ನಾನೀಗ ದಾರಿ ದೀಪಗಳ ಹಿಡಿದು
ಹೆದ್ದಾರಿಯಲಿ ಹೆಜ್ಜೆ ಹಾಕುತ್ತಿರುವೆ.
ಇತಿಹಾಸದ ಹಳವಂಡಗಳು, ಕೋವಿಗಳ
ಸದ್ದುಗಳು, ಎಲ್ಲಿಯೋ ಆಳದಲಿ ಕೇಳುವ
ಬಿಕ್ಕಳಿಕೆಗಳು, ಕಸಾಯಖಾನೆಯ ಆಕ್ರಂದನಗಳು
ಚೆನ್ನಾಗಿ ನನ್ನ ಗುದ್ದುತ್ತಲಿದೆ. ಮತ್ತೆ ನಾನು
ಉಡಿಯಲ್ಲಿ ಕವಿತೆಗಳ ಕಟ್ಟಿಕೊಂಡು ಅಲೆಯುತ್ತಿರುವೆ.
ಕಲ್ಲುದೇವರ ಪೂಜಿಸಿದರ ಕಣ್ಣರೆಪ್ಪೆಗೆ
ಹಾಲೆರದ ಕೈಗಳಿಗೆ, ಅನಾಥಶ್ರಮದ ಪುಟ್ಟ
ಕಂದಮ್ಮಗಳು ಅಳು ಎದೆ ಅಲ್ಲಾಡಿಸುವದಿಲ್ಲ.
ಮದುವೆ ಮಂಟಪದಲಿ ಮೆನ್ಯುಗಳ ಸಾಲಿನಲ್ಲಿ
ಸ್ತುತಿಗಳ ಅವಲೋಕನ, ಗುಡಿಸಿಲುಗಳ
ಬದುಕಿನ ರಂಗನ್ನೂ ಹೊರದಬ್ಬಿದವರ ಸಾಲು
ಮಂದಿಯ ಮಾತುಗಳು ನನಗೆ ಅರ್ಥವಾಗುವುದಿಲ್ಲ.
ದಟ್ಟ ಅಡವಿಯಲಿ ಕಲ್ಲುಪುಡಿಯಲಿ ಒಸರಿದ ನನ್ನ
ಕವಿತೆ ನದಿಯಾಗಿ ಹರಿದು ಬಯಲ ಹಸಿರು,
ವನಸುಮದ ಪಿಸುಗುಡುವ ಕಸುವೆಲ್ಲಾ
ಕನಸಾಗಿ, ದುಮ್ಮಕ್ಕುವ ಶಕ್ತಿ, ಜೀವ ಸೆಲೆ ನನ್ನ
ಮಕ್ಕಳು, ಮರೆವಷ್ಟು ದೂರ ನಡೆದು ಜೀವನ
ದಾರಿ ಉದ್ದುದ್ದ ಬುದ್ಧ ಮಾರ್ಗ, ದಿಗಂತದ
ತುಂಬ ಚುಕ್ಕಿ ಚಂದ್ರ ತಾರೆಗಳು ಮರೆತು
ನಡೆಯಲಾರೆನು ನಾನು.
*****