(ನಾಲ್ಕೈದು ಗೆಳೆಯರು ಕೂಡಿ ಸಾಹಿತ್ಯ ಕ್ರೀಡೆಯಾಡುತಲಿದ್ದೆವು. ಗೆಳೆಯನೋರ್ವನು ನನಗೆ ಪುಚ್ಛ, ಪಲ್ಲಕ್ಕಿ, ಪರಮೇಶ, ಪರ್ವತ, ಪಟ ಈ ಐದು ಶಬ್ದಗಳನ್ನು ಪ್ರಯೋಗಿಸಿ, ಜನಪದ ಶೈಲಿಯಲ್ಲಿ ಈ ಕೂಡಲೆ ಒಂದು ಪದ ಕಟ್ಟು ಎಂದ. ಆಗೆ ಹಾಡಿದ ಹಾಡಿದು)
ಪುಚ್ಛವೆಂದೆನಬೇಡ, ಅಚ್ಚಗನ್ನಡವಲ್ಲ|
ಪುಚ್ಛವೆಂಬುದಕೆ ‘ಗರಿ’ಯೆನ್ನು | ಗೆಳೆರಾಯ |
ಹರುಷದಲಿ ಹಾಡು ಹಾಡೇನ || ೧ ||
ಪಲ್ಲಕ್ಕಿಯೇರ್ಯಾನ, ಪರಮೇಶಬಂದಾನ |
ಬ್ರಹ್ಮ, ವಿಷ್ಣುಗಳು ಕೂಡ್ಯಾರ | ಗೆಳೆರಾಯ |
ದತ್ತಾವತಾರವಾಗೇದ || ೨ ||
ದತ್ತಮೂರ್ತಿಯನಾಮ, ನರಲೋಕಕತಿಪ್ರೇಮ |
ಅಂಬಿಕಾತನಯಗಿತ್ತಾರ | ಗೆಳೆರಾಯ |
‘ಗರಿ’ ಗವನೆ ಜನ್ಮಕೊಟ್ಟಾನ || ೩ ||
ಗರಿಯೆನಗೆ ಗುರುವಾಯ್ತು, ಪರ್ವತದ ಸಾಲಾಯ್ತು |
ಕೊನೆಯಿಲ್ದ ಕಡಲು ನನಗಾಯ್ತು | ಗೆಳೆರಾಯ |
ಬೇಡಿದುದ ಕೊಟ್ಟು ಕಳಿಸೀತು || ೪ ||
ಗರಿಯಾಗಿ ಹಾರೇನ, ಗಿರಿಯಾಗಿ ಮೆರೆದೇನ |
ಪಟವಾಗಿ ಮುಗಿಲ ಮುಟೇನ | ಗೆಳೆರಾಯ |
ಪರಶಿವನ ಪಾದ ಕಂಡೆನ || ೫ ||
ಗರಿಯೆನ್ನ ಬಳಿಗಿರಲಿ, ಗುರುವಿನ ಬಲವಿರಲಿ |
ಸರಸತಿಯ ವೀಣೆ ನುಡಿತಿರಲಿ | ಗೆಳೆರಾಯ |
ಹರುಷದಲಿ ಹಾಡು ಹಾಡೇನ || ೬ ||
*****