ಶಾಂತವಾಗಿರು; ಕ್ರೂರ ಕಾಲ ನನ್ನನ್ನು ಸೆರೆ-
ಹಿಡಿದು ಜಾಮೀನಿರದೆ ಕೊಂಡೊಯ್ಯುತಿರುವಾಗ.
ಈ ಬರೆಹ ತಾಗಿಕೊಂಡಿದೆ ನನ್ನ ಬಾಳಿಗೆ,
ಇರಲಿ ಇದು ನಿನ್ನ ಬಳಿ, ನಿನಗಿತ್ತ ಸ್ಮಾರಕ.
ಇವನು ನೋಡುತ್ತಿರಲು ಮೊಳೆಯುವುದು ತಾನಾಗಿ
ನಿನಗಾಗಿ ಹರಸಿಟ್ಟ ಮುಡಿಪು ಇದು ಎನ್ನುವುದು ;
ನೆಲಕ್ಕೆ ಸಲ್ಲುವ ಭಾಗವಷ್ಟೂ ನೆಲಕ್ಕೆ ಹೋಗಿ
ನನ್ನುತ್ತಮಾಂಶ ಇದು ನಿನಗಷ್ಟೆ ಸೇರುವುದು.
ಮೈಚರಟ, ಹುಳುವಿನಾಹಾರ, ಉಸಿರಳಿದ ಶವ,
ನೀಚ ಚೂರಿಯ ಇರಿತ ಪಡೆದ ಬಡಗೆಲುವು,
ಇವು ನೀನು ನೆನೆಯಲೂ ಯೋಗ್ಯವಲ್ಲದ ಕಸ-
ನಿನ್ನಿಂದ ಇವು ಮಾತ್ರ ದೂರವಾಗುಳಿಯುವುವು.
ಕೃತಿಯ ಹೂರಣದಲ್ಲಿ ಇದೆ ಅದರ ನಿಜಸತ್ವ!
ಅದು ನೋಡು ಇಲ್ಲಿದೆ, ನಿನ್ನದಾಗಿದೆ ನಿತ್ಯ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 74
But the contented when that fell arrest