ಮನದ ರಿಂಗಣದ ರಂಗಭೂಮಿಯನು ಅಗೆದು ಬಗೆದು ನಾನು
ಆತ್ಮಮೌನಿ ಮುನಿಯಾದೆ ಬಾನಿನಲಿ ನಿಂತ ಹಾಗೆ ಭಾನು.
ಪ್ರಾಣ ಅಲ್ಲ; ಹೊತ್ತರಿಯೆ ನಾನು; ಕ್ಷಯರಹಿತ ಚಂದ್ರನಾಗಿ
ಸನಾತನದ ಆ ಬ್ರಹ್ಮಗೋಲದಲಿ ನಾನೆ ಕೇಂದ್ರವಾಗಿ.
ಮುಕ್ತನಾದೆ ನಾ, ತೀರಿ ಹೋಯ್ತು, ಆ ಅಲ್ಪ ಆತ್ಮರಚನ.
ಅಮೃತ ನಾನು, ಕೇವಲನು ನಾನು, ಮೀರಿದೆನು ವರ್ಣವಚನ.
ನಾನೆ ಕಲ್ಪಿಸಿದ ವಿಶ್ವದಿಂದ ಹೊರಬಿದ್ದೆ ಎದ್ದೆ ಮೇಲೆ.
ನಾಮಕ್ಕತೀತ ನಾನಾದೆನಿಂದು ನನಗಿಲ್ಲ ಮೇರೆ ಬೇರೆ.
ನನ್ನ ಮನವು ಗಂಭೀರ ಗು೦ಭ ತುಂಬೆಲ್ಲ ಹಿಟ್ಟು ಬೆಳಕು.
ನನ್ನ ಹೃದಯವಾನಂದತುಂದಿಲವು ಪ್ರಶಮದೊಳಗು ಥಳಕು.
ಮುಟ್ಟು ತಟ್ಟು ಕಿವಿ ಕಣ್ಣು ಕಟ್ಟು ಕರಣಕ್ಕೆ ಇಲ್ಲಿ ಕುಂದು
ಆ ಅಚ್ಛ ಸ್ವಚ್ಚ ಆನಂತ್ಯದಲ್ಲಿ ಈ ದೇಶ ಏಕಬಿಂದು.
ಸತ್ ಪುರುಷ ಹರುಷ ಆನಂದ ಸಿಂಧು ಲೋಕೈಕವಾದ ಪರ್ವ
ಯಾರೊಬ್ಬನಲ್ಲ, ಆ ಎಲ್ಲರಲ್ಲಿ ಇರುವೊರ್‍ವ ನಾನೆ ಸರ್‍ವ.
*****