ನಿನ್ನ ಅರಸಿ ಎಲ್ಲೆಲ್ಲೇ ತಿರುಗಾಡಿದೆ,
ನೀ ಮಾತ್ರ ನನ್ನ ಅಂಗಳದ ರಂಗೋಲಿಯಲಿ ಅರಳಿದೆ.
ಚುಕ್ಕಿ ಚಂದ್ರಮ ಬೆಳಕು ಆಕಾಶದಲಿ ಅರಸಿದೆ,
ನೀ ಮನೆಯ ಮುಂದಿನ ಇಬ್ಬನಿಯಲಿ ಪ್ರತಿಬಿಂಬಿಸಿದೆ.
ಬಯಲ ಗಾಳಿ ನದಿ ಹಳ್ಳಕೊಳ್ಳದಲಿ ಮಿಂದ
ನೀ ಅಮ್ಮನ ಸುರಿಯುವ ಹಾಲಿನಲಿ ತಂಪನೆರೆದೆ.
ಹರಡಿ ಹಾಸಿದ ಹಸಿರು ಗದ್ದೆ ಬಯಲು ತಡಕಾಡಿದೆ,
ನೀ ಚಿಟ್ಟೆಯ ರೆಕ್ಕೆಗಳ ಬಣ್ಣಗಳಲಿ ಹಾರಾಡಿದೆ.
ಎಲ್ಲಾ ಪಕ್ಷಿಗಳ ಜೀರುಂಡೆಗಳ ನಾದದಲಿ ಹುಡುಕಿದೆ
ನೀ ತೊಟ್ಟಿಲಲಿ ಮಲಗಿದ ಕಂದನಲ್ಲಿ ರಾಗವಾದೆ.
ಅವರಿವರ ಶಬ್ದ ಮಾತುಗಳು ನುಡಿಯಲಿ ಮೈಮರೆತೆ,
ನೀ ನನ್ನಾತ್ಮದಲಿ ಪಿಸುಗುಡುವ ಶಬ್ದಾತೀತನಾದೆ.
ಜಗದ ಅಂದಚೆಂದ ಪ್ರೀತಿ ಪ್ರೇಮಗಳ ಪರಿಸವರಿದೆ,
ನೀ ನನ್ನೊಳಗೆ ಇಳಿದು ಕನ್ನಡಿಯಾಗಿ ಪ್ರತಿಫಲಿಸಿದೆ.
ಇದ್ದದ್ದು ಇಲ್ಲದ್ದು ಇದ್ದಾಂಗ್ಹ ಅನಿಸಲೇ ಇಲ್ಲದ ಸಮಯ,
ನೀ ನಾನಾಗಿ ನಾ ನೀನಾಗಿ ಎಲ್ಲಾ ಕ್ಷಣಗಳಲಿ ಸಾಕ್ಷಿಯಾದೆ.
*****