ಅನೇಕ ತೆರದ ಯೋನಿಮುಖಂಗಳ ಪೊಕ್ಕು
ನೀರ್‍ಗುಡಿಯಲೆಂದು ಪೋದಡೆ
ಸುಡು ಪೋಗೆಂದು ನೂಂಕಿತ್ತೆ ಜಲ
ಅದರಂತಿರಬೇಡಾ ಹಿರಿಯರ ಮನ
ಮನವಿಚ್ಛಂದವಾಗದೊಂದೆಯಂದದಲಿಪ್ಪಂತಪ್ಪಾ
ನಿಮ್ಮದೊಂದು ಸಮತಾಗುಣವನ್ನನೆಂದು ಪೊದ್ದಿರ್ಪುದು ಹೇಳಾ
ಕಪಿಲಸಿದ್ಧಮಲ್ಲಿಕಾರ್ಜುನಾ
[೫ನೆಯ ಸಾಲು: ಓದಿನ ಅನುಕೂಲಕ್ಕೆ ಹೀಗೆ ಬಿಡಿಸಿಕೊಳ್ಳಿ: ಮನ-ಇಚ್ಛಂದ-ಆಗದೆ-ಒಂದೆ-ಅಂದದಲಿ-ಇಪ್ಪಂತೆ-ಅಪ್ಪ-ಆ; ಪೊದ್ದಿರ್ಪುದು-ಹೊಂದಿರುವುದು]
ಸಿದ್ಧರಾಮನ ವಚನ.
ಹಿಂದಿನ ಜನ್ಮದಲ್ಲಿ ಏನೇ ಆಗಿರಲಿ, ಅಥವಾ ಮಾಡಬಾರದ ಕೆಲಸಗಳನ್ನೇ ಮಾಡಿರಲಿ, ಅಂಥವನು ನೀರು ಕುಡಿಯಲೆಂದು ಹೋದರೆ ‘ನೀನು ಅಯೋಗ್ಯ’ ಎಂದು ಅವನ ದಾಹವನ್ನು ತಣಿಸಲು ನಿರಾಕರಿಸುತ್ತದೆಯೇ ನೀರು? ಇಲ್ಲವಲ್ಲಾ. ನಿಜವಾದ ಹಿರಿಯರ ಮನ ಹಾಗೆ ಇರಬೇಕಲ್ಲವೇ? ಯಾವುದರ ಬಗ್ಗೆಯೂ ತಿರಸ್ಕಾರದ ಲವಲೇಶವೂ ಇಲ್ಲದಂತಿರುವುದೇ ನಿಜವಾದ ಹಿರಿತನ. ಮನಸ್ಸು ಇಚ್ಛಂದವಾಗದೆ (ಇಬ್ಬಾಗವಾಗು) ಒಂದೇ ಅಂದದಲ್ಲಿ ಇರುವಂಥ ನಿಮ್ಮ ಸಮತಾಗುಣವನ್ನು ನನ್ನ ಮನಸ್ಸು ಎಂದು ಹೊಂದೀತು ಎಂದು ಸಿದ್ಧರಾಮ ಕೇಳುತ್ತಾನೆ.
ದೇವರು ಎಂಬುದಿದ್ದರೆ ಅದು ಸಮತಾಗುಣವೇ. ಸಿದ್ಧರಾಮನ ದೃಷ್ಟಿಯಲ್ಲಿ ಏನನ್ನೂ ತಿರಸ್ಕರಿಸಿದ ಗುಣವೇ, ಯಾವ ಗುಣದಿಂದಲೂ ಮನಸ್ಸು ಇಚ್ಚಂದವಾಗದೇ ಇರುವುದೇ, ದೇವರ ಗುಣ, ಅಂಥ ಗುಣ ಬೇಕು ಅನ್ನುವುದು ಬಯಕೆ.
ನಿಸರ್ಗಕ್ಕೆ ಇಂಥ ಸಮತಾಗುಣವಿರುವುದರಿಂದಲೇ ನಾವು ಬದುಕಿದ್ದೇವೆ. ಕೇವಲ ‘ಒಳ್ಳೆ’ಯವರಿಗೆ ಮಾತ್ರವೇ ಮಳೆ ಸುರಿಯುವುದು, ಸೂರ್ಯ ಹೊಳೆಯುವುದು, ನದಿ ಹರಿಯುವುದು, ಮರ ಹಣ್ಣು ಕೊಡುವುದು ಎಂದಾಗಿದ್ದರೆ ಲೋಕದಲ್ಲಿ ನೂರಕ್ಕೆ ತೊಂಬತ್ತೊಂಬತ್ತು ಜನ ಬದುಕುವುದಕ್ಕೇ ಆಗುತ್ತಿರಲಿಲ್ಲವೇನೋ! ಸೇಡಿಲ್ಲದ, ಅವಜ್ಞೆ ಇಲ್ಲದ, ತಿರಸ್ಕಾರವಿಲ್ಲದ ಗುಣ ಎಂದು ಸಮತೆಯನ್ನು ವರ್ಣಿಸಿರುವುದು ಹೊಸತೆಂಬಂತಿದೆ.
ಛಂದ ಮತ್ತು ಅಂದ ಪದಗಳನ್ನು ಒಟ್ಟುಗೂಡಿಸಿರುವ ರೀತಿಯೂ ಗಮನಾರ್ಹ. ಛಂದ ಅನ್ನುವುದು ಛಂದಸ್ಸನ್ನೂ ಚಂದವನ್ನೂ ಒಟ್ಟಿಗೆ ಸೂಚಿಸೀತು.
*****