ಹಗಲೆಲ್ಲಾ ಕಳೆಯಿತು ಸೂರ್ಯನು ಮುಳುಗೆ;
ಖಗ ಹಾರಿತು ಗೂಡಿನ ಒಳಗೆ;
ಜಗವೆಲ್ಲಾ ಬೆಳಗಿತು ದೀಪವು ಬೆಳಗೆ,
ಗಗನಾಂಗಣದಲ್ಲಿ ಉಡು ತೊಳಗೆ;
ಮೃಗವೆಲ್ಲಾ ಅಲೆವವು ಬೆಟ್ಟದ ಕೆಳಗೆ;
ಹೊಗುತಿರುವುದು ಕತ್ತಲೆ ಇಳೆಗೆ.
ಓ-ಮಗುವೇ, ನೀ ಸಂಜೆಯ ಗಳಿಗೆಯಲಿ
ನಗುತಲಿ ಬಾ ನನ್ನಯ ಬಳಿಗೆ; ಕೈ
ಮುಗಿಯುತ ದೇವರ ಪದಗಳಿಗೆ, ಈ
ಹಗಲಲ್ಲಿ ನಿನ್ನನ್ನು ಕಾಯ್ದಾ ದೇವರಿಗೆ,
ಮಿಗೆ ವಂದಿಸು ಸಂತಸದಿಂದಾ.
ವದನಾ ಭೂಷಣವೇ ನೀರಿನ ಕೆರೆಯು
ಘನ ಸರಸಿಗೆ ಕೆಂದಾವರೆಯು;
ವನಿತಾಲಂಕಾರವೆ ಸುಗುಣದ ಸಿರಿಯು;
ಜನರಾಷ್ಟ್ರಕೆ ಧರ್ಮದ ದೊರೆಯು;
ಮನುಜನಿಗಾಭರಣವೆ ವಿದ್ಯೆಯ ಪರಿಯು;
ಮನೆಗಾ ಚೆಲು ಮಕ್ಕಳು ಮರಿಯು.
ಹಾ, ತನಯಾ, ಸಜ್ಜನರೊಡವೆರೆಯು; ದು-
ರ್‍ಜನ ಸಂಗವ ಬೇಗನೆ ತೊರೆಯು; ವಂ-
ಚನೆ ಮರೆಮೋಸಗಳನ್ನು ಮರೆಯು; ನೀ-
ನೆನೆಯದಿರೈ ಕೆಡುಕನು ಲೋಕದ ಜನಕೆ;
ಜನದೂಷಣೆ ಬಿಡಬೇಕೆಂದಾ.
ಇರಬೇಕೈ ಮಕ್ಕಳ ಚೆಲುಮನೆತನವು;
ಸರಿ ಹಾಲನು ಕರೆವಾ ದನವು;
ಬರಬೇಕೈ ತನ್ನಯ ಬೆವರಿನ ಧನವು;
ಭರದಾಪತ್ಕಾಲಕೆ ಜನವು;
ಹೊರಬೇಕೈ ಕಷ್ಟವ ಸಹಿಸುವ ತನುವು;
ಪರದುಃಖಕ ಕೂಗುವ ಮನವು.
ಶ್ರೀ ಗುರುಹಿರಿಯರ ನೀನನುದಿನವು ತಾಂ
ಪರಿಪೂಜಿಪಗುಣ ಲಾಂಛನವು; ಇದು
ದೊರೆಕೊಂಬುದ ಜನಕೆ ಘನವು; ಸೋ
ದರರೆಂಬಾ ಭಾವನೆ ಸರ್‍ವರೊಳಿರಿಸು;
ಭರತಾತ್ಮಜನೆನ್ನಿಸು ಕಂದಾ.
ಕೊಡಬೇಕೈ ಕಿವಿಯನು ಸರ್‍ವರ ನುಡಿಗೆ;
ನುಡಿಬಾರದು ನೀನಡಿಗಡಿಗೆ;
ಉಡಬೇಕೈ ಪದವಿಗೆ ಸರಿಯಾದುಡಿಗೆ;
ತೊಡಬಾರದು ಅನ್ಯರ ತೊಡಿಗೆ;
ಬಿಡಬೇಕೈ ಹಣವನು ಧರ್‍ಮದ ಕುಡಿಗೆ,
ಬಡವಾಗಿರದಂದದಿ ಕಡೆಗೆ.
ನೀ ಪೊಡಮಡು ಗುರುಹಿರಿಯರ ಅಡಿಗೆ; ನೀ
ನಿಡು ಸತ್ಯವ ಕಾರ್‍ಯಗಳೆಡೆಗೆ; ನೀ
ನಡೆವೈ ಸಂಪತ್ತಿನ ತಡಿಗೆ; ಈ
ಮುಡಿಹೂಗಳ್ ಬಾಡದ ಸದ್ವಿಧದಿಂದಾ
ಬಡಕೂಸನು ಸಲಹೋ, ಮುಕುಂದಾ.
*****
(ಕವಿಶಿಷ್ಯ)