ಆ ಹಳೇ ಮರದ ಬೇರುಗಳು ನನ್ನ
ಎದೆಯ ಗೂಡಿನೊಳಗೆ ಇಳಿದು ಭಾಷೆ
ಪರಿಭಾಷೆಯಾಗಿ ಸಂವತ್ಸರಗಳು ಉರುಳಿ
ಓದುತ್ತಿರುವ ಅಕ್ಷರಗಳು, ಸಾಕ್ಷಿಯಾಗಿವೆ
ಕವಿತೆಗಳು.
ದಟ್ಟ ನೆರಳಿನ ಬೇವಿನ ಬಡ್ಡಿಗೆ ಒರಗಿದ
ಅವ್ವನ ಬೆವರ ಹನಿಗಳು ಇಂಗಿ ನೀಲಿ ಆಕಾಶದ
ತುಂಬ ಬದುಕಿನ ಬಿಳಿ ಮೋಡಗಳು ಕದಲಿ,
ಗಾಳಿ ಮಳೆ ಬಿಸಿಲಿಗೆ ನಿಂತ ಆರ್ಧ್ರ ಹಸಿರು.
ದಿಬ್ಬಣದ ಸಾಲಿನಂತೆ ಮೈಲುಗಲ್ಲುಗಳ ಸವರಿ
ಸಾಗಿದೆ ಅವರಿವರ ಹೆಜ್ಜೆಗಳ, ಎಲ್ಲಾ ನೋಡುತ್ತಾ
ಸುಃಖಿಸಿದ ದಿನಗಳ ಬಿಂಬಗಳು ಅಲೆಗಳಾಗಿ
ನದಿಯಾಗಿ ಹರಿದು ಸಮುದ್ರ ಉಕ್ಕಿತು ಜಲದಲಿ.
ಈ ಭ್ರಹ್ಮಾಂಡ ಭಾರದಲಿ ನೀನು ನಾನೂ
ದಾರಿಗಳ ಸವೆದಾಗ ಅವ ಇಳಿಸಿದ ಬೆಳಕು,
ಕರಗಿ ರುದ್ರಭೂಮಿಯ ನಾದದೊಳು ಒಂದಾದ
ಆತ್ಮಗಳು ನೆಲದ ಬೇರುಗಳಾಗಿ ಮತ್ತೆ ಚಿಗುರು.
ನಮ್ಮ ಉಸುರಿನ ವ್ಯಾದಿ, ಕೇದಿಗೆ ಘಮವಾಗಿ,
ಕಡು ಕದನದ ನಮ್ಮೊಳಗೇ ಇಳಿದು,
ಉಲ್ಲಾಸದ ಅಂಗೈಯಲ್ಲಿ ಲಿಂಗ ಹಿಡಿದು,
ಮನಸ್ಸಿನ ಕಾಯಕದ ಕುಲುಮೆಯಲಿ ಶಬ್ದ
ನಿಶ್ಯಬ್ದಗಳು.
*****