳ ತಪಸಿನ ಫಲವದು ಸಿದ್ಧಿಸಿ ಅವನಿಗೆ ಒಲಿದಿರಲು
ತನ್ನಯ ಅಂಶದ ಮಗನನ್ನು ಪಡೆಯುವ ಕಾತರ ಅವನಲಿ ಬಲಿತಿರಲು
ಪಟ್ಟದರಾಣಿಯು ಕುಂತಿಗೆ ತಿಳಿಸದೆ ಕಿರಿಯ ಮಡದಿಯಲಿ ಅನುರಕ್ತ
ಸುರಸುಂದರಿ ಆ ಮಾದ್ರಿಯ ಮೋಹದಿ ಉಕ್ಕುತಲಿದ್ದಿತು ಬಿಸಿರಕ್ತ!

ಪಾಂಡುವು ಸಂತಸದಲೆಯಲ್ಲಿ ತೇಲುತ ಅವಳಲಿ ಮನವನು ನಿಲಿಸಿದನು
ತನ್ನಲ್ಲಿಯ ಬದಲಾವಣೆಯೆಲ್ಲವ ಮೆಲ್ಲನೆ ಅವಳಿಗೆ ಉಸುರಿದನು
ವಿಷಯವ ತಿಳಿಯುತ ಹಿಗ್ಗಿದ ಮಾದ್ರಿಯು ಸ್ವರ್ಗವ ಕಾಣಲು ಕಾತರಿಸಿ
ಕುಂತಿಗೆ ಮೂವರು ಮಕ್ಕಳು ಇರುವರು ತನಗಿಬ್ಬರು ಎಂಬುದ ತಿಳಿಸಿ
ಗಂಡನ ಹೇಗೋ ಒಪ್ಪಿಸಿಬಿಟ್ಟಳು ಮಂಡಿಸಿ ತನ್ನಯ ಸಿದ್ಧಾಂತ
ಕುಂತಿಯ ಕಣ್ಣನು ತಪ್ಪಿಸಿ ಇಬ್ಬರೂ ನಡೆದರು ಹುಡುಕುತ ಏಕಾಂತ!

ಆಹಾ! ಚಿಗುರಿತು ಹಸುರಿನ ಪಲ್ಲವ ಓಹೋ! ವಸಂತನಾಗಮನ
ಕುಹೂ ಕುಹೂ ಕೋಗಿಲೆ ಕೂಜನದಲ್ಲಿ ಆಹಾ! ಅದೆಂತಹ ಮಧುಗಾನ
ಮಧುರ ಮಧುರ ಮಧು ಮಲ್ಲಿಗೆ ಬನದಲಿ ಮದೋನ್ಮತ್ತ ದುಂಬಿಯ ಗಾನ
ಮಧುವು ತುಂಬಿ ಹೂವೆದೆಯ ಭಾಂಡದಲಿ ಮಧುಕರನಿಗೆ ಅಮೃತಪಾನ

ವಸಂತಮಾಸದ ಹಸುರಿನ ಪರಿಮಳ ಎಲ್ಲೆಡೆಯಲ್ಲೂ ಹರಡಿರಲು
ಹಸುರಿನ ಚಿಗುರಲಿ ಅರಳಿದ ಹೂಗಳು ದುಂಬಿಯ ತನ್ನೆಡೆ ಸೆಳೆದಿರಲು
ಹರಿಯುವ ನದಿಯಲ್ಲಿ ಅಲೆಗಳ ಕಲರವ ಕಿವಿಗಳಿಗಿಂಪನು ಸುರಿದಿರಲು
ಬಿಸಿಲಿನ ಬೇಗೆಯ ತಣಿಸಲು ಮೆಲ್ಲಗೆ ತಣ್ಣನೆ ಗಾಳಿಯು ತೀಡಿರಲು
ಪಾಂಡುವು ಮಾದ್ರಿಯು ಸಂಭ್ರಮದಿಂದಲಿ ನಡೆದರು ಹರಿಯುವ ನದಿಯ ಬಳಿ
ಚೆಂದದಿ ಹರಿಯುವ ಸುಂದರ ಜಲದಲಿ ಮಿಂದರು ದಂಪತಿ ಜೊತೆಯಲ್ಲಿ
ಒಬ್ಬರ ಮೇಲಿನ್ನೊಬ್ಬರು ನೀರನು ಎರಚುತ ಕ್ರೀಡೆಯನಾಡಿದರು
ಬ್ಬರೂ ತಬ್ಬಿ ಅಬ್ಬರದಲೆಯಲಿ ಜೊತೆಜೊತೆಯಲ್ಲಿಯೆ ತೇಲಿದರು!
ಯೌವನದುತ್ಸಾಹದಿ ಮುಳುಗೇಳುವ ದಂಪತಿ ಮೈಗಳ ಶಾಖಕ್ಕೆ
ಹರಿಯುವ ನದಿಯೂ ಬಿಸಿಯೇರಿದ್ದಿತು ಬದುಕಿನಲ್ಲಿ ಅಪರೂಪಕ್ಕೆ
ತೇಲುತ ಮುಳುಗುತ ಆಟವನಾಡುತ ಕೈಗಳ ಬೆಸೆಯುತ ಹೊರಬಂದು
ತೀರದ ಮರಳಲಿ ಆಡುತ ಹೊರಳುತ ನೀರೊಳಗುರುಳುತ ಮಿಂದೆದ್ದು
ದಾಹದಿ ದಹಿಸುವ ದೇಹಗಳೆರಡನು ತಣಿಸುವ ಯತ್ನವ ಮಾಡಿದರು
ದೇಹದ ನರನಾಡಿಗಳಲ್ಲಿ ತುಂಬಿದ ಮೋಹದ ಜೊತೆಯಲಿ ಆಡಿದರು!
ದಡದಲಿ ಬೆಳೆದಿಹ ಹಚ್ಚನೆ ಹಸುರಿನ ಗರಿಕೆಯೆ ಮೇಲುರುಳಾಡುತ್ತ
ಹುಲ್ಲಿನ ಮೆತ್ತನೆ ಹಾಸಿಗೆಯಲ್ಲಿಯ ಬೆಚ್ಚನೆಯಪ್ಪುಗೆ ಸವಿಯುತ್ತ
ಇಷ್ಟೂ ಕಾಲದ ಸಂಕಟವೆಲ್ಲವ ಜಾಡಿಸಿ ದೂರಕೆ ದೂಡಿದರು
ಇಚ್ಚೆಯನರಿತಿಹ ಸುಂದರ ದಂಪತಿ ಸ್ವರ್ಗಕೆ ಕಿಚ್ಚನು ಹಚ್ಚಿದರು!
ಹಿಂದಿನ ದಿನಗಳು ನೆನಪಿಗೆ ಬಂದವು ಯೌವನದಲ್ಲಿನ ಘಳಿಗೆಗಳು
ಅರಮನೆಯಲ್ಲಿನ ದಾಸಿಯರೊಂದಿಗೆ ಕಳೆದಂತಹ ರಸನಿಮಿಷಗಳು
ಅಂಕೆಯು ಇಲ್ಲದೆ ಹರಿದಾಡಿದ್ದನು ಯೌವನ ಮದದಲಿ ಆ ದಿನವು
ಬೆಂಕಿಯ ಸಂಗಡ ಸರಸವಾಡಿದ್ದ ಅಂಗನೆ ಸಂಗದೊಳನುದಿನವು!
ಇಂದಿನ ಆನಂದಕೆ ಸಮವೆಲ್ಲಿದೆ? ಗಂಡಸು ಎನಿಸಿದ ಸಂತಸವು!
ಹೆಂಡತಿಯರು ಅವರೆಷ್ಟೇ ಇದ್ದರೂ ಬಂಡನು ಉಣಿಸುವ ಸಂಭ್ರಮವು
ಚಿನ್ನದ ಬಣ್ಣದ ಸುಂದರಿ ಎನಿಸಿದ ಮಾದ್ರಿಯ ಸಂಗವು ಒಂದು ಕಡೆ
ತನ್ನಯ ಅಂಶದಿ ಮಗುವನು ಪಡೆವೆನು ಎನ್ನುವ ಖುಷಿ ಇನ್ನೊಂದು ಕಡೆ
ಸುಖವನು ಸೂರೆಯ ಮಾಡುತ ಪಾಂಡುವು ಮಾದ್ರಿಯ ಸಂಗಡ ರಮಿಸಿದನು
ಮುಖವನು ಹುದುಗಿಸಿ ಅವಳೆದೆ ಬಯಲಲಿ ಹಾಗೆಯೆ ನಿದ್ರೆಗೆ ಜಾರಿದನು!

ಹರಿಯುವ ನದಿಯೂ ಪರವಶಗೊಳ್ಳುತ ಮೆಲ್ಲಗೆ ತವಳಲು ತೊಡಗಿತ್ತು
ಬಿರಿದಿಹ ಹೂವು ದುಂಬಿಗೆ ಬಂಡನು ಉಣಿಸಿ ಧನ್ಯತೆಯ ಪಡೆದಿತ್ತು
ನೀರಿನ ಮೇಗಡೆ ಬೀಸುವ ತಣ್ಣನೆ ಗಾಳಿಯು ಹಿತವನು ನೀಡಿತ್ತು
ಹಸುರಿನ ಎಲೆಗಳ ಮರ್ಮರ ಧ್ವನಿಯೂ ತಾಳವ ಹಾಕುತ ಹಾಡಿತ್ತು
ತಾಳಮೇಳಗಳು ಹೊಂದಿಕೆಯಾಗುತ ಹೊಸರಾಗವು ಒಡಮೂಡಿತ್ತು
ಸರಿಗಮಪದನಿಸ ರಾಗವ ಗುನುಗುತ ಪರಿಸರದಲ್ಲಿ ಬೆರೆತಾಡಿತ್ತು
ಸಂಗೀತದ ಸುಧೆ ಎಲ್ಲೆಡೆಯಲ್ಲೂ ಸಂತಸದಲಿ ಹೊರಹೊಮ್ಮಿತ್ತು
ತಲ್ಲೀನತೆಯಲಿ ಮೈಮರೆಯುತ್ತಲಿ ಕವಿಮನ ಹಾಡಲುತೊಡಗಿತ್ತು!

ಮಾದ್ರಿಯು ಮಂಪರಿನಲ್ಲಿಯೆ ಇದ್ದಳು ಮರದಡಿ ತಣ್ಣನೆ ನೆರಳಲ್ಲಿ
ಮೆಲ್ಲನೆ ನಿಮಿಷಗಳುರುಳುತಲಿದ್ದವು, ಪಾಂಡುವು ಮಾದ್ರಿಯ ಮಡಿಲಲ್ಲಿ
ಹಕ್ಕಿಯ ಕಲರವ ಎಚ್ಚರಿಸಿದ್ದಿತು ಸುಖದಲಿ ಮುಳುಗಿದ ಮಾದ್ರಿಯನು
ಮೆಲ್ಲನೆ ಮಾದ್ರಿಯು ಕಣ್ಣನು ತೆರೆಯುತ ಒಲವಲಿ ಕರೆದಳು ಇನಿಯನನು
ಪಾಂಡುವು ಸುಮ್ಮನೆ ಮಲಗೇ ಇದ್ದನು ಅತ್ತಿತ್ತಲುಗದೆ ಇದ್ದಲ್ಲಿ
ಮಾದ್ರಿಯು ಅವನನು ಅಲುಗಿಸಿ ನೋಡಲು ಉತ್ತರವಿರಲಿಲ್ಲವನಲ್ಲಿ!
ಮಧುರತೆ ತುಂಬಿದ ಸುಖವನು ಉಣಿಸಿದ ದೇಹವು ನಿಶ್ಚಲವಾಗಿತ್ತು
‘ಅಯ್ಯೋ!’ ಎನ್ನುತ ಚೀರಿದ ವನಿತೆಯ ಮಾರ್ಧನಿ ಎಲ್ಲೆಡೆ ಮೊಳಗಿತ್ತು!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಪ
Next post ವಚನ ವಿಚಾರ – ಕಂಡದ್ದು ಕಾಣದ್ದು

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…