ಆನಂತ್ಯದೊಂದು ನವ ಜಲಧಿಯಲ್ಲಿ ಹೊರಟಿಹುದು ನನ್ನ ನಾವೆ.
ಎಲ್ಲಿ ಹೊರಟಿತೋ; ತನ್ನ ಮಾನವ್ಯ ಬಿಟ್ಟು ಬೇರೆ ಠಾವೆ?
ಮಸಕು ಮಸಕು ಹಿಂದೆಲ್ಲ, ಮುಂದೆ ಪಾತಾಳಖಾತ ಸಿಂಧು
ಗೊತ್ತುಗುರಿಯಿಲ್ಲ, ದೂರ ಧ್ರುವದಾಚೆ ಬೆಳಕು ಸ್ಫಟಿಕ ಬಿಂದು!
ಕಾಣದೊಂದು ಕೈ ಹುಟ್ಟ ಹಾಕುತಿದೆ, ಕಾಂಬೆ ಕತ್ತಲೊಂದೆ
ಇರುಳು ರಾತ್ರಿ ಅಮವಾಸಿ ಗುಹೆಯು ಬಾಯ್ತೆರೆದ ಹಾಗೆ ಮುಂದೆ.
ಒಳಗೆ ಕೆಳಗೆ ಹಸಿನಾತವೆಂದು ಪಂಚಾಸ್ಯ ಗುಡುಗುತಿಹುದು.
ಸತ್ತ ಒಲವು ಬೇಸತ್ತ ಒಲವು ಘನ ನಿದ್ರೆ ತೊಡಗುತಿಹುದು.
ಅರಸಿ ಹೊರಟ ಆ ಮಹಾಶಕ್ತಿ ನನ್ನನ್ನೆ ಸುತ್ತಿ ಮುತ್ತಿ
ತೋಡಿಹುದಗಳ್ತೆ ಮುಟ್ಟಿಹುದು ಅಬ್ಬ ನಾಗೇಂದ್ರನನಂತ ನೆತ್ತಿ
ಮೇಲೆ ನೋಡಿದರೆ ಯಾವ ಜೀವವೂ ತುಳಿಯದಿದ್ದ ಶಿಖರ
ಮುಳುಗಿ ಹೋದೆ ಅದ್ವೈತ ಐಕ್ಯದಲಿ ಅದರ ಆಚೆ ಪ್ರಖರ.
ಎಂಥ ಜಾಗೃ ಉರಿದೆದ್ದ ಹಾಗೆ ಭಗವಂತ! ಏನು ಕಿಚ್ಚು!
ಅವತರಿಸಲಿರುವ ಆ ಮೆಚ್ಚು ಮಾಟ ಆನಂದವೆಂಬ ಅಚ್ಚು.
*****