೧
ಮೂಡಣ ದಿಶೆಯಲಿ
ಪಡುವಣ ದಿಶೆಯಲಿ
ಮೂಡುವ ಅಡಗುವ
ರವಿ ಹೊಂಬಣ್ಣವ
ಭರದಲಿ, ಹರುಷದಿ
ಹೊಗಳುತಲಿರುತಿರೆ ಕವಿಜನರು;
ಚೆನ್ನೆಯೆ ನಿನ್ನಯ
ಕನ್ನಡಿ ಹೊಳಪಿನ
ಕನ್ನೆಯ ಮೇಲಣ
ಕೆಂಬಣ್ಣವ ನಾ
ಹೊಗಳುತ ನಿಂತಿಹೆ
ಓಡುತೆ ಬಾ! ಬಾ! ಹಾರುತೆ ಬಾ! ಬಾ!
೨
ಸರದಲಿಶೋಭಿಪ
ಅರಳಿದಕಮಲಕೆ
ಗುಂಗೀಹುಳಗಳು
ಮಕರಂದವ ಸಲೆ
ಸೇವಿಸಲೆಂದುಂ ಧಾವಿಪ
ನೋಟವ ಬಣ್ಣಿಸುತಿರಲಾಕವಿಜನರು;
ಸರಸಿಜವದನೆಯೆ
ನನ್ನಯಪ್ರೇಮದ
ಗುಂಗೀಹುಳವದು
ನಿನ್ನಯ ಅಧರಾಮೃತವಂ
ಸೇವಿಸೆ ಧಾವಿಸಿ
ದಣಿದಿದೆ ಬಾ! ಬಾ! ತಣಿಸಲು ಬಾ! ಬಾ!
೩
ಬೆಳಗಿನಜಾವದಿ
ತೋಟದನೋಟ!
ಪರಿಮಳಬೀರುವ
ಪೂಗಳನೋಟ!
ಕುಣಿಕುಣಿದಾಡುವ
ನವಿಲಿನ ನೋಟವದೆಲ್ಲವು ಕವಿಜನಕಿರಲಿ;
ರಮಣಿಯೆ ನನಗಿದೆ
ನಿನ್ನಯ ನೋಟ!
ಆದದೋ ಅಲ್ಲಿದೆ
ಪ್ರೇಮದ ತೋಟ!
ಸುಂದರಿ ನಲಿಯಲು
ಓಡುತೆ ಬಾ! ಬಾ! ಹಾರುತೆ ಬಾ! ಬಾ!
೪
ರಮಣಿಯೆ ನೋಡದೂ
ಹಿರಿಯರು ನೀಡಿದ
ಗಾಂಧಿಯು ಬಯಸುವ
ಪಾವನ ರಾಟಿಯ
ಹಿಂದಕೆ ಒಗೆವುದೆ?
ಬಾ! ಬಾ! ತಿರುಹಲು ಬೇಗನೆ ಬಾ! ಬಾ!
ನೂಲನುತೆಗೆದಿಡು!
ಮಗ್ಗವಹೂಡುವೆ!
ವಸ್ತ್ರವಮಾಡುವೆ!
ಬಡವಗೆನೀಡಲು
ಪುಣ್ಯವಪಡೆಯಲು
ಓಡುತೆ ಬಾ! ಬಾ! ಹಾರುತೆ ಬಾ! ಬಾ!
೫
ಕಮಲಿನಿಬೇಕು;
ನನಯಬಲವದು
ನಿನಗಿರಬೇಕು;
ನಿನ್ನಯಬಲವದು
ನನಗಿರಬೇಕು;
ಈರ್‍ವರ ಬಲವಧುದೇಶಕೆಬೇಕು;
ಕನ್ನಡಮಾತೆಯ
ಭಾರತಮಾತೆಯ
ಸೇವೆಯಗೈಯುತೆ
ಪ್ರೇಮದಲೀರ್‍ವರು
ಸಗ್ಗಕೆಪೋಗುವಾ!
ಓಡುತೆ ಬಾ! ಹಾ! ಹಾರುತೆ ಬಾ! ಬಾ!
*****