ದಿಗ್ವಿಜಯಗಳ ಸರಮಾಲೆ
ಮೊದಲಿಗೆ ಯಾರೊಂದಿಗೆ ಯುದ್ಧ ಮಾಡಿದ್ದು? ತನ್ನಣ್ಣ ಕುಬೇರನ ನೆನಪಾಯಿತು. ನನ್ನ ತಂದೆಯ ಹಿರಿಹೆಂಡತಿಯ ಮಗ, ಭರದ್ವಾಜ ಪುತ್ರಿಯಾದ ದೇವವರ್‍ಣಿ ಎಂಬಾಕೆಯಲ್ಲಿ ಜನಿಸಿದವನು. ಮಹಾದೈವಭಕ್ತ. ಅತುಲೈಶ್ಚರ್‍ಯ ಸಂಪನ್ನ, ಪರಮೇಶ್ವರನನ್ನು ತಪಸ್ಸಿನಿಂದ ಮೆಚ್ಚಿಸಿ ಆತನ ಸ್ನೇಹಿತನಾಗಿ, ಲಂಕಾ ರಾಜ್ಯಾಧಿಪತ್ಯವನ್ನು ಸಂಪಾದಿಸಿ, ಪುಷ್ಪಕ ವಿಮಾನವನ್ನು ಪಡೆದು ಲಂಕೆಯಲ್ಲಿಯೇ ರಾಜ್ಯಭಾರ ಮಾಡಿಕೊಂಡಿದ್ದನು. ಲಂಕೆಯಲ್ಲಿ ನಮ್ಮ ಪಾಲು ಇದೆಯೆಂದು ಎಷ್ಟು ಹೇಳಿದರೂ ಕೇಳಲಿಲ್ಲ. ವರದಿಂದ ಗರ್ವಿತನಾಗಿ ಮೆರೆಯುತ್ತಿದ್ದ ಅವನಿಗೆ ನಾನು, ಕುಂಬಕರ್ಣ ತಕ್ಕ ಪಾಠ ಕಲಿಸಿದೆವು. ಲಂಕೆಯನ್ನು ವಶಪಡಿಸಿಕೊಂಡೆವು. ನಮಗೆ ಹೆದರಿ ಕೈಲಾಸ ಪರ್ವತಕ್ಕೆ ಓಡಿಹೋದನು, ಶಿವನ ಅನುಮತಿ ಪಡೆದು ಕೈಲಾಸ ಪರ್ವತದಲ್ಲಿ ಅಲಕಾನಗರಿಯನ್ನು ನಿರ್‍ಮಿಸಿಕೊಂಡು ಯಕ್ಷರಿಗೆಲ್ಲ ಅಧಿಪತಿಯಾದನು. ತಾನಲ್ಲಿ ಸುಖವಾಗಿದ್ದರೂ ತಮ್ಮನಾದ ನನಗೆ ಆಗಾಗ್ಗೆ ಬುದ್ದಿ ಹೇಳಲು ದೂತರನ್ನು ಕಳುಹಿಸುತ್ತಿದ್ದನು. “ನೀನು ವಿದ್ವಾಂಸ ಬ್ರಾಹ್ಮಣನಾಗಿದ್ದು ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳಬೇಡ. ನಿನ್ನ ಕೀರ್ತಿ ಪ್ರತಿಷ್ಠೆಗೆ ಕಳಂಕ ತರುವಂತಹ ಕಾರ್ಯಗಳನ್ನು ಮಾಡಬೇಡ. ನಮ್ಮ ತಂದೆಯವರ ಹೆಸರಿಗೆ ಮಸಿ ಬಳಿಯಬೇಡ, ಕೆಟ್ಟಹಾದಿಯಲ್ಲಿ ನಡೆದು ನಾಶ ಹೊಂದುತ್ತೀಯಾ. ನಿನ್ನ ವಿನಾಶಕ್ಕೆ ನೀನೇ ಕಾರಣನಾಗಬೇಡ. ನಿನ್ನ ಒಳ್ಳೆಯದಕ್ಕೆ ನಾಲ್ಕು ಮಾತು ಹೇಳಿದ್ದೇನೆ. ನೀನು ವಿವೇಕಿಯಾದರೆ ಈ ಮಾತುಗಳನ್ನು ಮನನ ಮಾಡಿ ಸತ್ಯಧರ್ಮದ ಹಾದಿಯಲ್ಲಿ ನಡೆ” ದೂತರಿಂದ ಇಂತಹ ಮಾತುಗಳನ್ನು ಕೇಳಿ ನನ್ನ ಪಿತ್ತ ನೆತ್ತಿಗೇರಿತು. ಅಣ್ಣನಾದವನು ತಮ್ಮನ ಹಿತವನ್ನು ಬಯಸುವುದಾಗಿದ್ದರೆ ಸ್ವತಃ ತಾನೇ ಬಂದು ಬುದ್ಧಿ ಹೇಳಬೇಕು, ಅದು ಬಿಟ್ಟು ದೂತನಿಂದ ನನಗೆ ಉಪದೇಶ ಮಾಡಿಸುತ್ತಿದ್ದಾನಲ್ಲ. ಇನ್ನೆಷ್ಟು ಸೊಕ್ಕಿರಬೇಕು. ನಾನು ಶಂಕರನಿಗೆ ಪ್ರೀತಿಪಾತ್ರನಾದವನು. ಬೇಕಾದಷ್ಟು ಧನವಿದೆ ಎಂಬ ಅಹಂಕಾರದಿಂದ ಮಾತನಾಡುತ್ತಿದ್ದಾನೆ. ಅವನ ಅಹಂಕಾರವನ್ನು ನಾನು ಅಡಗಿಸಲೇಬೇಕೆಂದು ಮಂತ್ರಿಗಳು, ಸೇನಾಧಿಪತಿಗಳಿಗೆ ಯುದ್ಧಕ್ಕೆ ಹೊರಡುವಂತೆ ಅಪ್ಪಣೆ ಮಾಡಿದೆ. ಸಕಲ ಸೈನ್ಯವು ಸನ್ನದ್ಧವಾಗಿ ಯುದ್ಧಕ್ಕೆ ಸಜ್ಜಾಯಿತು. ಕುಬೇರನೂ ಕಡಿಮೆಯಿಲ್ಲ. ದಂಡು ದಳವಾಯಿಗಳೊಡನೆ ರಣರಂಗಕ್ಕೆ ಬಂದನು. ಎರಡು ಮದಿಸಿದ ಆನೆಗಳಂತೆ ಪರಸ್ಪರ ಎದುರಾದೆವು, ಭಯಂಕರ ಯುದ್ಧವಾಗಿ ರಕ್ತದ ಕಾಲುವೆ ಹರಿಯಿತು. ಹೆಣಗಳ ರಾಶಿಯೇ ಕೂಡಿತು. ಇಬ್ಬರೂ ಸೋಲಲಿಲ್ಲ ಅಷ್ಟರಲ್ಲಿ ನಾರದ ಮಹರ್ಷಿಗಳು ಬಂದು ಇಬ್ಬರನ್ನು ಸಮಾಧಾನ ಪಡಿಸಿ ಸಂಧಿ ಮಾಡಿಸಿದರು. ನಾನು ಉಪಾಯವಾಗಿ ಅವನಲ್ಲಿದ್ದ ಪುಷ್ಪಕ ವಿಮಾನವನ್ನು ಕಿತ್ತುಕೊಂಡು ಬಂದೆ ಆನಂತರ ಅವನು ನನ್ನ ತಂಟೆಗೆ ಬರಲಿಲ್ಲ. ಈ ಪುಷ್ಪಕ ವಿಮಾನದಿಂದ ದೊಡ್ಡದೊಂದು ಘಟನೆಯೇ ನಡೆಯಿತು. ಅಂತಹ ಅನುಭವವನ್ನು ನನ್ನ ಜೀವನದಲ್ಲೇ ಮರೆಯಲಾರೆ. ಪುಷ್ಪಕ ವಿಮಾನವನ್ನೇರಿಕೊಂಡು ಮನಬಂದಂತೆ ಸುತ್ತುತ್ತಿದ್ದೆ ಹೀಗೆ ಹೋಗುತ್ತಿರುವಾಗ ಇದ್ದಕ್ಕಿದ್ದ ಹಾಗೆ ವಿಮಾನವು ಮುಂದಕ್ಕೆ ಚಲಿಸದೆ ನಿಂತುಬಿಟ್ಟಿತು. ಇದೇನು ಕಾರಣ ಎಂದು ಯೋಚಿಸುತ್ತಿರುವಾಗ ಈಶ್ವರನ ವಾಹನವಾದ ನಂದೀಕೇಶ್ವರನು ಪ್ರತ್ಯಕ್ಷನಾಗಿ ರಾವಣನನ್ನು ಕಂಡು “ದಶಾನನ ಈ ಕೈಲಾಸದ ಪರ್ವತಕ್ಕೆ ಬರಲು ಶಿವನ ಅಪ್ಪಣೆಬೇಕು. ಅದಿಲ್ಲದಿದ್ದರೆ ಯಾರೂ ಬರುವಂತಿಲ್ಲ. ಬ್ರಹ್ಮಾದಿದೇವತೆಗಳು, ಗಂಧರ್ವಕಿನ್ನರ ಕಿಂಪುರಷರು ಮೊದಲಾದವರಿಗೂ ಸಾಧ್ಯವಿಲ್ಲ. ಆಡಂಬರದಿಂದ ಬಂದರೆ ಶಿವನ ದರ್ಶನವಾಗದು ಅಹಂಕಾರವನ್ನು ಬಿಟ್ಟು ನೀನು ಸಹಾ ಭಯಭಕ್ತಿಯಿಂದ ನಡೆದುಕೊಂಡು ಬಾ” ಎನ್ನಲು ಇನ್ನಿಲ್ಲದ ಕೋಪದಿಂದ ನಂದೀಶನನ್ನು ನೋಡಿ, “ಎಲೈ ಮಂಗನ ಮುಖದವನೇ ನನಗೆ ಉಪದೇಶ ಮಾಡಲು ಬರಬೇಡ, ಶಿವಭಕ್ತನಾದ ರಾವಣನಿಗೆ ಶಿವನನ್ನು ನೋಡಲು ಅಪ್ಪಣೆ ಬೇಕೆನ್ನುವ ನಿನಗೆಷ್ಟು ಕೊಬ್ಬು! ನಿನ್ನ ಕೆಲಸ ನೋಡಿಕೊ ಎಂದೆನು” “ಎಲೈ ನೀಚನೇ ಹತ್ತು ತಲೆಯ ಹುಳದಂತಿರುವ ನಿನ್ನನ್ನು ಹೊಸಕಿ ಹಾಕುವುದು ನನಗೆಷ್ಟರ ಕೆಲಸ, ಮನೆ ಬಾಗಿಲಿಗೆ ಬಂದ ಅತಿಥಿಯನ್ನು ಅವಮಾನಿಸುವುದು ಶ್ರೇಯಸ್ಸಲ್ಲ. ನನಗೆ ಮಂಗನ ಮುಖದವನೆಂದು ಅಣಗಿಸುವ ನೀನು ಮಂಗಗಳಿಂದಲೇ ಹತನಾಗುತ್ತೀಯಾ” ಎಂದು ಶಾಪ ಕೊಟ್ಟನು. ಇದರಿಂದ ಕುಪಿತಗೊಂಡು ವಿವೇಕವನ್ನು ಕಳೆದುಕೊಂಡು ಈ ಕೈಲಾಸದ ಮಹತ್ವವನ್ನು ಶಿವನ ಶಕ್ತಿಯನ್ನು ಪರೀಕ್ಷಿಸಬೇಕೆಂದು ನನ್ನ ಇಪ್ಪತ್ತು ತೋಳುಗಳಿಂದ ಕೈಲಾಸ ಪರ್ವತವನ್ನು ಎತ್ತಿದೆನು. ಆಗ ನೋಡಬೇಕಿತ್ತು ಹದಿನಾಲ್ಕು ಲೋಕಗಳು ನಡುಗಿದವು. ದಿಕ್ಕುಗಳು ದಿಕ್ಕು ತಪ್ಪಿದವು. ಸೂರ್ಯಚಂದ್ರರ ಗತಿಯೇ ಬದಲಾಯಿತು. ದೇವತೆಗಳಲ್ಲಿ ಹಾಹಾಕಾರ! ಜಗಜ್ಜನನಿ ಪಾರ್ವತಿಯೇ ಭಯದಿಂದ ಶಿವನನ್ನು ಅಪ್ಪಿದಳು, ಆಗ ಪರಮಾತ್ಮನಾದ ಶಂಕರನು ಇದು ದಶಕಂಠನ ಚೇಷ್ಟೆಯೆಂದು ತಿಳಿದು ಕೈಲಾಸವನ್ನು ತನ್ನ ಕಾಲಿನ ಬೆರಳಿನಿಂದ ಮೆಟ್ಟಿದನು. ನಾನೂ ಬಿಡಲಿಲ್ಲ, ನನ್ನ ಶಕ್ತಿಯೆಲ್ಲವನ್ನು ಪ್ರಯೋಗಿಸಿ ಮತ್ತೆ ಪರ್ವತವನ್ನು ಮೇಲೆತ್ತಿದೆ. ಪರಮೇಶ್ವರನು ಮತ್ತೆ ತುಳಿದನು. ನಾಲ್ಕಾರು ಬಾರಿ ಪುನರಾವರ್ತನೆಯಾದ ಮೇಲೆ ಪರ ಶಿವನು ಜೋರಾಗಿ ಮೆಟ್ಟಿದಾಗ ನನ್ನ ಇಪ್ಪತ್ತು ತೋಳುಗಳು ಪರ್ವತದ ಅಡಿಯಲ್ಲಿ ಸಿಕ್ಕಿಕೊಂಡವು. ಆಗ ನಾನು ಮಾಡಿದ ಆರ್ತನಾದದಿಂದ ಜಗತ್ತೇ ತಲ್ಲಣಿಸಿತು. ಸಮಯಕ್ಕೆ ಸರಿಯಾಗಿ ಬಂದ ನಾರದರು ಭಕ್ತಿಯಿಂದ ಶಂಕರನನ್ನು ಪ್ರಾರ್ಥಿಸಬೇಕೆಂದು ಹೇಳಿದರು. ನಾನು ಸಾಮಗಾನದಿಂದ ಶಿವನನ್ನು ಒಲಿಸಿಕೊಂಡೆ. ಭಕ್ತರಕ್ಷಕನಾದ ಪರಶಿವನು ನನ್ನ ಶಕ್ತಿಗೆ ಭಕ್ತಿಗೆ ಮೆಚ್ಚಿ ಖಡ್ಗವೊಂದನ್ನು ವರವಾಗಿ ನೀಡಿದನು. ಆ ಖಡ್ಗದ ಶಕ್ತಿಯು ಅಪಾರವಾಗಿತ್ತು. ಆ ಖಡ್ಗದಿಂದಲೇ ಹಲವಾರು ದೇವತೆಗಳನ್ನು ಯುದ್ಧದಲ್ಲಿ ಸೋಲಿಸಿದೆ. ಅಜೇಯನೆನೆಸಿಕೊಂಡೆ. ಇಡೀ ಭರತಖಂಡವನ್ನೇ ಜಯಿಸಬೇಕೆಂದು ನಿರ್ಧಾರಮಾಡಿ ಯುದ್ಧಕ್ಕೆ ಹೊರಟಾಗ ನನ್ನ ಬಗ್ಗೆ ಕೇವಲವಾಗಿ ಮಾತನಾಡಿದವನು ಮರುತರಾಯ ಸೂರ್‍ಯವಂಶದ ಅವೀಕ್ಷಿತ ರಾಜನ ಮಗ. ಈತ ಜನಿಸಿದ ಕೂಡಲೇ ತುಂಬುರು ಮರುತ್ತನ ಜನನಿಯಾದ ವಿಶಾಲದೇವಿಯಲ್ಲಿಗೆ ಬಂದು ನಿನ್ನ ಮಗ ಮರುತ್ತಗಳಂತೆ ಮಹಾ ಪರಾಕ್ರಮಿಯೂ ಬಲಾಡ್ಯನೂ ಆಗುವನೆನ್ನಲು ಈತನಿಗೆ ಮರುತ್ತರಾಯನೆಂದು ಹೆಸರಿಟ್ಟನು. ಮರುತ್ತ ಇಂದ್ರನಿಗಿಂತಲೂ ಬಲಾಧಿಕನೂ ಶ್ರೀಮಂತನೂ ಎನಿಸಿದ್ದ. ಅವನನ್ನು ಗೆಲ್ಲಲೆಂದು ಯುದ್ಧ ಮಾಡಲು ಹೋದಾಗ ಯಜ್ಞ ದೀಕ್ಷೆಯನ್ನು ತೊಟ್ಟು ಯಜ್ಞದಲ್ಲಿ ನಿರುತನಾಗಿದ್ದನು. ನನ್ನೊಂದಿಗೆ ಯುದ್ಧ ಮಾಡಲು ನಿರಾಕರಿಸಿದನು. ತಾನು ಯುದ್ಧದಲ್ಲಿ ಸೋತೆನೆಂದು ಜಯ ಪತ್ರವನ್ನಿತ್ತು ಶರಣಾದನು. ದಗ್ವಿಜಯದಿಂದ ಇನ್ನಷ್ಟು ಉತ್ಸಾಹಿತನಾದೆ. ತನ್ನ ದಿಗ್ವಿಜಯವನ್ನು ಕಂಡು ಸಂತಸಪಟ್ಟವರೆಂದರೆ, ನಾರದ ಮಹರ್ಷಿಗಳು “ಮುನೀಂದ್ರ ನಾನು ಇಡೀ ಭರತಖಂಡವನ್ನೇ ಜಯಿಸಿ ಸಾರ್ವಭೌಮನಾಗಿದ್ದೇನೆ” ಇನ್ನು ಯಾರೊಂದಿಗೆ ಯುದ್ಧ ಮಾಡಬೇಕು. ಯಾರನ್ನು ಜಯಿಸಬೇಕು ಹೇಳಿ?” ಎಂದು ಗರ್ವದಿಂದ ಹೇಳಿದಾಗ “ಲಂಕೇಶ್ವರ ಮಾನವರನ್ನು ಜಯಿಸುವುದು ಕಷ್ಟವಲ್ಲ. ಅಷ್ಟದಿಕ್ಪಾಲಕರನ್ನು ಇಂದ್ರಾದಿ ದೇವತೆಗಳನ್ನು ಜಯಿಸಬೇಕು. ಆಗಲೇ ನಿನ್ನ ಕೀರ್ತಿಯು ಅಜರಾಮರ. ಅದರಲ್ಲೂ ಅಷ್ಟದಿಕ್ಷಾಲಕರಲ್ಲಿ ಯಮನೊಂದಿಗೆ ಹೋರಾಡಿ ಅವನನ್ನು ಜಯಿಸಬೇಕು. ಜಗತ್ತಿನಲ್ಲಿ ಸಮಸ್ತ ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ. ಮಕ್ಕಳು ಮುದುಕರೆನ್ನದೆ ಸದ್ಗುಣಿಗಳನ್ನು ಅಮಾಯಕರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುವನು. ನೀನು ಆ ಯಮನೊಂದಿಗೆ ಹೋರಾಡಿ ಅವನನ್ನು ಕೊಂದು ಹಾಕು; ಪ್ರಾಣಿ ಪಕ್ಷಿಗಳಲ್ಲಿ ಜೀವಜಂತುಗಳಲ್ಲಿ ಮರಣದ ಭಯವೇ ನಾಶವಾಗಿ ಎಲ್ಲರೂ ನಿಶ್ಚಿಂತೆಯಿಂದಿರುವರು” ನಾರದರ ಮಾತು ಕೇಳಿ ನನಗೆ ಮತ್ತೇರಿದಂತಾಯಿತು. ನಾಳೆಯೇ ಅವನನ್ನು ಯುದ್ಧದಲ್ಲಿ ಸೋಲಿಸಿ ಹಂತಕನನ್ನು ಕೊಂದು ಹಂತಕನಿಗೆ ಹಂತಕನಾಗಿ ಸಕಲಪ್ರಾಣಿಗಳು ಸ್ವತಂತ್ರವಾಗಿ ಚಿರಂಜೀವಿಗಳಾಗಿರಬೇಕು, ಹಾಗೆ ಮಾಡುತ್ತೇನೆಂದು ಮಾತುಕೊಟ್ಟು ಯಮನ ಮೇಲೆ ದಾಳಿ ಮಾಡಿದೆನು. ಯಮದೂತರು ನನ್ನನ್ನು ಕಂಡು ಹೆದರಿ ಪಲಾಯನ ಮಾಡಿದರು. ನನಗೂ ಯಮನಿಗೂ ಘೋರಯುದ್ಧ ಪ್ರಾರಂಭವಾಯಿತು. ನನ್ನ ಬಾಣಗಳಿಂದ ಯಮನ ವಾಹನವಾದ ಮಹಿಷನನ್ನು ಯಮಲೋಕದಿಂದ ದೂರ ಅಟ್ಟಿದೆ. ಯಮನ ಸಹಾಯಕರೆಲ್ಲ ಸೋತು ಓಡಿ ಹೋದರು. ಕೊನೆಗೆ ಯಮನು ತನ್ನ ಕೊನೆ ಆಯುಧವಾದ ಕಾಲದಂಡವನ್ನು ಹೊರತೆಗೆದಾಗ ಜಗತ್ತೆಲ್ಲಾ ಕಂಪಿಸಿತು. ನಾನಾದರೂ ಹೆದರದೆ ಯಮನ ಮುಂದೆ ನಿಂತು ಭಯಂಕರವಾಗಿ ಯುದ್ಧ ಮಾಡುತ್ತಿದ್ದೆ. ಅಷ್ಟರಲ್ಲಿ ಬ್ರಹ್ಮದೇವರು ಬಂದು ಯಮನಿಗೆ “ಯಮರಾಜ ನೀನು ಕಾಲದ೦ಡವನ್ನು ಹಿಡಿದರೆ ಎದುರಿಸುವರಾರು? ನಾನು ರಾವಣನಿಗೆ ದೇವತೆಗಳಿಂದ ಮರಣವಿಲ್ಲೆಂದು ವರ ನೀಡಿದ್ದೇನೆ. ನನ್ನ ಮಾತು ಸುಳ್ಳಾಗಬಾರದು. ಈಗ ನೀನು ರಾವಣನನ್ನು ಜಯಿಸಲಾರೆ. ಈಗಿನ ಮಟ್ಟಿಗೆ ಮರೆಯಾಗು” ಬಹ್ಮನ ಆಜ್ಞೆಯಂತೆ ಯಮನು ರಣರಂಗದಿಂದ ಓಡಿಹೋದನು. ನಾನು ಜಯಭೇರಿ ಹೊಡೆಯುತ್ತಾ ಲಂಕೆಗೆ ಬಂದೆನು.
ಪಾತಾಳಲೋಕದಲ್ಲಿ ಮಧುವೆಂಬ ದೈತ್ಯನು ರಾಜನಾಗಿದ್ದನು. ಈಶ್ವರನನ್ನು ಕುರಿತು ಮೂರುನೂರುವರ್ಷ ತಪಸ್ಸು ಮಾಡಿ ಶಿವನಿಂದ ತ್ರಿಶೂಲವನ್ನು ವರವಾಗಿ ಪಡೆದು ಮದಾಂಧನಾಗಿ ಮೆರೆಯುತ್ತಿದ್ದನು. ಒಂದು ದಿನ ನಾನಿಲ್ಲದ ವೇಳೆಯಲ್ಲಿ ನನ್ನ ಚಿಕ್ಕಮ್ಮ ಕುಂಬಿನಿಯನ್ನು ಎತ್ತಿಕೊಂಡು ಹೋಗಿ ಮದುವೆ ಮಾಡಿಕೊಂಡನು. ಅಮರಾವತಿಗೆ ಹೊರಟಿದ್ದ ನಾನು ಈ ಸುದ್ದಿಕೇಳಿ ಕಿಡಿಕಿಡಿಯಾದೆನು. ಲಂಕೆಗೆ ಬಂದು ವಿಭೀಷಣನನ್ನು ಕರೆದು ಮಧುದೈತ್ಯನು ಬಂದು ನಮ್ಮ ಮನೆಯ ಹೆಣ್ಣು ಮಗಳನ್ನು ಕದ್ದೊಯ್ಯುವಾಗ ನೀವೆಲ್ಲ ಏನು ಮಾಡುತ್ತಾ ಇದ್ದೀರಿ? ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ ನಿಮ್ಮನ್ನು ನಂಬಿ ರಾಜ್ಯವನ್ನೊಪ್ಪಿಸಿ ಹೊರಗೆ ಹೋಗುವುದು ಮೂರ್ಖತನ. “ಅಣ್ಣಾ ಈ ವಿಷಯದಲ್ಲಿ ಯಾರದ್ದು ತಪ್ಪಿಲ್ಲ. ನಾನು ನೀರಿನಲ್ಲಿದ್ದು ಅಘಮರ್ಷಣ ಮಂತ್ರ ಪಠಿಸುತ್ತಿದ್ದೆ ಮೇಘನಾದನು ನಿಕುಂಬಿಳಾ ಯಾಗದಲ್ಲಿದ್ದನು. ಇನ್ನು ಕುಂಬಕರ್ಣ ಕೇಳುವಂತಿಲ್ಲ, ಇನ್ನಾರು ತಿಂಗಳು ನಿದ್ರಾಲೋಕದಿಂದ ಹೊರಬರುವುದಿಲ್ಲ. ಸೂಕ್ಷ್ಮವಾಗಿ ವಿಚಾರ ಮಾಡಿದರೆ ನಿನ್ನದೇ ತಪ್ಪು ನೀನು ಬೇರೆ ಬೇರೆ, ಲೋಕಗಳಿಂದ ಪತಿವ್ರತಾ ಸ್ತ್ರೀಯರನ್ನು ಅಪಹರಿಸಿ ತರುತ್ತೀಯಾ, ಅವರ ನಿಟ್ಟುಸಿರಿನ ಜ್ವಾಲೆಯಿಂದ ರಾಜ್ಯ, ನಿನ್ನ ಸಂತತಿಯೂ ಸುಟ್ಟು ಹೋಗುತ್ತದೆ” ಎಂದನು. ವಿಭೀಷಣನ ನಿರ್ಭಯ ಮಾತುಗಳನ್ನು ಕೇಳಿ ಎದೆ ಝಲ್ಲೆಂದಿತು. ಸಾವರಿಸಿಕೊಂಡು “ನಾಳೆ ಮಧುದೈತ್ಯನ ಸಂಗಡ ಯುದ್ಧಕ್ಕೆ ಸೈನ್ಯ ಸಿದ್ಧವಿರಲಿ” ಎಂದು ಅಪ್ಪಣೆ ಕೊಟ್ಟ ಮಧು ದೈತ್ಯನ ಮೇಲೆ ಏಕಾಏಕಿ ದಾಳಿ ಮಾಡಿದೆ. ಈಶ್ವರ ವರ ಪ್ರಸಾದವನ್ನು ತ್ರಿಶೂಲವನ್ನು ಧರಿಸಿ ಮಧುದೈತ್ಯನು ನಮ್ಮ ದಂಡಿನ ಮೇಲೆ ಎರಗಿ ನೂರಾರು ಜನರನ್ನು ಕೊಂದು ಹಾಕಿದನು. ಇದರಿಂದ ಕ್ಷುದ್ರನಾದ ನಾನು ಮಧು ದೈತ್ಯನಿಗೆ ಎದುರಾದೆನು. ಉಭಯತರ ನಡುವೆ ಖಾಡಖಾಡಿಯಾದ ಯುದ್ಧವಾಯಿತು. ಎರಡು ಸಲಗಗಳು ಗುದ್ದಾಡಿದಂತೆ ನಾಲ್ಕೆಂಟು ವರ್ಷವಾದರೂ ಯಾರೂ ಸೋಲಲಿಲ್ಲ. ನಾವಿಬ್ಬರೂ ಶಿವಭಕ್ತರು ಶಿವನ ವರಪ್ರಸಾದಿತರು. ಹೀಗಿರಲು ಒಂದು ದಿನ ಚಿಕ್ಕಮ್ಮ ಕುಂಬಿನಿಯು ಗುಪ್ತವಾಗಿ ಬಂದು ಭೇಟಿಯಾಗಿ “ಮಗು ರಾವಣ ಆಗಿದ್ದು ಆಗಿ ಹೋಯಿತು. ನೀನು ಹೇಗಾದರೂ ಮಾಡಿ ನನ್ನ ಮುತ್ತೈದೆತನವನ್ನು ಕಾಪಾಡಬೇಕು. ಸ್ತ್ರೀಯರಿಗೆ ಮುತ್ತೈದೆತನಕ್ಕಿಂತ ಬೇರೆ ಭಾಗ್ಯವಿಲ್ಲ. ಮಗನೇ ನನ್ನ ಪತಿಯನ್ನು ಬಿಟ್ಟುಬಿಡು” ಎಂದು ಪರಿಪರಿಯಾಗಿ ಬೇಡಿಕೊಂಡಳು. ಅವಳ ಬೇಡಿಕೆಗೆ ಮಣಿದ ನಾನು “ಚಿಕ್ಕಮ್ಮ ನಿನ್ನ ಗಂಡನನ್ನು ಕಳುಹಿಸು, ಸಂಧಿಯನ್ನು ಮಾಡಿಸು” ಎಂದು ಹೇಳಿ ಕಳುಹಿಸಿದೆ. ಅವಳಾದರೂ ತನ್ನ ಅರಮನೆಗೆ ಹೋಗಿ, ಗಂಡನನ್ನು ಕಳುಹಿಸಿದಳು. ಗುರುಶುಕ್ರಚಾರ್ಯರ ಹೇಳಿಕೆಯಂತೆ ಅಗ್ನಿಸಾಕ್ಷಿಯಾಗಿ ಸಂಧಿಮಾಡಿಕೊಂಡು ಪರಸ್ಪರ ಮಿತ್ರರಾದೆವು.
ದಿಕ್ಪಾಲಕರನ್ನೆಲ್ಲಾ ಗೆದ್ದ ಬಳಿಕ ಇಂದ್ರನನ್ನು ಗೆಲ್ಲಲೇಬೇಕೆಂಬ ಮಹತ್ವಾಕಾಂಕ್ಷೆಯು ಹುಟ್ಟಿತು. ಮಂತ್ರಿ ಮಹೋದಯರು ಸೈನ್ಯದ ಅಧಿಪತಿಗಳನ್ನು ಪ್ರಮುಖರನ್ನು ಕರೆಯಿಸಿ, ತನ್ನ ಉದ್ದೇಶವನ್ನು ತಿಳಿಸಿ ವಸ್ತ್ರಾಭರಣಗಳಿಂದ ಸತ್ಕರಿಸಿ ಉತ್ತೇಜಿಸಿ ಯುದ್ಧಕ್ಕೆ ಹೊರಡಿಸಿದೆನು, ಕುಂಭಕರ್ಣ ವಿಭೀಷಣರೂ ಜೊತೆಯಾದರು. ದಾಳಿಯ ಸುದ್ದಿಯನ್ನು ಕೇಳಿ ಇಂದ್ರನಾದರೋ ತನ್ನ ದೇವತೆಗಳ ಸೈನ್ಯದೊಡನೆ ಸಮರಕ್ಕೆ ಸನ್ನದ್ಧನಾದನು. ಅಮರಾವತಿಯ ಹೊರವಲಯದಲ್ಲಿ ಸಮರ ಪ್ರಾರಂಭ; ಎರಡೂ ಕಡೆಯವರೂ ಜೀವದ ಹಂಗು ತೊರೆದು ಹೊಡೆದಾಡಿದೆವು. ವೀರಾಧಿವೀರರೆಲ್ಲ ಹತರಾದರು. ರಕ್ತದ ಹೊಳೆಯೇ ಹರಿಯಿತು. ರಣಭೂಮಿಯು ಹೆಣಗಳಿಂದ ಶೃಂಗಾರ ವಾಯಿತು. ಕೊನೆಗೆ ನಾನು ಇಂದ್ರ ಮುಖಾಮುಖಿಯಾದೆವು. ಇಂದ್ರನು ಐರಾವತವನ್ನೇರಿ ವಜ್ರಾಯುಧ ಹಿಡಿದು ನಿಂತನು. ಶಿವಕೊಟ್ಟ ಖಡ್ಗ ಹಿಡಿದು ನಾನು ಬಲವಾಗಿ ಬೀಸಿದೆ. ನನ್ನ ಹೊಡೆತದಿಂದ ತತ್ತರಿಸಿದ ಇಂದ್ರ ಬಲವಾಗಿ ವಜ್ರಾಯುಧವನ್ನು ನನ್ನತ್ತ ಬೀಸಿದನು ವಜ್ರಾಘಾತದಿಂದ ನಾನೂ ತತ್ತರಿಸಿ ಮೂರ್ಚೆಹೋದೆ. ಎಚ್ಚರವಾದಾಗ ಬಿಡಾರದಲ್ಲಿದ್ದೆ ನನ್ನ ಅವಸ್ಥೆಯನ್ನು ಕಂಡು ಕೆಂಡಮಂಡಲನಾದ ಮೇಘನಾದನು ಸಂಗ್ರಾಮದ ನಡುವೆ ಎದುರಾದನು. ನಿಕುಂಬಳಾದೇವಿಯಿಂದ ಪಡೆದ ವರದಿಂದ ದೊರೆತ ಬಾಣದಿಂದ ಎಲ್ಲರನ್ನು ಮೂರ್ಚೆಗೊಳಿಸಿ ಇಂದ್ರನನ್ನು ಖೈದು ಮಾಡಿ ಲಂಕೆಗೆ ತಂದನು. ನನ್ನ ಮಗನ ಪರಾಕ್ರಮವನ್ನು ಕಂಡು ಮಹಾದಾನಂದ. ತಂದೆಗೆ ತಕ್ಕ ಮಗನೆಂದು ಅಪ್ಪಿ ಮುದ್ದಾಡಿದೆ. ಇಂದ್ರನನ್ನು ಬಂಧನಲ್ಲಿಟ್ಟು ಸುಖದಿಂದ ರಾಜ್ಯವಾಳುತ್ತಿದ್ದೆ. ಹೀಗಿರಲು ಒಂದು ದಿನ ಬ್ರಹ್ಮದೇವರು ಲಂಕಾನಗರಿಗೆ ಬಂದರು. ಮುತ್ತಜ್ಜನಾದ ಬ್ರಹ್ಮದೇವರನ್ನು ಕಂಡು ಸಂತೋಷದಿಂದ ಸತ್ಕರಿಸಿ ಅರ್ಘ್ಯಪಾದ್ಯಾದಿಗಳಿಂದ ಪೂಜಿಸಿ ತಾವು ಬಂದ ಕಾರಣವೇನೆಂದು ಕೇಳಿದೆ. ಆಗ ಬ್ರಹ್ಮದೇವರು ಅರಾಜಕ ಸ್ಥಿತಿಯಲ್ಲಿದ್ದ ಸ್ವರ್ಗವನ್ನು ವರ್ಣಿಸಿ ಇಂದ್ರನನ್ನು ಬಿಟ್ಟುಕೊಡುವಂತೆ ಇನ್ನಿಲ್ಲದ ಹಾಗೆ ಕೇಳಿದರು. ಪಕ್ಕದಲ್ಲಿದ್ದ ಮೇಘನಾದನು ನಮಸ್ಕರಿಸಲು “ಮೇಘನಾದನೇ ನಿನ್ನ ಶೌರ್ಯ ಪರಾಕ್ರಮವನ್ನು ಮೆಚ್ಚಿದನು. ನೀನು ಇಂದ್ರನನ್ನು ಗೆದ್ದುದ್ದರಿಂದ ನಿನಗೆ ಇಂದಿನಿಂದ ಇಂದ್ರಜಿತು” ಎಂದು ಹೆಸರಾಗಲಿ ಎಂದು ಆಶೀರ್ವದಿಸಲು ಸಂತಸಪಟ್ಟು ಸೆರೆಮನೆಯಲ್ಲಿದ್ದ ಇಂದ್ರನನ್ನು ತಂದು ಒಪ್ಪಿಸಿದನು. ನಾಚಿಕೆಯಿಂದ ತಲೆತಗ್ಗಿಸಿಕೊಂಡು ನಿಂತಿದ್ದ ಇಂದ್ರನನ್ನು ಕಂಡು ಬ್ರಹ್ಮದೇವರು “ವೀರನೇ ಯುದ್ಧದಲ್ಲಿ ಸೋಲುಗೆಲುವುಗಳು ಸಹಜ, ನೀನು ಚಿಂತಿಸಬೇಡ. ನೀನಿಲ್ಲದೆ ಅಮರಾವತಿಯು ಅರಾಜಕವಾಗಿದೆ. ನನ್ನ ಅಪ್ಪಣೆಯಂತೆ ಸ್ವರ್ಗವನ್ನು ಪಾಲಿಸು” ಎಂದು ಸಂತೈಸಿ ರಾವಣನ ಅಪ್ಪಣೆ ಪಡೆದು ಇಂದ್ರನೊಂದಿಗೆ ಸ್ವರ್ಗಕ್ಕೆ ಹೋದನು. ಇಂದ್ರನನ್ನು ನಾನು ಜಯಿಸದಿದ್ದರೂ ನನ್ನ ಮಗ ಇಂದ್ರನನ್ನು ಗೆದ್ದದ್ದು ನೂರುಪಟ್ಟು ಸಂತೋಷವಾಯಿತು. ಯಾವ ತಂದೆಗಾದರೂ ಮಕ್ಕಳು ತಮ್ಮನ್ನು ಮೀರಿಸಿ ಬೆಳೆಯಬೇಕೆಂಬ ಸ್ವಾರ್ಥ ಇದ್ದೇ ಇರುತ್ತದೆಯಲ್ಲವೇ!
ದಿಗ್ವಿಜಯಗಳ ಸರಮಾಲೆಯನ್ನು ಹೊತ್ತ ನನಗೆ ಕೀರ್ತಿ ಲಕ್ಷ್ಮಿ ಬೆನ್ನ ಹಿಂದೆಯೇ ಇದ್ದಳು. ಜಯಗಳಿಸಿದವನಿಗೆ ಅಹಂಕಾರ ಜಂಬ ಬೆಳೆಯುತ್ತದಲ್ಲವೇ; ಹಾಗೆ ನನಗೂ ಆಯಿತು. ನನ್ನ ಸಮಯಾರಿಲ್ಲ, ನನ್ನನ್ನು ಗೆಲ್ಲಬಲ್ಲವರು ಈ ಜಗತ್ತಿನಲ್ಲೇ ಇಲ್ಲವೆಂಬ ದುರಾಭಿಮಾನ ಬೆಳೆಯಿತು. ಹಾಗೆ ಒಂದು ದಿನ ಒಡ್ಡೋಲಗದಲ್ಲಿ ವಿರಾಜಮಾನವಾಗಿ ಕುಳಿತು ಮಂತ್ರಿಗಳನ್ನು ಸೇನಾನಿಗಳನ್ನು ಉದ್ದೇಶಿಸಿ, “ನಾನು ಇಂದ್ರಾದಿ ದಿಕ್ಪಾಲಕರನ್ನು ದಾನವರನ್ನು ಜಯಿಸಿದೆನು. ಇನ್ನು ಮೇಲೆ ನಾನು ಯಾರನ್ನು ಗೆಲ್ಲಬೇಕು? ಯಾರೊಂದಿಗೆ ಯುದ್ಧ ಮಾಡಬೇಕು. ಹಾಗಿದ್ದರೆ ಅವರ ಹೆಸರನ್ನು ಹೇಳಿರಿ. ಅವರನ್ನು ಜಯಿಸಿ ಲೋಕೈಕ ವೀರನೆಂದು ಬಿರುದು ಪಡೆಯುತ್ತೇನೆ” ಎಂದು ಗರ್ವದಿಂದ ಹೇಳಿದೆ. ನನ್ನ ಪ್ರಶ್ನೆಗೆ ಉತ್ತರಿಸುವ ನನ್ನ ಸೊಕ್ಕಿನ ಮಾತಿಗೆ ಎದುರಾಡುವ ಧೈರ್ಯ ಸಾಹಸ, ಯಾರಲ್ಲೂ ಇರಲಿಲ್ಲ. ಆದರೆ ಸದಾ ದೈವಭಕ್ತ, ಸತ್ಯಸಂಧನೆಂದು ಕೊಚ್ಚಿಕೊಳ್ಳುವ ನನ್ನ ತಮ್ಮ ವಿಭೀಷಣನು ಎದ್ದು ನಿಂತು “ಅಗ್ರಜಾ, ನೀನು ಹಾಗೆಂದುಕೊಳ್ಳಬೇಡ. ಈ ಜಗತ್ತಿನಲ್ಲಿ ಒಬ್ಬರನ್ನು ಮೀರಿಸುವ ಒಬ್ಬರು ವೀರರು ಇದ್ದೇ ಇರುತ್ತಾರೆ. ನೀನು ನಿಜವಾಗಿಯೂ, ಲೋಕೈಕ ವೀರನಾಗಬೇಕಾದರೆ ಮಹಿಷ್ಮತಿಯರಾಜ ಕಾರ್ತವೀರ್ಯಾರ್ಜುನನೊಂದಿಗೆ ಯುದ್ಧ ಮಾಡಿ ಅವನನ್ನು ಸೋಲಿಸು. ಹಾಗೆಯೇ ಕಿಶ್ಕಿಂದೆಯ ಅರಸು ವಾಲಿಯ ಸಂಗಡ ಹೋರಾಡು ಇವರಿಗಿಂತಲೂ ಮಿಗಿಲಾದವನು ಬಲಿ ಚಕ್ರವರ್ತಿ ರಸಾತಳದಲ್ಲಿದ್ದಾನೆ. ಅವನೊಂದಿಗೆ ಯುದ್ಧ ಮಾಡು ನಿನ್ನ ಪರಾಕ್ರಮದ ಪೌರುಷ. ಎಲ್ಲರಿಗೂ ತಿಳಿಯುವುದು. ಅವರಿವರನ್ನು ಸೋಲಿಸಿ ಅಜೇಯನಾದೆನೆಂದು ಹೆಮ್ಮೆ ಪಡಬೇಡ. ನಿನ್ನ ಆತ್ಮ ಪ್ರಶಂಸೆ ಮಾಡಿಕೊಳ್ಳಬೇಡ” ತಮ್ಮನ ಮಾತುಗಳನ್ನು ಕೇಳಿ ಕ್ರೋಧ ಉಕ್ಕಿ ಬಂದರೂ ತಡೆದು ಸಭೆಯಲ್ಲಿ ಏನೂ ಮಾತನಾಡಲಾಗದೆ ಅಂತಃಪುರಕ್ಕೆ ಹೊರಟು ಬಂದೆ. ವಿಭೀಷಣನ ಮಾತುಗಳು ಬಾಣದಂತೆ ಇರಿಯುತ್ತಿದ್ದವು. ನೋಡಿಯೇ ಬಿಡಬೇಕು. ಅವರೆಲ್ಲರ ಶೌರ್ಯ ಪರಾಕ್ರಮಗಳನ್ನು ನೋಡಿ ಆನಂದಿಸಬೇಕು. ಸೋತರೂ ಚಿಂತೆಯಿಲ್ಲ. ಅವರೊಂದಿಗೆ ಹೋರಾಡಬೇಕು. ಸಮಾನ ಬಲ ಪರಾಕ್ರಮಿಗಳೊಂದಿಗೆ ಸೆಣಸುವುದೇ ವೀರರಲಕ್ಷಣ, ಸೋಲು ಗೆಲುವಿನ ಮೆಟ್ಟಿಲು ಸೋಲುತ್ತೇನೆಂಬ ಹಿಂಜಿರಿಕೆ ಬೇಡ ಗೆದ್ದೇ ಗೆಲ್ಲುತ್ತೇನೆಂಬ ಆತ್ಮವಿಶ್ವಾಸವೇ ಮುಖ್ಯ. ಹೇಡಿಯಾದವನು ದಿನನಿತ್ಯ ಸಾಯುತ್ತಾನೆ ಆದರೆ ಈ ರಾವಣನಿಗೆ ಜಯಾಪಜಯಗಳು ಲೆಕ್ಕಕ್ಕಿಲ್ಲ. ಯುದ್ಧ ಮಾಡಬೇಕು, ಹೋರಾಡಬೇಕು ಯಾರು ಏನಾದರೂ ಅಂದುಕೊಳ್ಳಲಿ ನನಗೇನು? ಯುದ್ಧವೆಂದರೆ ಸಾಕು, ಮೈಮನಗಳಲ್ಲಿ ರೋಮಾಂಚನ! ಎಷ್ಟೊತ್ತಿಗೆ ಅವರೆಲ್ಲರನ್ನು ಎದುರಿಸುತ್ತೇನೆ? ಕಾತುರದಿಂದ ದಿನಗಳನ್ನು ಕಾಯತೊಡಗಿದೆ.
ವಿಭೀಷಣನ ಮರ್‍ಮಬೇಧಕವಾದ ಮಾತುಗಳಿಂದ ಮನನೊಂದು ಅವನ ಮಾತುಗಳನ್ನು ಶೀಘ್ರದಲ್ಲಿಯೇ ಪರೀಕ್ಷಿಸಿ ಸುಳ್ಳು ಮಾಡಬೇಕೆಂದು ನಿಶ್ಚಯಿಸಿ ಪ್ರಹಸಾದಿ ಮಂತ್ರಿಗಳೊಂದಿಗೆ ಮಹತ್ತರ ಸೈನ್ಯದೊಂದಿಗೆ ಈಶ್ವರದತ್ತವಾದ ಚಂದ್ರಹಾಸದೊಂದಿಗೆ (ಖಡ್ಗ) ಪುಷ್ಪಕವಿಮಾನವನ್ನೇರಿ ಮಾಹಿಷ್ಮತಿ ನಗರಕ್ಕೆ ಬಂದೆನು. ಅಲ್ಲಿ ವಿಚಾರಿಸಲು ರಾಜನು ತನ್ನ ರಾಣೀ ವಾಸದವರನ್ನು ಕರೆದುಕೊಂಡು ನದಿಯಲ್ಲಿ ಜಲಕ್ರೀಡೆಯಾಡಲು ಹೋಗಿರುವನೆಂದು ತಿಳಿದು ಸಕಲ ಪರಿವಾರದೊಂದಿಗೆ ಅಲ್ಲಿಗೆ ಬಂದೆನು. ಆಗ ಮಧ್ಯಾಹ್ನದ ಸಮಯವಾದ್ದರಿಂದ ನದಿಯಲ್ಲಿ ಸ್ನಾನಮಾಡಿ ಮರಳಿನಿಂದ ಈಶ್ವರ ಲಿಂಗವನ್ನು ಮಾಡಿ ಪೂಜಿಸುತ್ತಿರುವಾಗ ಅದೇ ಸಮಯಕ್ಕೆ ಕಾರ್ತವೀರ್ಯನು ತನ್ನ ಐನೂರು ತೋಳುಗಳಿಂದ ನದಿಯ ನೀರನ್ನು ತಡೆಯಲು ಅಲೆಗಳು ಉಕ್ಕಿ ಬಂದು ಮರಳಿನ ಲಿಂಗವನ್ನು ಕೊಚ್ಚಿಕೊಂಡು ಹೋದವು. ಲಂಕಾದೀಶನಾದ ತನಗೆ ಈ ರೀತಿಯ ಅಪಮಾನವೇ! ಇದನ್ನು ಸಹಿಸುವುದೆಂತು? ಇವನನ್ನು ಬಿಡಬಾರದು ಹುಟ್ಟಡಗಿಸಬೇಕೆಂದು ಕ್ರುದ್ಧನಾಗಿ ಚಂದ್ರಹಾಸವನ್ನು ಝಳಪಿಸುತ್ತ ಈ ಕಾರ್ಯ ಮಾಡಿದವನ ಶಿರಶ್ಚೇದನ ಮಾಡುತ್ತೇನೆಂದು ಹುಡುಕುತ್ತಾ ಬರುವಾಗ ಮಹಾಶೂರನಾದ ಕಾರ್ತವೀರ್ಯಾರ್ಜುನನ ದರ್ಶನವಾಯಿತು. ಅವನ ಭವ್ಯ ಆಕಾರ, ತೇಜೋಪುಂಜ ಕಣ್ಣುಗಳನ್ನು ನೋಡಿ ಕ್ಷಣಕಾಲ ಅಧೀರನಾದರೂ ಧೈರ್ಯದಿಂದ ತನ್ನ ಪೂಜೆಯನ್ನು ಕೆಡಿಸಿದ್ದಕ್ಕಾಗಿ ಮನಬಂದಂತೆ ನಿಂದಿಸಿದೆ. ಆಗ ಅರ್ಜುನನು “ಜಲಕ್ರೀಡೆಯಾಡುವಾಗ ನೀನೇಕೆ ಇಲ್ಲಿಗೆ ಬಂದೆ” “ನಾನು ನಿಮ್ಮೊಂದಿಗೆ ಯುದ್ಧ ಮಾಡಬೇಕು” ಎನ್ನಲು ಕಾರ್ತವೀರ್ಯನು ಆನಂದದಿಂದ ಒಪ್ಪಿಕೊಂಡ ತನ್ನ ರಾಣಿಯರನ್ನು ಅರಮನೆಗೆ ಕಳುಹಿಸಿದನು. ತನ್ನ ಐದುನೂರು ಭುಜದ ಗದೆಯೊಂದಿಗೆ ರಣಭೂಮಿಗೆ ಬಂದನು. ಇಬ್ಬರೂ ಮದಿಸಿದ ಆನೆಗಳಂತೆ ಎದಿರುಬದಿರಾದೆವು. “ಎಲೈ ಕಾರ್ತವೀರ್ಯನೇ ಸ್ತ್ರೀಲೋಲನಾದ ನೀನು ನನ್ನೊಂದಿಗೆ ಯುದ್ಧ ಮಾಡುವುದು ಸುಲಭವೆಂದು ತಿಳಿದಿರುವೆಯಾ? ಜಿತೇಂದ್ರಿಯತ್ವವು ಅತ್ಯಂತ ಬಲಕರವು” ಎಂದೆ. “ಎಲೈ ರಾಕ್ಷಸಾಧಮನೇ ಧರ್ಮಾತ್ಮರಾದ ದೇವತೆಗಳನ್ನು ನಿರಪ್ರದವಿ ಪ್ರಜೆಗಳನ್ನು ಗೆದ್ದಮಾತ್ರಕ್ಕೆ ಅಜೇಯನೆಂದು ತಿಳಿಯಬೇಡ, ನನ್ನೊಂದಿಗೆ ಯುದ್ಧ ಮಾಡು” ಅದಕ್ಕೆ ಪ್ರತಿಯಾಗಿ ನಾನು “ಸಾವಿರ ತೋಳುಗಳಿರುವೆಯೆಂದು ಗರ್ವಪಡುವೆಯಾ ನಿನ್ನ ಸಹಸ್ರ ಬಾಹುಗಳು ನನ್ನ ಇಪ್ಪತ್ತು ಭುಜಗಳಿಗೆ ಸರಿಯಾಗಲಾರವು. ನಾನು ಪ್ರಾಣಬಿಕ್ಷೆಯನ್ನು ಬೇಡಲು ಬಂದವನಲ್ಲ. ಯುದ್ಧದಲ್ಲಿ ಹೋರಾಡಿ ನಿನ್ನನ್ನು ಜಯಿಸಿ ನಿನ್ನ ರಾಜ್ಯದಲ್ಲಿ ನನ್ನ ಹೆಸರನ್ನು ಅಜರಾಮರವಾಗುವಂತೆ ಮಾಡಲು ಬಂದಿದ್ದೇನೆ. ಎಚ್ಚರಿಕೆಯಿಂದ ಯುದ್ಧ ಮಾಡು”. “ಮಾತುಗಳಿಂದ ಕಾಲಕಳೆಯಬೇಡ ನಿನ್ನ ಯುದ್ಧದ ನೈಪುಣ್ಯತೆಯನ್ನು ತೋರಿಸುವಂತನಾಗು” ನಾವಿಬ್ಬರೂ ಮಹಾವೀರರು ಎಲ್ಲಾ ವಿದ್ಯೆಗಳನ್ನು ತಿಳಿದವರು, ಚದುರಂಗ ಬಲವುಳ್ಳವರು, ತರುಣರು ಅಂದಮೇಲೆ ಬೇರೆ ಮಾತೇಕೆ? ನಮ್ಮಿಬ್ಬರ ಯುದ್ಧವನ್ನು ನೋಡಲು ದೇವತೆಗಳು ಗಗನಮಾರ್‍ಗದಲ್ಲಿ ನೆರೆದರು. ಶಂಕಿತರಾದ ಎರಡೂ ಕಡೆಯ ಸೈನ್ಯಬಲ ಯಾರು ಗೆಲ್ಲಬಹುದೆಂದು ಕೂತೂಹಲದ ನಿರೀಕ್ಷೆಯಲ್ಲಿದ್ದರು.
ನನ್ನ ಇಪ್ಪತ್ತು ಭುಜಗಳಲ್ಲಿಯೂ ಹತ್ತು ಬಿಲ್ಲುಗಳಿಂದ ಹತ್ತು ಬಾಣಗಳನ್ನು ಬಿಟ್ಟರೆ ಅರ್ಜುನನು ಅವೆಲ್ಲವುಗಳನ್ನು ತುಂಡರಿಸಿದನು. ಬಾಣಗಳಿಂದ ಪ್ರಯೋಜನವಿಲ್ಲವೆಂದು ತನ್ನ ಖಡ್ಗದಿಂದ ತುಂಡರಿಸಲು ಮುಂದಾದೆ ಕಾರ್ತವೀರ್ಯನು ಬಾಣಗಳ ಸುರಿಮಳೆಯಿಂದ ಮುಂದೆ ದಾರಿಗಾಣದೆ ಕಂಗಾಲಾಗಿ ನಿಂತೆ, ಖಡ್ಗಯುದ್ಧದಿಂದ ಸೋಲಿಸಲಾಗುವುದಿಲ್ಲವೆಂದು ಮನಗಂಡು ತಾಮಸೀವಿದ್ಯೆಯಿಂದ ಯುದ್ಧಭೂಮಿಯಲ್ಲಿ ಕತ್ತಲೆ ಕವಿಸಿದೆನು. ಆದರೆ ಎದುರಾಳಿಯು ಸೂರ್ಯಾಸ್ತ್ರಪ್ರಯೋಗಿಸಿ ಮತ್ತೆ ಬೆಳಕನ್ನುಂಟು ಮಾಡಿದನು. ನಾನು ಪ್ರಯೋಗಿಸಿದ ಎಲ್ಲಾ ಅಸ್ತ್ರಗಳು ನಿಶ್ಚಲವಾದವು. ಕೊನೆಗೆ ನಾನು ನಿರ್ವಾಹವಿಲ್ಲದೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದೆ. ಕಾರ್ತವೀರ್ಯನು ನಾರಾಯಣಾಸ್ತ್ರವನ್ನು ಬಿಟ್ಟನು. ಎರಡು ಅಸ್ತ್ರಗಳು ಗಗನದಲ್ಲಿ ಒಂದಕ್ಕೊಂದು ತಾಕಿ ಅದರಿಂದ ಹುಟ್ಟಿದ ಜ್ವಾಲೆ ಇಡೀ ಭೂಮಂಡಲವನ್ನು ವ್ಯಾಪಿಸಿತು. ಜಗತ್ತೇ ಅಲ್ಲೋಲಕಲ್ಲೋಲವಾಯಿತು. ದುರಂತವಾದೀತೆಂದು ಹೆದರಿ ಬ್ರಹ್ಮದೇವನು ಬಂದು ಇಬ್ಬರಿಗೂ ಅಸ್ತ್ರಗಳನ್ನು ಉಪಸಂಹರಿಸಲಿಕ್ಕೆ ಹೇಳಿ ಸತ್ಯಲೋಕಕ್ಕೆ ಮರಳಿದರು. ಹದಿನಾಲ್ಕು ಲೋಕಗಳಿಗೂ ಕ್ಷೇಮವುಂಟಾಯಿತು. ಕತ್ತಲಾದ್ದರಿಂದ ಯುದ್ಧ ನಿಂತಿತು. ಮಾರನೇ ದಿನ ರಣಬೈರವನಂತೆ ಕಣ್ಣು ಬಿಡುತ್ತಾ ಕಾರ್ತವೀರ್ಯನು ತನ್ನ ಸಾವಿರ ಬಾಹುಗಳಿಂದ ಐದುನೂರು ಬಾಹುಗಳ ಉದ್ದವಿದ್ದ ಗದೆಯನ್ನು ಹಿಡಿದು ಬಂದು ಗರಗರ ತಿರುಗಿಸಲು ಅದರಿಂದೆದ್ದ ಗಾಳಿಯಿಂದ ನನ್ನ ಸೈನ್ಯದೊಳಗಿನ ಅನೇಕ ಸೈನಿಕರು ತೂರಿ ಹೋಗಿ ಸಮುದ್ರದಲ್ಲಿ ಬಿದ್ದರು. ಆಕಾಶದಲ್ಲಿ ನೆರೆದಿದ್ದ ದೇವತೆಗಳ ವಿಮಾನಗಳು ಒಂದಕ್ಕೊಂದು ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದವು. ನನ್ನ ಸೈನಿಕರಿಗಾದ ಗತಿಯನ್ನು ಕಂಡು ಅಷ್ಟಗಂಟಾ ಶಕ್ತಿಯನ್ನು ಪ್ರಯೋಗಿಸಿದೆನು. ಆ ಕೂಡಲೇ ತನ್ನ ಗದೆಯಿಂದ ಅಪ್ಪಳಿಸಿ ಪುಡಿ ಪುಡಿ ಮಾಡಿದನು. ನಾನು ಬಲವಾಗಿ ನಂಬಿದ್ದ ಶಕ್ತಿಯು ವ್ಯರ್ಥವಾದುದನ್ನು ಕಂಡು ಬಹಳ ದುಃಖವಾಯಿತು. ಹೇಗಾದರೂ ಸರಿ, ಕಾರ್ತವೀರ್ಯನನ್ನು ಗೆಲ್ಲಲೇಬೇಕೆಂದು ಹೀಗೆಲ್ಲಾ ವಿಚಾರ ಮಾಡಿದರೂ ತಲೆಗೆ ಉಪಾಯಗಳು ಹೊಳೆಯಲಿಲ್ಲ. ಮೇಘನಾದನನ್ನು ಕರೆಯಿಸಬೇಕೆಂದರೆ ತುಂಬಾ ದೂರ ಬಂದಿದ್ದೇನೆ. ನೀರಿಗೆ ಇಳಿದ ಮೇಲೆ ಚಳಿಯೇನು? ಮಳೆಯೇನು? ಆದದ್ದಾಗಲಿ ಅರ್ಜುನನನ್ನು ಎದುರಿಸಿ ಹೋರಾಡುತ್ತೇನೆ. ಸೋಲೋ ಗೆಲುವೋ ಈಶ್ವರನಿಗೆ ಬಿಟ್ಟದ್ದು ಎಂದು ನಿರ್ಧಾರ ತಾಳಿ ಯುದ್ಧ ಮಾಡಲು ಮತ್ತೆ ಸಿದ್ಧನಾದೆನು. ಕಾರ್ತವೀರ್ಯನು ನನ್ನನ್ನು ಛೇಡಿಸುತ್ತಾ “ಎಲೈ ದಶಕಂಠನೇ ನಿನಗೇಕೆ ನನ್ನ ಮೇಲೆ ಇಷ್ಟೊಂದು ಆಕ್ರೋಶ! ನಿನಗೆ ಯಾವುದರ ಕೊರತೆಯಾಗಿದೆ ಏನಾದರೂ ಬೇಕಿದ್ದರೆ ವಿನಯದಿಂದ ಬೇಡು” ಎಂದನು. ಆತನ ಮಾತಿಗೆ ಮನವು ಕೆರಳಿ “ವೈರಿಯಾದ ನಿನ್ನಿಂದ ಸಹಾಯವನ್ನು ಯಾಚಿಸುವಷ್ಟು ಗತಿಗೆಟ್ಟಿಲ್ಲ ನಿನ್ನೊಡನೆ ಹೋರಾಡಿ ಗೆಲ್ಲಬೇಕೆಂಬುದೇ ನನ್ನ ಗುರಿ. ಅದಕ್ಕಾಗಿ ನನ್ನ ಪ್ರಾಣ ಹೋದರೂ ಚಿಂತಿಸುವುದಿಲ್ಲ”.
“ವ್ಯರ್ಥವಾಗಿ ನನ್ನಿಂದ ಸಾಯುತ್ತೀಯಾ. ಈಗ ನೋಡು ನಿನ್ನ ಸೊಕ್ಕಿನ ಮಾತುಗಳಿಗೆ ತಕ್ಕ ಉತ್ತರ ನೀಡುತ್ತೇನೆ” ಎಂದವನೇ ತನ್ನ ಗದೆಯಿಂದ ಜೋರಾಗಿ ಅಪ್ಪಳಿಸಿದನು. ತಲೆಸಿಡಿದು ಸಹಸ್ರಹೋಳಾಗುವಷ್ಟು ನೋವಾಯಿತು. ಆಧಾರ ತಪ್ಪಿ ನೆಲಕ್ಕೆ ಬಿದ್ದೆ. ಕಾರ್ತವೀರ್ಯನು ನನ್ನ ಸೈನಿಕರನ್ನೆಲ್ಲಾ ಸದೆಬಡಿದು ನನಗೂ ಪ್ರಹಸ್ತನಿಗೂ ಬಂಗಾರದ ಬೇಡಿಗಳನ್ನು ಹಾಕಿ ಸೆರೆಮನೆಗೆ ತಳ್ಳಿದನು. ನನಗಂತೂ ತಲೆ ಎತ್ತಲಾಗದಷ್ಟು ಅವಮಾನದಿಂದ ಕುಗ್ಗಿಹೋದೆ. ವಿಭೀಷಣನು ನನ್ನ ಮುಂದೆ ಗಹಗಹಿಸಿ ನಕ್ಕು “ಅಣ್ಣಾ ನನ್ನ ಮಾತು ಕೇಳಿದೆಯಾ ಅನುಭವಿಸು” ಎಂದ ಹಾಗಾಗಿ ಬಿಚ್ಚಿಬಿದ್ದೆ. ಈಗ ಇಲ್ಲಿಂದ ತಪ್ಪಿಸಿಕೊಳ್ಳುವ ಬಗೆ ಹೇಗೆ? ಸಾಯುವವರೆಗೂ ವೈರಿಯ ಮನೆಯಲ್ಲಿ ಕೊಳೆಯುವಂತಹ ಪರಿಸ್ಥಿತಿ ತಂದುಕೊಂಡೆ. ಯಾಕೆ ಬೇಕಾಗಿತ್ತು ನನಗೀ ಉದ್ಧಟತನ! ನನ್ನಿಂದ ಮಂತ್ರಿಗಳು, ಸೈನಿಕರು, ವಿಪತ್ತಿನಲ್ಲಿ ಸಿಲುಕಿದರು. ನನ್ನೊಬ್ಬನ ದುರಹಂಕಾರ ದಿಂದ ಹಠದಿಂದ ಎಲ್ಲರಿಗೂ ಎಷ್ಟೊಂದು ನೋವು. ಹೇಗಾದರೂ ಈ ಸಂಕಷ್ಟದಿಂದ ಪಾರು ಮಾಡು ಸೆರೆಮನೆಯಲ್ಲಿರುವವರೆಗೂ ಜಪ, ತಪ ಪ್ರಾರ್ಥನೆ ಇದಿಷ್ಟೆ. ನನ್ನ ಕೆಲಸ, ಆದಷ್ಟು ಬೇಗ ನನ್ನ ಬಿಡುಗಡೆಯಾಗುತ್ತದೆಂದು ನಂಬಿಕೆಯಿತ್ತು. ನನ್ನ ನಂಬಿಕೆ ಸುಳ್ಳಾಗಲಿಲ್ಲ. ಪರಮೇಶ್ವರನ ಕೃಪೆಯಿಂದ ನನ್ನ ಅಜ್ಜ, ಪುಲಸ್ತ್ಯನು ನನ್ನನ್ನು ಬಿಡುಗಡೆ ಮಾಡಿ ಕರೆದುಕೊಂಡು ಹೋಗಬೇಕೆಂದು ಮಾಹಿಷ್ಮತಿ ನಗರಕ್ಕೆ ಬಂದು ಕಾರ್ತವೀರ್ಯಾರ್ಜುನನಲ್ಲಿ ನನ್ನ ಪರವಾಗಿ ಕ್ಷಮೆಯಾಚಿಸಿ ತನ್ನ ಮೊಮ್ಮಗ ಮಾಡಿದ ಕಾರ್‍ಯಗಳನ್ನು ನಿಂದಿಸಿ ಅವನನ್ನು ಕ್ಷಮಿಸಿ ಬಿಟ್ಟುಬಿಡಬೇಕೆಂದು ಮನವಿ ಮಾಡಿದರು. ಅವರ ಮಾತನ್ನು ಮೀರಲಾರದೆ ಒಂದೇ ಮಾತಿಗೆ ಒಪ್ಪಿಕೊಂಡು ನನ್ನನ್ನು ಕರೆಸಿ ಸಂಕೋಲೆಯನ್ನು ತೆಗೆಯಿಸಿ ಮಂಗಳಸ್ನಾನವನ್ನು ಮಾಡಿಸಿ ದಿವ್ಯಾಭರಣಗಳನ್ನಿತ್ತು ಸುಗ್ರಾಸ ಭೋಜನದಿಂದ ತೃಪ್ತಿಪಡಿಸಿದನು. ಸ್ನೇಹದಿಂದ ನನ್ನನ್ನು ಬಿಗಿದಪ್ಪಿ “ರಾವಣ ಕ್ಷತ್ರಿಯರಿಗೆ ರಣರಂಗದಲ್ಲಿ ಹೋರಾಡುವುದೇ ಪರಮಕಾರ್ಯವು ಮಡಿಯುವುದು ವೀರಸ್ವರ್ಗ! ನಿನ್ನ ಧೈರ್ಯ ಶೌರ್ಯ ನನಗೆ ಮೆಚ್ಚಿಗೆಯಾಯಿತು. ನಿನಗೆ ನನ್ನಿಂದ ಸೋಲಾಯಿತೆಂದು ನೊಂದುಕೊಳ್ಳಬೇಡ, ನಮ್ಮ ಮುತ್ತಜ್ಜನಾದ ಪುಲಸ್ತ್ಯ ಮುನಿಗಳು ನನ್ನ ಮನೆಯವರೆಗೆ ಬಂದು ಬೇಡಿದ್ದರಿಂದ ನಿನ್ನನ್ನು ಅವರ ವಶಕ್ಕೆ ಒಪ್ಪಿಸಿದ್ದೇನೆ. ಇಂದಿನಿಂದ ನಾನೂ ನೀನೂ ಅಗ್ನಿಸಾಕ್ಷಿಯಾಗಿ ಮಿತ್ರರಾಗೋಣ, ಸಂಕಷ್ಟ ಸಮಯದಲ್ಲಿ ಒಬ್ಬರಿಗೊಬ್ಬರೂ ಸಹಾಯಮಾಡಬೇಕೆಂದು ನಿರ್ಧರಿಸಿದ್ದೇವೆ. ಹೋಗಿ ಬಾ. ಮಿತ್ರ ನಿನಗೆ ಮಂಗಳವಾಗಲಿ” ಎಂದು ಹಾರೈಸಿದನು.
ನನಗಾದರೋ ನಾಚಿಕೆಯಿಂದ ತಲೆತಗ್ಗಿಸುವಂತಾಯಿತು. ಭೂಮಿ ಬಾಯ್ಬಿಟ್ಟು ನನ್ನ ನುಂಗಬಾರದೇ! ಮಿತ್ರನ ಹೃದಯವೈಶಾಲ್ಯತೆಯನ್ನು ಕಂಡು ಮನ ತುಂಬಿ ಬಂತು. ಆದರೂ ಇಂತಹ ವೀರಾಧಿವೀರನೊಂದಿಗೆ ಸೋಲುವುದು ಹೆಮ್ಮೆಯ ವಿಷಯವೇ! ಅರ್ಜುನನಂತಹ ಮಿತ್ರನನ್ನು ಪಡೆಯುವುದು ನನ್ನ ಸೌಭಾಗ್ಯ ಮತ್ತೊಮ್ಮೆ ಮಿತ್ರನನ್ನು ಬಿಗಿದಪ್ಪಿ ಸ್ನೇಹದಿಂದ ಬೀಳ್ಕೊಂಡು ಲಂಕೆಗೆ ಬಂದೆನು. ನಾನು ಕ್ಷೇಮವಾಗಿ ಬಂದೆನೆಂದು ಎಲ್ಲರೂ ಸಂತೋಷಪಟ್ಟರು. ಕೆಲವು ದಿನಗಳು ಕಳೆದವು, ವಿಭೀಷಣ ಹೇಳಿದ ಮೂವರಲ್ಲಿ ಒಬ್ಬನ ಪರೀಕ್ಷೆಯಾಯಿತು. ಇನ್ನಿಬ್ಬರನ್ನು ಪರೀಕ್ಷಿಸಬೇಕು, ಮುಂದಿನ ಗುರಿ ವಾಲಿಯನ್ನು ಗೆಲ್ಲುವುದು. ಒಂದು ದಿನ ಒಡ್ಡೋಲಗದಲ್ಲಿ ನನ್ನ ಮುಂದಿನ ಉದ್ದೇಶವನ್ನು ತಿಳಿಸಿದಾಗ ಎಲ್ಲರೂ ತಿರಸ್ಕರಿಸಿದರು. ವಿಭೀಷಣನ ವ್ಯಂಗ್ಯ ನಗೆ ನನ್ನ ಎದೆಯನ್ನು ಇರಿಯಿತು. ಮೇಘನಾದ, ಕುಂಭಕರ್ಣರು ಇಂತಹ ಸಾಹಸ ಕೆಲಸಕ್ಕೆ ಕೈ ಹಾಕಬೇಡವೆಂದು, ಕೇಳಿಕೊಂಡರು. ಆದರೆ ನನ್ನ ಮನಸ್ಸಿನಲ್ಲಿ ಒಂದು ವಿಷಯ ನೆಲೆ ನಿಂತ ಮೇಲೆ ಅದಕ್ಕೊಂದು ಗತಿ ಕಾಣಿಸದೆ ಸಮಾಧಾನವಾಗದು. ಮೂರೊತ್ತು ವಾಲಿಯದೇ ಚಿಂತೆ. ಅವನನ್ನು ಯಾವ ರೀತಿಯಿಂದ ಹೀಗೆಲ್ಲಾ ಜಯಿಸಬೇಕು ಎಂಬುದೇ ಯೋಚನೆ ಈ ಸಲ ಮಾತ್ರ ಜೊತೆಗೆ ಯಾರನ್ನು ಕರೆದುಕೊಂಡು ಹೋಗಬಾರದು. ನಾನೊಬ್ಬನೇ ಹೋಗಿ ವಾಲಿಯನ್ನು ಜಯಿಸಬೇಕು. ಅದಕ್ಕಾಗಿ ಪ್ರತಿನಿತ್ಯ ಗರಡಿ ಸಾಧನೆ! ಹಾಲು ಬೆಣ್ಣೆ ಪೌಷ್ಠಿಕ ಪದಾರ್ಥಗಳ ಸೇವನೆ, ಪರಮೇಶ್ವರನಲ್ಲಿ ತ್ರಿಕಾಲಪೂಜೆ ಅಷ್ಟು ದಿನಗಳವರೆಗೆ ಜಿತೇಂದ್ರಿಯನಾಗಿದ್ದು ಏಕಾಗ್ರತೆಯಿಂದ ಶಸ್ತ್ರಾಭ್ಯಾಸ ಮಾಡಿದೆನು. ಒಂದು ನಿಗದಿಯಾದ ಕಾಲ ಗೊತ್ತು ಮಾಡಿ ಕಿಷ್ಕಿಂದೆಗೆ ಪ್ರಯಾಣ ಹೊರಟೆನು. ತಾನೊಬ್ಬನೇ ಹೊರಟು ವಿಮಾನ ಮಾರ್ಗದಿಂದ ಕಿಷ್ಕಿಂದೆಯನ್ನು ಸೇರಿದೆನು. ಎಲ್ಲಾ ವಾನರರು ಒಂದೇ ರೀತಿಯಲ್ಲಿದ್ದರು. ಯಾರು ರಾಜ, ಯಾರು ಮಂತ್ರಿ ತಿಳಿಯದೆ ಕಕ್ಕಾಬಿಕ್ಕಿಯಾದೆ. ಹತ್ತಿರದಲ್ಲಿದ್ದ ವಾನರನನ್ನು ಕಂಡು “ನಿಮ್ಮ ಅರಸನಾದ ವಾಲಿಯು ಎಲ್ಲಿ? ಎಂದು ಕೇಳಿದೆ. ಅದಕ್ಕವನು “ನಮ್ಮ ರಾಜರು ವಾಯುವ್ಯ ಪೂರ್ವ ಸಮುದ್ರಸ್ನಾನಕ್ಕೆ ಹೋಗಿದ್ದಾರೆ. ಈಗ ಬರುತ್ತಾರೆ. ನೀನು ಯಾರು? ಏಕೆ ಬಂದಿರುವೆ? ಎಂದು ಕೇಳಿದನು. “ನಾನು ಲಂಕಾಧಿಪತಿಯಾದ ರಾವಣ; ನಿಮ್ಮ ರಾಜ ವಾಲಿಯನ್ನು ಕಂಡು ಮಾತನಾಡಿಸಬೇಕೆಂದು ಹೇಳಿ ಕುತೂಹಲ ತಡೆಯದೆ ವಾಲಿಯೊಬ್ಬನೇ ಸಿಕ್ಕರೆ ಒಳ್ಳೆಯದೆಂದು ಯೋಚಿಸಿ ಪೂರ್ವಸಮುದ್ರಕ್ಕೆ ಬಂದು ವಿಮಾನದಿಂದಿಳಿದು ಕಣ್ಣು ಮುಚ್ಚಿ ಧ್ಯಾನ ಮಾಡುತ್ತಿರುವ ವಾಲಿಯನ್ನು ಕಂಡೆನು. ಹಿಂದಿನಿಂದ ಹಿಡಿದೆತ್ತಿ ಸಮುದ್ರದಲ್ಲಿ ಬೀಳಿಸಬೇಕೆಂದು ನನ್ನ ಇಪ್ಪತ್ತು ತೋಳುಗಳನ್ನು ವಾಲಿಯ ಕಂಕುಳಲ್ಲಿ ಸೇರಿಸಿದೆನು. ಬಲವಾಗಿ ನನ್ನ ಶಕ್ತಿಯನ್ನೆಲ್ಲಾ ಪ್ರಯೋಗಿಸಿದರೂ ವಾಲಿಯನ್ನು ಕಿಂಚಿತ್ತು ಅಲ್ಲಾಡಿಸಲಾಗಲಿಲ್ಲ. ತಕ್ಷಣ ವಾಲಿಯು ನನ್ನ ಇಪ್ಪತ್ತು ತೋಳುಗಳನ್ನು ಹಿಡಿದುಕೊಂಡೇ ಆಕಾಶಕ್ಕೆ ಹಾರಿ ದಕ್ಷಿಣ ದಿಕ್ಕಿನ ಸಮುದ್ರದಲ್ಲಿ ಅದ್ದಿ ಆಮೇಲೆ ಪಶ್ಚಿಮಸಮುದ್ರಕ್ಕೆ ಬಂದು ಅದರಲ್ಲಿ ಮುಳುಗಿಸಿ ಮತ್ತೆ ರಾಜಧಾನಿಗೆ ಬಂದು ಊರ ಹೊರಗಿನ ಉದ್ಯಾನವನದಲ್ಲಿ ಬೀಳಿಸಿ ತಿರುಗಿ ನೋಡದೆ ತನ್ನ ಅರಮನೆಗೆ ಹೋದನು. ಗರುಡನ ಕೈಗೆ ಸಿಕ್ಕಿದ ಹಾವಿನಂತೆ ತಲ್ಲಣಿಸಿದ್ದೆ. ಆಕಾಶದಿಂದ ನೆಲಕ್ಕೆ ಬಿದ್ದಾಗ ತನ್ನ ಆಯಸ್ಸು ಇಲ್ಲಿಗೆ ಮುಗಿಯಿತೆಂದು ಕಾಣುತ್ತದೆ. ಆತುರಗಾರನಿಗೆ ಬುದ್ಧಿ ಮಟ್ಟ ಎನ್ನುವಂತೆ ಬುದ್ಧಿ ಮಾತು ಕೇಳದೆ ಒಬ್ಬನೇ ಬಂದು ತಪ್ಪು ಮಾಡಿದೆ ಎಂದು ಹಲುಬಿದೆ. ನನ್ನ ಬದುಕಿನ ಅಂತಿಮಕ್ಷಣವನ್ನು ನೆನೆಯುತ್ತಾ ಪ್ರಜ್ಞಾಶೂನ್ಯನಾಗಿ ಕಲ್ಲಿನಂತೆ ಬಿದ್ದುಕೊಂಡೆ. ಚೇತರಿಸಿಕೊಂಡು ಎದ್ದು ಕುಳಿತಾಗ ತನ್ನ ಕಣ್ಣ ಮುಂದೆ ದೈತ್ಯಾಕಾರವಾಗಿ ಬೆಳೆದು ನಿಂತಿದ್ದ ವಾಲಿ, ಅವನ ಪರಿವಾರದವರನ್ನು ಕಂಡು ತಲೆ ತಿರುಗಿ ದಂತಾಯಿತು. ಇನ್ನು ನನ್ನ ಕಥೆ ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಆಶ್ಚರ್ಯವೆನ್ನುವಂತೆ ಪಕ್ಕಕ್ಕೆ ಬಂದು ನಿಂತ ವಾಲಿ ತಾನಾಗಿಯೇ ಮಾತನಾಡಿಸಿ ಪ್ರೀತಿಯಿಂದ ಮೈದಡವಿ ಸಂತೈಸುತ್ತಾ ಕೈ ಹಿಡಿದು ಅರಮನೆಗೆ ಕರೆತಂದು ಮಂಗಳ ಮಜ್ಜನ ಮಾಡಿಸಿ ಪಕ್ವಾನ್ನಗಳಿಂದ ಉಪಚರಿಸಿ ತನ್ನನ್ನು ತಮ್ಮನಿಗಿಂತಲೂ ಹೆಚ್ಚಾದ ಪ್ರೀತಿಯಿಂದ ನೋಡಿಕೊಂಡನು. ನಾನವನ ಸ್ನೇಹ ವಿಶ್ವಾಸಕ್ಕೆ ಸೋತುಹೋದೆ. ಹೆಮ್ಮೆಯಿಂದ “ವಾಲಿರಾಜನೇ ನಿನ್ನಂತಹ ಶಕ್ತಿವಂತರನ್ನು ವೇಗವಂತರನ್ನು ಬಲಶಾಲಿಗಳನ್ನು ನಾನು ಇಂದಿನವರೆಗೂ ನೋಡಿಲ್ಲ. ನಿನ್ನಂತಹ ಪರಾಕ್ರಮಶಾಲಿಯಾದ ಧೀಮಂತ ವ್ಯಕ್ತಿಗೆ ಸೋಲುವುದು. ಸಂತೋಷದ ಸಂಗತಿ, ನಿನ್ನ ಕರುಣೆ, ಸ್ನೇಹ, ವಿಶ್ವಾಸವನ್ನು ಮರೆಯಲಾರೆ” ಎಂದು ಕಳಕಳಿಯಿಂದ ವಿನಂತಿಸಿದೆ. ನನ್ನ ಮಾತಿನಿಂದ ವಾಲಿಯು ಸಂತುಷ್ಟನಾದನು.
“ಇಂದಿನಿಂದ ನಾವಿಬ್ಬರೂ ಪರಮಮಿತ್ರರು ಕಷ್ಟಸುಖಗಳನ್ನು ಹಂಚಿ ಕೊಳ್ಳೋಣ” ಎಂದು ಆಗ್ನಿಸಾಕ್ಷಿಯಾಗಿ ಪ್ರಮಾಣ ಮಾಡಿದೆವು. ವಾಲಿಯನ್ನು ಜಯಿಸಲಾಗದಿದ್ದರೂ ವಾಲಿಯ ಹೃದಯವನ್ನು ಗೆದ್ದೆ. ಸ್ನೇಹ ಸಂಪಾದನೆ ಮಾಡಿದೆ. “ಮಿತ್ರ ನಿನ್ನಂತಹ ಸ್ನೇಹಿತನನ್ನು ಪಡೆದು ನನ್ನ ಜೀವನ ಧನ್ಯವಾಯಿತು. ಅದೆಷ್ಟು ಸಲ ಅಂದುಕೊಂಡೆನೋ ತಿಂಗಳಾನುಗಟ್ಟಲೆ ವಾಲಿಯ ಅರಮನೆಯಲ್ಲಿಯೇ ಇದ್ದೆ. ಅವನನ್ನು ಬಿಟ್ಟು ಬರಲು ಬಹಳ ಕಷ್ಟವಾಯಿತು. ಅಷ್ಟರಲ್ಲಾಗಲೇ ಮೇಘನಾದನು ವಿಷಯ ತಿಳಿದು ಪ್ರಹಸ್ತನನ್ನು ಕಳುಹಿಸಿದನು. ಪ್ರಹಸ್ತನು ಬಂದು ಬೆಟ್ಟಿಯಾಗಿ “ಮಹಾರಾಜ ನೀವು ಬಂದು ತುಂಬಾ ದಿನಗಳಾದವು. ನಿಮ್ಮನ್ನು ಕಾಣದ ರಾಣಿವಾಸದವರು, ತಮ್ಮಂದಿರು, ಮಕ್ಕಳು, ಚಿಂತಾಕ್ರಾಂತರಾಗಿದ್ದಾರೆ. ತಾವಿನ್ನು ಲಂಕೆಗೆ ಬರಬೇಕು. ತಡಮಾಡಬಾರದು” ಎಂದು ಬೇಡಿಕೊಂಡನು. ನಾನು ವಾಲಿಯ ಅಪ್ಪಣೆಯನ್ನು ಕೇಳಿ, ನಮ್ಮ ಸ್ನೇಹ ಶಾಶ್ವತವಾಗಿರಬೇಕೆಂದು ಹಾರೈಸಿ ಅವನಿಂದ ಬೀಳ್ಕೊಂಡು ಪುಷ್ಪಕ ವಿಮಾನವನ್ನೇರಿ ಲಂಕೆಗೆ ಬಂದೆನು. ವಾಲಿಯನ್ನು ನೆನೆದು ಕಣ್ಣು ತೇವವಾಯಿತು. ಎಂತಹ ಸಹೃದಯಿ, ವಿಶಾಲಮನೋಭಾವವುಳ್ಳ ಮಿತ್ರ! ತಾನವನಿಗೆ ಕೇಡು ಬಗೆಯಲು ಬಂದಿದ್ದರೂ ತನ್ನನ್ನು ಶಿಕ್ಷಿಸದೆ ರಕ್ಷಿಸಿ ಸ್ನೇಹ ಸಂಕೋಲೆ ತೊಡಿಸಿ ಆದರಾಭಿಮಾನದಿಂದ ಸತ್ಕರಿಸಿ ಜೊತೆಯಲ್ಲಿಟ್ಟು ಕೊಂಡು ವಿಶ್ವಾಸದಿಂದ ನೋಡಿಕೊಂಡನಲ್ಲಾ ಅಂತಹ ಮಿತ್ರನನ್ನು ಮರೆಯಲು ಹೇಗೆ ಸಾಧ್ಯ! ಆದರೆ ಅಂತಹ ಬಲಶಾಲಿಯಾದ ಮಿತ್ರನ ಕೊನೆಗಳಿಗೆಯಲ್ಲಿ ನಾನಿರಲಿಲ್ಲವಲ್ಲ. ಅವನ ಸ್ನೇಹದ ಋಣವನ್ನು ತೀರಿಸಲಾಗಲಿಲ್ಲ. ಮತ್ತೊಮ್ಮೆ ಅವನನ್ನು ನೋಡಬೇಕು. ಇಲ್ಲ, ಅವನನ್ನು ಲಂಕೆಗೆ ಕರೆತಂದು ಸತ್ಕರಿಸ ಬೇಕೆಂದುಕೊಂಡಿದ್ದ ನನ್ನ ಕನಸೆಲ್ಲಾ ನುಚ್ಚುನೂರಾಯಿತು. ಸೀತೆಯನ್ನು ಅಪಹರಿಸಿದ ಎಷ್ಟೋ ದಿನಗಳ ಮೇಲೆ ಸ್ನೇಹಿತನ ಮರಣದ ಸುದ್ದಿ ಸಿಡಿಲಿನಂತೆ ಬಂದೆರಗಿತು. ಸೀತಾನ್ವೇಷಣೆಗಾಗಿ ಸುಗ್ರೀವನ ಸಖ್ಯ ಬೆಳೆಸಿ ವಾಲಿಯನ್ನು ಕೊಂದನಲ್ಲ ಶ್ರೀರಾಮ! ವೀರಾಧಿವೀರನಾದ ವಾಲಿಯನ್ನು ಮುಂದೆ ನಿಂತು ಹೋರಾಡಿ ಗೆಲ್ಲಲಾಗದೆ ಹಿಂದಿನಿಂದ ಬಾಣ ಹೊಡೆದು ಕೊಂದರಂತಲ್ಲ. ಆ ರಾಮಲಕ್ಷ್ಮಣರು ವೀರಕ್ಷತ್ರಿಯರಿಗೆ ಒಪ್ಪುವ ಕಾರ್ಯ ಮಾಡಿದರೆ ಅವರು! ಹೇಡಿಗಳಂತೆ ಮರದ ಮರೆಯಲ್ಲಿ ನಿಂತು ಬಾಣ ಹೂಡಿ ನನ್ನ ಮಿತ್ರನನ್ನು ಕೊಂದರಲ್ಲಾ ಏನು ಮಾಡಲಿ! ಹೇಗೆ ತೀರಿಸಿಕೊಳ್ಳಲಿ ನನ್ನ ಆಕ್ರೋಶವನ್ನು ಮಿತ್ರನ ಸಾವಿಗೆ ಕಾರಣರಾದ ರಾಮಲಕ್ಷ್ಮಣರನ್ನು ನಾನಂತೂ ಸುಮ್ಮನೆ ಬಿಡುವುದಿಲ್ಲ. ಸುಗ್ರೀವನ ಬದಲು ವಾಲಿಯ ಸ್ನೇಹ ಸಂಪಾದಿಸಿದ್ದರೆ ಮಿತ್ರನ ಮಾತಿಗೆ ಮನ್ನಣೆ ಕೊಟ್ಟು ಸೀತೆಯನ್ನು ಒಪ್ಪಿಸುತ್ತಿದೆ. ಈಗ ರಾಮಲಕ್ಷ್ಮಣರ ಮೇಲಿನ ಸಿಟ್ಟು ದ್ವೇಷವಾಗಿ ಬದಲಾಗಿದೆ. ಶೂರ್ಪನಖಿಯ ಅವಮಾನ, ವಾಲಿಯ ವಧೆ ಇವೆಲ್ಲಾ ನನ್ನ ಮನಸ್ಸಿನ ನೆಮ್ಮದಿಯನ್ನೇ ಹಾಳುಮಾಡಿದೆ. ರಾಮಲಕ್ಷ್ಮಣರು ಅದು ಹೇಗೆ ಸಮುದ್ರವನ್ನು ದಾಟಿ ಸೀತೆಯನ್ನು ರಕ್ಷಿಸುತ್ತಾರೆ. ನೋಡಿಯೇ ಬಿಡುತ್ತೇನೆ. ತಮ್ಮ ತಪ್ಪನ್ನು ಒಪ್ಪಿಕೊಂಡು ಶರಣಾಗತರಾಗಿ ಬಂದರೆ ಸೀತೆಯನ್ನು ಅವರಿಗೊಪ್ಪಿಸುತ್ತೇನೆ. ಇಲ್ಲವಾದಲ್ಲಿ ನನ್ನ ಉಸಿರು ಇರುವವರೆಗೂ ಅವರ ಮೇಲೆ ಸೇಡು ತೀರಿಸಿಕೊಳ್ಳದೆ ಬಿಡುವನಲ್ಲ ಈ ರಾವಣ! ಧೈರ್ಯ, ಸಾಹಸ ಛಲಕ್ಕೆ ಇನ್ನೊಂದು ಹೆಸರೇ ರಾವಣ. ಈ ದಶಕಂಠ ಅದೆಂತಹ ಛಲಗಾರನೆಂದು ಜಗತ್ತಿಗೆ ತೋರಿಸಿಕೊಡುತ್ತೇನೆ. ಮನಸ್ಸಿನ ಮಂಥನಕ್ಕೆ ಕೊನೆ ಇಲ್ಲ ರಾಮಲಕ್ಷ್ಮಣರನ್ನು ಬಲಿಕೊಡುವುದೇ ನನ್ನ ಮುಂದಿನ ಗುರಿ.
ಬಲಿ ಎಂದೊಡನೆ ವಿಭೀಷಣನ ಮಾತುಗಳು ನೆನಪಾದವು. ಅವನು ಹೇಳಿದ ಮೂವರಲ್ಲಿ ಇಬ್ಬರನ್ನು ಪರೀಕ್ಷಿಸಿದ್ದಾಯಿತು. ಪರೀಕ್ಷಿಸಲು ಹೋಗಿ ಸೋತರೂ ಸ್ನೇಹದ ಜಯಮಾಲೆ ಧರಿಸಿ ಬಂದೆ. ಬಲಿಚಕ್ರವರ್ತಿಯನ್ನು ಗೆಲ್ಲಲೇಬೇಕೆಂದು ಮನ ತುಡಿಯಿತು. ಮತ್ತೊಮ್ಮೆ ತನ್ನ ಮಂತ್ರಿ ಸೇನಾಧಿಪತಿ, ಸೈನ್ಯದೊಂದಿಗೆ ರಸಾತಲಕ್ಕೆ ಹೋದನು. ಅಲ್ಲಿಗೆ ಹೋಗಿ ಬಲಿಚಕ್ರವರ್ತಿಯ ಅರಮನೆಯನ್ನು ಹುಡುಕುವುದೇ ದುಸ್ತರವಾಯಿತು. ಅರಮನೆ ಮುಂದೆ ನಿಂತು ಒಳಗೆ ಹೋಗುವುದಕ್ಕೆ ಬಾಗಿಲೇ ಕಾಣಲಿಲ್ಲ. ಅರಮನೆಯನ್ನೆಲ್ಲ ಸುತ್ತಿ ಕಡೆಗೆ ಒಂದು ಮಹಾದ್ವಾರವನ್ನು ಕಂಡು ಅದನ್ನು ಹೊಕ್ಕು ನೋಡಲು ಆರುಬಾಗಿಲಗಳವರೆಗೆ ಯಾರು ಕಾವಲುಗಾರರೇ ಕಾಣಲಿಲ್ಲ. ಕಡೆಗೆ ಏಳನೇ ದ್ವಾರದ ಬಳಿಯಲಿ ಒಬ್ಬ ದಿವ್ಯ ಪುರುಷನು ಕಾವಲುಗಾರನಾಗಿ ಕುಳಿತಿದ್ದನು. ರೇಶಿಮೆಯ ಪೀತಾಂಬರವನ್ನುಟ್ಟು ಅಂತಹದೇ ವಸ್ತ್ರವನ್ನು ಹೊದ್ದಿದ್ದನು. ಮೂರು ನಾಮಗಳನ್ನು ಧರಿಸಿ ನಾಲ್ಕು ಕೈಗಳಲ್ಲಿಯೂ ಶಂಖ ಚಕ್ರ ಗದಾ ಪದಗಳನ್ನು ಧರಿಸಿದ್ದನು. ಅವನೇ ವಿಷ್ಣುವೆಂದು ನನಗೆ ಗೊತ್ತಾಗಲಿಲ್ಲ. ನಾನು “ಬಲಿಚಕ್ರವರ್ತಿ ಎಲ್ಲಿ” ಎಂದು ಕೇಳಿದೆ ಅವನು “ಒಳಗಿದ್ದಾರೆ ಹೋಗು” ಎಂದನು. ಒಳಗೆ ದಿವ್ಯಾಲಂಕೃತ ಆಸನದಲ್ಲಿ ಭವ್ಯನಾದ ತೇಜೋಪುಂಜನಾದ ವ್ಯಕ್ತಿಯೊಬ್ಬನು ಕುಳಿತಿದ್ದನು. ನನ್ನನ್ನು ಕಂಡೊಡನೆ ಆತನ ಕಣ್ಣುಗಳು ಅರಳಿದವು. ಅತಿಶಯವಾದ ಪ್ರೀತಿಯಿಂದ ಬಳಿ ಕರೆದು ತೊಡೆಯ ಮೇಲೆ ಕೂರಿಸಿಕೊಂಡು “ನೀನು ಯಾರು? ಇಲ್ಲಿಗೇಕೆ ಬಂದಿದ್ದೀಯಾ? ನಿನ್ನ ಹೆಸರೇನು? ಎಂದು ಕೇಳಲು “ನಾನು ಲಂಕಾಧಿಪತಿಯಾದ ರಾವಣ ನಿಮ್ಮ ಸಂಗಡ ಯುದ್ಧ ಮಾಡಲು ಬಂದಿರುವೆನೆಂದು” ಹೇಳಿದೆ. “ನಾನು ರಾಕ್ಷಸಕುಲದಲ್ಲಿ ಹುಟ್ಟಿದವನಾದರೂ ಧರ್ಮಬುದ್ಧಿಯಿಂದ ದೇವಮಾನವನೆನಿಸಿಕೊಂಡೆ ನೀನು ಒಳ್ಳೆಯವನು, ಪರಮೇಶ್ವರನ ಶ್ರೇಷ್ಠಭಕ್ತನು ಮಾತೃಸೇವಾದುರಂಧರನು, ಪ್ರಜಾಪಾಲಕನು, ನೀನು ಎಂದಿಗೂ ನೀತಿ ನ್ಯಾಯ ಬಿಟ್ಟು ನಡೆಯಬೇಡ. ಸಜ್ಜನರಿಗೆ ಕೆಡಕನ್ನುಂಟುಮಾಡ ಬೇಡ. ಧರ್ಮಮಾರ್ಗದಲ್ಲಿ ನಡೆದು ಕೀರ್ತಿವಂತ ನಾಗೆಂದು ತಲೆಯ ಮೇಲೆ ಕೈಯಿಟ್ಟು ಹರಸಿದನು. ಬಲಿಚಕ್ರವರ್ತಿಯನ್ನು ನೋಡುತ್ತಿದ್ದರೆ ಪುಂಗಿಯ ನಾದಕ್ಕೆ ಹಾವು ತಲೆದೂಗುವಂತೆ ತಲೆಯಾಡಿಸಿ ಒಪ್ಪಿಗೆ ಸೂಚಿಸಿದೆ. ಭಕ್ತಿಯಿಂದ ನಮಸ್ಕರಿಸಿ ಹೊರಗೆ ಬಂದೆ. ಹೊರಗೆ ಬಂದೊಡನೆ ಅಹಂ ಹೆಡೆ ಎತ್ತಿತು!! ಬಲಿಯನ್ನು ನಾನು ಗೆದ್ದೆನೆಂದು ವಿಷ್ಣುವು ನನ್ನನ್ನು ಕಂಡೊಡನೆ ಓಡಿ ಹೋದನೆಂದು ಜಂಬ ಕೊಚ್ಚಿಕೊಂಡೆ. ಮಂತ್ರಿ ಮಾಗದರು ಇದನ್ನು ನಿಜವೆಂದು ನಂಬಿ ಜಯಕಾರ ಹಾಕುತ್ತಾ ನನ್ನನ್ನು ಹಿಂಬಾಲಿಸಿದರು.
*****
ಮುಂದುವರೆಯುವುದು