ಜೀವನದಲ್ಲೇನಿದೆ ಎಲ್ಲಾ ಇದ್ದೂ
ಒಂದು ಕ್ಷಣ ಮೈಮರೆತು ನಿಂತು
ಕಣ್ಣೆಟಕುವಷ್ಟು ದೂರದವರೆಗೆ
ದೃಷ್ಟಿ ಹಾಯಿಸಲು ಬಿಡುವಿಲ್ಲದ ಮೇಲೆ?
ಹಸಿರು ಹೊದ್ದ ಮರದ ನೆರಳಲಿ ನಿಂತು
ದನಕರು, ಕುರಿಮಂದೆ ಮೇಯುತ್ತಿರುವಷ್ಟು
ದೂರದವರೆಗೆ ಕಣ್ಣು ಹಿಗ್ಗಿಸಿ
ನೋಡಲು ಬಿಡುವಿಲ್ಲದ ಮೇಲೆ?
ದಟ್ಟಡವಿಯಲಿ ಹಾದು ಹೋಗುವಾಗ
ಹಣ್ಣಾಗಿ ಉದುರಿದ್ದ ಬೀಜಗಳ ಹೆಕ್ಕಿ ಹುಲ್ಲಿನ ಪೊದೆಗಳಲ್ಲಿ
ಅಡಗಿಸಿಡುವ ಅಳಿಲಿನ ತುಂಟಾಟವ ನೋಡಿ
ನಗಲು ಬಿಡುವಿಲ್ಲದ ಮೇಲೆ?
ನಕ್ಷತ್ರಗಳು ಫಳಫಳಿಸುವ ರಾತ್ರಿಯಾಕಾಶವನ್ನು ನೆನಪಿಸುವಂತೆ
ಜುಳು ಜುಳು ಹರಿವ ನೀರಲ್ಲಿ ರವಿಕಿರಣ ಪ್ರತಿಫಲಿಸಿ
ಮಟಮಟ ಮಧ್ಯಾಹ್ನದಲಿ ನಕ್ಷತ್ರಗಳ ಹಿಂಡನ್ನೇ ಸೃಷ್ಟಿಸಿರುವ
ಅಂದವ ನೋಡಿ ಆನಂದಿಸಲು ಬಿಡುವಿಲ್ಲದ ಮೇಲೆ?
ಬಿಡುವಿಲ್ಲ, ನಮಗೆ ಯಾವುದಕ್ಕೂ ಬಿಡುವಿಲ್ಲ
ಪ್ರಕೃತಿ ದೇವಿ ಸೌಂದರ್‍ಯ ಸ್ಪರ್ಧೆಯಲ್ಲಿ ಪಂಥ ಕಟ್ಟಿ
ನಲಿಯುವುದ ನೋಡಲು, ಅವಳ ಕಣ್ಣಲ್ಲಿ ಮಿಂಚಿದ ನಗು
ಹೂವಾಗಿ ಗಿಡಗಳಲ್ಲಿ ಬಿರಿಯುವುದ ನೋಡಲು ಬಿಡುವಿಲ್ಲ
ಎಲ್ಲಾ ಇದ್ದರೂ ಒಂದು ಕ್ಷಣ ಮೈಮೆರತು ನಿಂತು
ಕಣ್ಣೆಟಕುವಷ್ಟು ದೂರದವರೆಗೆ ದೃಷ್ಟಿಹಾಯಿಸಲು ನಮಗೆ ಬಿಡುವಿಲ್ಲ.
ಯಾವುದಕ್ಕೂ ಬಿಡುವಿಲ್ಲದ ಜೀವನಕ್ಕೇನರ್‍ಥ?
ಅದು ಏನೂ ಇಲ್ಲದ ಬರಡು ಬಂಜರುಭೂಮಿ!
*****
(ಸರ್ ವಿಲಿಯಂ ಹೆನ್ರಿ ಡೇವಿಸ್‌ರವರ ‘ಲೀಜರ್’ ಕವನದಿಂದ ಪ್ರೇರಿತ)