ಮಧ್ಯಮಾವತಿ
ಕೇಳಿದೆನು ನಾನೆನಿತೊ ನನ್ನ ವ-
ನೇಳಿಗೆಯ ಕತೆಯನ್ನ,
ಹೇಳಿದರು ಹಲಜನರು ನೋಡಿದ
ಕೇಳಿದಾ ಸ್ಥಿತಿಯನ್ನ;
೧
ಎಳೆಯ ಬಿಸಿಲಲಿ ತಳಿರ ಮೆಲುಪನು
ಸಲಿಸಿ ಸವೆದೊಡಲಂತೆ-
ಅಲರಿನರಳಿಕೆಯಾಯ್ದು ಬಲಿದಿಹ
ಕಳೆಯ ಕಣ್-ಮೊಗವಂತೆ-
ಚೆಲುವೆಯರ ಮನ ಸೆಳೆದು ಬಿಗಿಯುವ
ಚೆಲುವಿಕೆಯ ಬಲುಹವನದಂತೆ-
ಕೇಳಿದೆನು ನಾನೆನಿತೊ ನನ್ನವ-
ನೇಳಿಗೆಯ ಕತೆಯನ್ನ,
೨
ಆಡಿದರೆ ಸವಿನುಡಿಯ ಜೇನಿನ
ಗೂಡಿಗೆಣೆಯಹುದಂತೆ-
ಹಾಡಿದರೆ ಬ್ರಹ್ಮಾಣಿ ವಿಣೆಯ-
ನಾಡಿಸಿದ ತೆರನಂತೆ-
ಕೂಡಿಸಿದ ಕವನಗಳು ಬಗೆಯೊಳು
ಮೂಡಿ ಮುಡಿದೂಗಿಸುವವಂತೆ-
ಕೇಳಿದೆನು ನಾನೆನಿತೊ ನನ್ನವ-
ನೇಳಿಗೆಯ ಕತೆಯನ್ನ.
೩
ಹರಳ ಬಿರುಸನು ಅರಳ ರಸದಲಿ
ಬೆರಸಿ ಬೆಸೆದೆದೆಯಂತೆ-
ದುರುಳರಿಗೆ ಹಗೆ ಸರಳರಿಗೆ ನಗೆ-
ಯಿರುವ ಗರುವಿಕೆಯಂತೆ-
ಕರೆಕರೆದು ತಲೆಹೊರೆಯನಿತ್ತರು.
ಸರಿಯದೈಸಿರಿಗರಸನಂತೆ-
ಕೇಳಿದೆನು ನಾನೆನಿತೊ ನನ್ನ ವ-
ನೇಳಿಗೆಯ ಕತೆಯನ್ನ.
೪
ಗೆಳೆತನಕೆ ತನ್ನನ್ನೆ ಮಾರುವ
ಛಲವು ಆತನದಂತೆ-
ಒಲುಮೆ-ಪಂಜರದೊಳಗೆ ಸುಲಭದಿ
ಸಿಲುಕುವಾ ಹುಲಿಯಂತೆ-
ಕೆಳೆಯೊಲುಮೆ ನನ್ನೊಳಗೆ ಕೊರತೆಯೆ?
ಒಲಿಯದಿರುವನದೇತಕಂತೆ?
ಕೇಳಿದೆನು ನಾನೆನಿತೊ ನನ್ನ ವ-
ನೇಳಿಗೆಯ ಕತೆಯನ್ನ.
*****