ಇನಿಯಂಗೆ ತವಕವಿಲ್ಲ
ಎನಗೆ ಸೈರಣೆಯಿಲ್ಲ
ಮನದಿಚ್ಛೆಯನರಿವ ಸಖಿಯರಿಲ್ಲ
ಇನ್ನೇವೆನವ್ವಾ
ಮನುಮಥವೈರಿಯ ಅನುಭಾವದಲ್ಲಿ ಎನ್ನ ಮನ ಸಿಲುಕಿ ಬಿಡದು
ಇನ್ನೇನ ಮಾಡುವೆನೆಲೆ ಕರುಣವಿಲ್ಲದ ತಾಯೆ
ದಿನ ವೃಥಾ ಹೋಯಿತ್ತಾಗಿ ಯೌವನ ಬೀಸರವಾಗದ ಮುನ್ನ
ಪಿನಾಕಿಯ ನೆರಹವ್ವಾ ಶಂಭುಜಕ್ಕೇಶ್ವರನ
[ಬೀಸರವಾಗದ ಮುನ್ನ-ವ್ಯರ್ಥವಾಗುವ ಮುನ್ನ]
ಸತ್ಯಕ್ಕನ ವಚನ. ಭಕ್ತಿ ಪ್ರೀತಿಗಳೆರಡೂ ತೀವ್ರವಾಗಿ ಬೆರೆತ ಮಾತು ಇಲ್ಲಿದೆ.
ನನ್ನ ಪ್ರೇಮಿಗೆ ನನ್ನ ಕೂಡಬೇಕೆಂಬ ತವಕ ಇಲ್ಲ, ನನಗೆ ಕಾಯುವ ಸಹನೆ ಇಲ್ಲ, ನನ್ನ ಮನಸ್ಸನ್ನು ತಿಳಿಯುವ ಗೆಳತಿಯರೂ ಇಲ್ಲ. ಏನು ಮಾಡಲಿ, ಸಹಿಸಲಾರೆ, ಅಮ್ಮಾ ನನ್ನ ಮನಸ್ಸು ಮನ್ಮಥವೈರಿಯ ಅನುಭಾವದಲ್ಲಿ ಸಿಕ್ಕಿಕೊಂಡಿದೆ, ನೀನೂ ಕರುಣೆ ಇಲ್ಲದ ತಾಯಿ, ನನ್ನ ದಿನಗಳು ವೃಥಾ ಕಳೆದು ಹೋಗುತ್ತ ನನ್ನ ಯೌವನ ವ್ಯರ್ಥವಾಗುವ ಮೊದಲು ಶಂಭುಜಕ್ಕೇಶ್ವರನೊಡನೆ ನನ್ನನ್ನು ಕೂಡಿಸು.
ಪ್ರೇಮಿಯ ವೈಚಿತ್ರ (ಅವನು ಮನ್ಮಥವೈರಿಯಾದ್ದರಿಂದಲೇ ಅವನಿಗೆ ತವಕವಿಲ್ಲ), ಸಮವಯಸ್ಕ ಗೆಳೆತಿಯರಿಲ್ಲದ ಒಂಟಿತನದ ಭಾರ, ತಾಯಿಯೊಡನೆ ಹೇಳಬಾರದ ಮಾತಾದರೂ ಅವಳಲ್ಲದೆ ಬೇರೆ ಗತಿ ಇಲ್ಲ ಎಂಬ ಅಸಹಾಯಕತೆ, ಶಂಭುಜಕ್ಕೇಶ್ವರನೊಡನೆ ನನ್ನ ಕೂಡಿಸು ಎಂದು ಮಗಳಾಗಿ ಸಂಕೋಚಬಿಟ್ಟು ಕೇಳಲೇಬೇಕೆಂಬ ಭಾವದ ಒತ್ತಡ ಇವೆಲ್ಲ ತೀವ್ರವಾದ ಕಾವ್ಯರೂಪದಲ್ಲಿ ವ್ಯಕ್ತವಾಗಿವೆ.
*****