ತೋಡಿ
ಚೆಲುವು ಹಿರಿಯದೊ !-ಹೃದಯ-
ದೋಲವು ಹಿರಿಯದೊ….!
ಚೆಲುವಿನಲಿಯೆ ಒಲವು ಇಹುದೊ!
ಒಲವಿನಲಿಯೆ ಚೆಲುವು ಇಹುದೊ!
ಚೆಲುವು ಹಿರಿಯದೋ!-ಹೃದಯ-
ದೊಲವು ಹಿರಿಯ….!
೧
ಇನಿಯನಗಲ ನೆನಸಿ ನೆನಸಿ
ಮನೆಯಲಿರಲು ಬೇಸರೆನಿಸಿ
ದಣಿದ ಮನವ ತಣಿಸಲೆಣಸಿ
ಬನಕೆ ಹೋಗಲೆನುತ ನಡೆದೆ.
ತಳಿರಿನೊಳುಪ ಕಂಡು ಕುಣಿದೆ,
ಅಲರ ನಗೆಯ ನೋಡಿ ನಲಿದೆ,
ಚೆಲುವ ಬನದೊಳಾಲೆದೆ-ಉಲಿದೆ,
ಅಳಲ ಕೆಲವು ಗಳಿಗೆಯುಳಿದೆ.
ಇರಲು ಇಂತು ಏತಕೇನೊ….!
ಬರತು ಹೋಯ್ತು ಬಗೆಯ ನಲಿವು;
ಕೊರತೆಯೇನೊ ಬೆರೆತ ತೆರದಿ
ತೋರಿತಾಗ ಬನದ ಚೆಲುವು.
ತಳಿರು ಕಣ್ಣ ಕುಣಿಸದಾಯ್ತು,
ಅಲರ ನಗೆಯು ತಣಿಸದಾಯ್ತು,
ಬನದ ಬೆಡಗದೆಲ್ಲಿ ಹೋಯ್ತೊ..!
ಮನೆಗೆ ಬಂದ ಹಾಗೆ ಮರಳಿ.
ಚೆಲುವು ಹಿರಿಯದೋ!-ಹೃದಯ-
ದೊಲವು ಹಿರಿಯದೋ…!
೨
ಬಗೆದು ಬಗೆದು ನಲ್ಲನಗಲ
ದುಗುಡ ಮಿಗಲು-ಕಂಬನಿಗಳು
ಒಗೆಯುತಿರಲು-ಗಾನದಿಂದ
ಬಗೆಯು ಸೊಗಸಬಹುದೆ..? ಎಂದೆ.
ಕೊಳಲನೂದಿ ಅಳಲ ಮರೆತೆ,
ಉಲಿಯೆ ವೀಣೆಯದಕೆ ಬೆರತೆ,
ಮೆಲುಪು ಬಲಿದ ರಾಗದೋರಿ
ಕಳೆದೆ ಕಾಲ ಸೊಗವ ಸಾರಿ;
ಇದ್ದುದಿದ್ದ ಹಾಗೆ ಹೃದಯ
ಎದ್ದು ನಡೆಯಿತೆಲ್ಲಿಗೇನೊ!
ಬಿದ್ದು ಹೋಯ್ತು ಗಾನದಲ್ಲಿ
ಇದ್ದ ಸೊಬಗದೇತಕೇನೊ!
ಕೊಳಲ ಸವಿಯೆ ತಿಳಿಯದಾಯ್ತು,
ವೀಣೆಯುಲುಹು ಕಾಣದಾಯ್ತು,
ಚೆಲುವ ರಾಗದೆಳೆಯೆ ಹೋಯ್ತು,
ಮಲಗಿಬಿಟ್ಟೆ ಹಾಗೆ ಮರಳಿ.
ಚೆಲುವು ಹಿರಿಯದೋ!-ಹೃದಯ-
ದೊಲವು ಹಿರಿಯದೋ….
*****