ಎರಡೆ ದಿನ ಹಿಂದೆ ಇನಿವಕ್ಕಿ ಚಿಲಿಪಿಲಿ ದನಿಯ
ಗಾನವೇದಿಕೆಯೆನಿಸಿ, ಝಗಝಗಿಸಿ, ಈಗ ಬರಿ
ಹಣ್ಣೆಲೆಯೆ ತುಂಬಿರುವ, ಇಲ್ಲ ಒಂದೆರಡಿರುವ,
ಅಥವ ಚಳಿಕೊರೆತಕ್ಕೆ ಬೆದರಿ ಎಲ್ಲಾ ಉದುರಿ
ಭಣಗುಡುವ ಒಣಕೊಂಬೆ ಕಾಂಡಗಳ ಹೇಮಂತ
ನನ್ನ ಮೈಯಲ್ಲಿ ನೆಲೆ ಹೂಡುವುದ ನೋಡುವೆ.
ಎಲ್ಲವನು ಮೆಲ್ಲಮೆಲ್ಲನೆ ನುಂಗಿ ನೊಣೆವಂಥ
ಮೃತ್ಯುವಿನ ಛಾಯೆ, ಕಪ್ಪನೆ ರಾತ್ರಿ, ಮೆಲ್ಲನೆ
ಮುಗಿದ ಹಗಲಿನ ಮಿಕ್ಕ ಬಡಬೆಳಕನೊಯ್ಯುವುದ
ನನ್ನಲ್ಲಿ ಕಾಣುವೆ, ತಾನು ಎಬ್ಬಿಸಿದುರಿಗೆ
ತಾನೆ ಆಹುತಿಬಿದ್ದು ಅಳಿದುಳಿದ ಯೌವನದ
ಬೂದಿ ಬೆಳಕನ್ನು ಈ ಮೈಯಲ್ಲಿ ನೋಡುವೆ,
ಇದನೆಲ್ಲ ನೋಡುತ್ತ ನಿನ್ನೊಲುಮೆ ಬೆಚ್ಚುವುದು
ಕಳೆಯಲಿರುವಂಥ ಪ್ರೀತಿಯ ಆಳ ಹೆಚ್ಚುವುದು
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 73
That time of year thou mayst in me behold