ಮುಗಿಲ ನೀಲಿಯ ಬಣ್ಣ ಹಲವು ಹೂಗಳ ಬಣ್ಣ
ನಿಂತ ನೆಲದಾಸೊಬಗೊ ಹರಿವ ನೀರಿನ ಬೆಡಗೊ
ಒಂದೆರಡೆ ಸೌಭಾಗ್ಯ ನೋಡೆ ಸಾಲದು ಕಣ್ಣ
ಈ ವಿಶ್ವದೈಸಿರಿಯ ಮುಖಕೆಲ್ಲಿ ಇಹುದೆಡರೊ?
ಸಿಡಿಲಾಗಿ ಗುಡುಗುವದು ನೀರೆಯೋಲು ಮೆರೆಯುವದು
ಭಕ್ತನೋಲು ಸಂತಸದಿ ಕುಣಿದಾಡಿ ನಲಿಯುವದು
ನಿತ್ಯ ನೂತನವಾಗಿ ಚಿತ್ತದಲಿ ಮೆರೆಯುವದು
ಎಂದಿಗಿದರಾಳವದು ಯಾರಿಂಗೆ ತಿಳಿಯುವದು?
ವಿಶ್ವರೂಪವ ಕಂಡು ನಡುನಡುಗಿ ಬೀಳುತಿಹ
ಅರ್ಜುನನ ತೆರದಿನಾ ಓ ನಿಸರ್‍ಗವೆ ನಿನ್ನ
ರುದ್ರರೂಪವ ಕಂಡು ಕಂಪಿಸುವೆ ಹೂಳುತಿಹ
ಭೀಕರತೆಯನ್ನತ್ತ ನೂಕಿ ಮಾತೆಯೆ ಎನ್ನ
ಮನವನ್ನು ಸಂತೈಸು ರಾಮಣೀಯಕ ರೂಪ
ತೋರಿ ತೇಲಿಸು ತಾಯೆ ಕಳೆದೆನ್ನ ಈ ತಾಪ ||
*****