ಎನಗೆ ಮನೆ ಇಲ್ಲ
ಎನಗೆ ಧನವಿಲ್ಲ
ಮಾಡುವುದೇನು ನೀಡುವುದೇನು
ಮನೆ ಧನ ಸಕಲಸಂಪದಭ್ಯುದಯವುಳ್ಳ
ನಿಮ್ಮ ಶರಣರ ತಪ್ಪಲಕ್ಕಿಯನಾಯ್ದು ತಂದು
ಎನ್ನೊಡಲ ಹೊರೆವನಾಗಿ
ಅಮರೇಶ್ವರ ಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ
[ತಪ್ಪಲಕ್ಕಿ-ಚೆಲ್ಲಿ ಬಿದ್ದ ಅಕ್ಕಿ]
ಆಯ್ದಕ್ಕಿ ಮಾರಯ್ಯನ ವಚನ. ಪಡೆದುಕೊಳ್ಳುವ ಆಸೆಯಂತೆ ಕೊಡುವ ಆಸೆಯೂ ಬಯಕೆಯೇ ಅಲ್ಲವೇ! ಕೊಡುವ ಆಸೆಯೂ ಇಲ್ಲ ಎಂದು ನಿಜವಾದ ವಿ-ರಕ್ತ ಸ್ಥಿತಿಯನ್ನು ಈ ವಚನ ಹೇಳುವಂತಿದೆ. ನನಗೆ ಮನೆ ಇಲ್ಲ, ಧನ ಇಲ್ಲ, ಅವು ಇರುವವರು ಕೊಡುತ್ತಾರೆ, ಕೊಡಲು ಬಯಸುತ್ತಾರೆ. ನಾನು ಅವರ ಮನೆಯಲ್ಲಿ ನೆಲದ ಮೇಲೆ ಬಿದ್ದ ಅಕ್ಕಿಯನ್ನು ಆಯ್ದು ತರುವವನು. ಹಾಗಾಗಿ ಅಮರೇಶ್ವರಲಿಂಗಕ್ಕೆ ಕೊಡುವ ಆಸೆಯೂ ಇಲ್ಲ. ಅಥವಾ ಅಂಥ ಅಕ್ಕಿಯನ್ನು ತನ್ನ ಲಿಂಗಕ್ಕೆ ಅರ್ಪಿಸಲಾರೆ ಅನ್ನುವ ಹಿಂಜರಿಕೆ ಇದೆಯೋ?
*****