ರಾವಣಾಂತರಂಗ – ೩

ರಾವಣಾಂತರಂಗ – ೩

ವಾತ್ಸಲ್ಯದ ಗಣಿ

ಶೂರ್ಪನಖಿ ನಮ್ಮೆಲ್ಲರ ಮುದ್ದಿನ ತಂಗಿ, ಮುದ್ದು ಜಾಸ್ತಿಯಾದುದರ ಕಾರಣ ಅವಳು ಹಠಮಾರಿಯಾಗಿಯೇ ಬೆಳೆದಳು. ಕೇಳಿದ್ದು ಕೊಡಲಿಲ್ಲವೆಂದರೆ ಭೂಮಿ ಆಕಾಶ ಒಂದು ಮಾಡುತ್ತಿದ್ದಳು. ಅವಳ ಕಣ್ಣೀರಿಗೆ, ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ನಾನೇ ಕಾರಣ. ತನ್ನ ಮದುವೆಗೆ ಮುನ್ನ ಮದುವೆ ಮಾಡಿ ಸುಖವಾಗಿರಲೆಂದು ಹರಸಿ ಕಳಿಸಿದೆ. ಆದರೆ ವಿಧಿಯಾಟವೇ ಬೇರಿತ್ತು. ಹದಿನಾಲ್ಕು ಲೋಕಗಳನ್ನು ಜಯಿಸಿ ಅಜೇಯನೆನೆಸಿಕೊಳ್ಳುವ ಆತುರದಲ್ಲಿ ತಂಗಿಯ ಮಾಂಗಲ್ಯಕ್ಕೆ ಕುತ್ತು ಬರುವುದೆಂದು ತಾನು ತಿಳಿದಿರಲಿಲ್ಲ. ನನ್ನ ಯುದ್ಧದ ಹುಚ್ಚಿನಿಂದ ನನ್ನ ಕೈಯಾರೆ ನನ್ನ ತಂಗಿಯ ಗಂಡನನ್ನು ನಾನೇ ಕೊಂದು ಹಾಕಿದೆ. ಯುದ್ಧಾಭಿಲಾಷಿಯಾದ ನಾನು ವೈರಿಯನ್ನು ಶೋಧಿಸುತ್ತಾ ರಸಾತಲಕ್ಕೆ ಹೋಗಿ ಅಲ್ಲಿ ನಿವಾತ – ಕವಚರೊಡನೆ ಸುಮಾರು ವರ್ಷಗಳು ಯುದ್ಧ ಮಾಡಿದರೂ ನನ್ನಷ್ಟೇ ಪರಾಕ್ರಮಶಾಲಿಗಳಾದ ಅವರು ಸೋಲಲಿಲ್ಲ. ನನಗೆ ಮಣಿಯಲಿಲ್ಲ. ತನಗೆ ಪ್ರತಿರೋಧವಾಗಿ ನಿಂತವನು ತಂಗಿಯ ಗಂಡ, ಹೆಂಡತಿಯ ಅಣ್ಣನೆಂದು ಬೆಲೆಕೊಡದೆ, ಸಂಬಂಧಗಳಿಗೆ ತಿಲಾಂಜಲಿ ಕೊಟ್ಟು ನನ್ನ ಎದುರಿಸಿ ನಿಂತಾಗ ಅವನನ್ನು ಮುಗಿಸದೇ ಗತ್ಯಂತರವಿರಲಿಲ್ಲ. ವಿದ್ಯುಜಿಹ್ವಶತ್ರುಗಳ ಬಾಣಕ್ಕೆ ಬಲಿಯಾದನು. ಯುದ್ಧದಲ್ಲಿ ಜಯವಾದರೂ ಮನಸ್ಸಿಗೆ ಸಮಾಧಾನವಾಗಲಿಲ್ಲ. ಅಮ್ಮನಿಗೆ ಏನು ಹೇಳಲಿ? ಶೂರ್ಪನಖಿಗೆ ಹೇಗೆ ಮುಖ ತೋರಿಸಲಿ? ಕಳವಳದಿಂದ ಲಂಕೆಯ ದಾರಿ ಹಿಡಿದೆ. ಶತ್ರುಗಳನ್ನು ನಿರ್ಮೂಲನ ಮಾಡಿ ಭೂಮಿಯನ್ನು ಉಪದ್ರವದಿಂದ ಮುಕ್ತನಾಗಿಸಿದೆ. ಭೂಭಾರ ಕಡಿಮೆಯಾಗುವಂತೆ ಮಾಡಿದೆ. ಆದರೆ ತಂಗಿಯ ಕಣ್ಣೀರನ್ನು ಒರೆಸಲು ಶಕ್ಯವಾಗಲಿಲ್ಲ.

ಅದೊಂದು ದಿನ ವರುಣ ಲೋಕವನ್ನು ಗೆದ್ದು ಬಂದು ಮಂಡೋದರಿಯೊಡನೆ ವರುಣಲೋಕದ ಸ್ತ್ರೀಯರ ಸೌಂದರ್ಯ, ಅವರಲ್ಲಿದ್ದ ಅನರ್ಘ್ಯವಾದ ಒಡವೆ ವಸ್ತ್ರ ವಜ್ರ ವೈಡೂರ್ಯಗಳನ್ನು ವಿವರಿಸುತ್ತಾ ಇರುವಾಗ ಶೂರ್ಪನಖಿಯು ದಿಢೀರನೇ ಅಲ್ಲಿಗೆ ಬಂದಳು. ಬಿರುಗಾಳಿ ಬೀಸಿದಂತಾಗಿ ಎಲ್ಲವೂ ಸ್ತಬ್ಧವಾಯಿತು. ಸಂತೋಷ ನಗು ತಟ್ಟನೆ ನಿಂತು ಗಾಢವಾದ ಮೌನ! ತಂಗಿಯನ್ನು ಕಂಡು ಸಿಡಿಲೆರಗಿದಂತೆ ಬೆಚ್ಚಿನಿಂತೆ. ಎಂದೂ ಬರದ ಶೂರ್ಪನಖಿ ಬಂದವಳೇ ತನ್ನ ಕಾಲ ಮೇಲೆ ಬಿದ್ದು ರೋಧಿಸತೊಡಗಿದಳು. “ಅಣ್ಣಾ ನನ್ನನ್ನು ನೋಡು, ಸಂತೋಷಪಡು, ತಂಗಿಯನ್ನು ಇಂತಹ ಪರಿಸ್ಥಿತಿಯಲ್ಲಿ ನೋಡಬೇಕೆಂದು ಆಸೆಪಟ್ಟೆಯಲ್ಲವೇ ನೋಡು ನನ್ನ ಬೋಳಾದ ಹಣೆಯನ್ನು ನೋಡು ಬಳೆಗಳಿಲ್ಲದ ಕೈಗಳನ್ನು ನೋಡು ನನ್ನ ಸಂಕಟವನ್ನು ಕಣ್ಣಾರೆ ನೋಡಿ ಆನಂದಿಸು ಮಂಗಳ ಸೂತ್ರ, ಮುತ್ತೈದೆಭಾಗ್ಯವನ್ನು ಕಳೆದುಕೊಂಡು ವಿಧವೆಯಾಗಿ ನಿಂತಿರುವ ನನ್ನನ್ನು ನೋಡಿ ಸಂತೋಷಪಡು. ನೀನು ನಿನ್ನ ಹೆಂಡತಿ ಮಕ್ಕಳೊಂದಿಗೆ ಸಂತೋಷವಾಗಿರುವೆ. ನೀನೊಬ್ಬ ಸುಖವಾಗಿದ್ದರೆ ಸಾಕು ಬೇರೆಯವರ ಸುಖ ಸಂತೋಷ ಕಟ್ಟಿಕೊಂಡು ನಿನಗೇನಾಗಬೇಕು. ನನ್ನ ಗಂಡನನ್ನು ಕೊಂದಂತೆ ನನ್ನನ್ನು ಕೊಂದುಬಿಡು” ಕರುಳು ಕತ್ತರಿಸುವಂತೆ ಅಳುತ್ತಿದ್ದ ತಂಗಿಯನ್ನು ಕಂಡು ಮನಸ್ಸಿಗೆ ವೇದನೆಯಾಯಿತು. ಮಂಡೋದರಿ ಬಂದು ನಾದಿನಿಯನ್ನು ಅಪ್ಪಿಕೊಂಡು ಸಮಾಧಾನ ಮಾಡಿದಳು.

“ಶೂರ್ಪನಖಿ ನೀನೇನು ಬೇರೆಯವಳಲ್ಲ. ಮಗಳಿಗಿಂತಲೂ ಹೆಚ್ಚು. ನಿನಗೀಗತಿ ಬರುತ್ತದೆಂದು ಕನಸಿನಲ್ಲೂ ಎಣಿಸಿರಲಿಲ್ಲ. ಯಾವ ಅಣ್ಣನಾದರೂ ತಂಗಿಗೆ ಕೇಡು ಬಗೆಯುತ್ತಾನೇನು? ಸಮಾಧಾನ ಮಾಡಿಕೊ, ಚುಚ್ಚು ಮಾತುಗಳನ್ನಾಡಿ ಪದೇ ಪದೇ ನಿನ್ನ ಅಣ್ಣನ ಮನಸ್ಸನ್ನು ನೋಯಿಸಬೇಡ” ನಾನು ಹತ್ತಿರ ಹೋಗಿ ತಲೆ ನೇವರಿಸಿ “ತಂಗಿ ಅರಿಯದೆ ನಡೆದ ಈ ಅಪರಾಧವನ್ನು ಕ್ಷಮಿಸಿಬಿಡು, ಯುದ್ಧದ ಗಡಿಬಿಡಿಯಲ್ಲಿ ನಿನ್ನ ಗಂಡನೂ ಬಂದಿದ್ದರಿಂದ ತಿಳಿಯದೆ ಕೊಂದು ಹಾಕಿದೆ. ನಿನ್ನ ಅತ್ತಿಗೆ ಹೇಳಿದ ಹಾಗೆ ಯಾವ ಅಣ್ಣನೂ ತಂಗಿಗೆ ಕೇಡು ಬಗೆಯಲಾರ. ಇನ್ನು ನಿನಗೆ ಯಾವ ತೊಂದರೆಯೂ ಆಗದಂತೆ ನಿನ್ನ ಕಣ್ಣಿನ ರೆಪ್ಪೆಯಂತೆ ನೋಡಿಕೊಳ್ಳುತ್ತೇನೆ. ನಿನ್ನ ಯಾವ ಮಾತನ್ನು ತೆಗೆದುಹಾಕುವುದಿಲ್ಲ. ಎಂತಹ ಸಂದಿಗ್ಧ ಪರಿಸ್ಥಿತಿ ಬಂದರೂ ನಿನ್ನ ಮಾತನ್ನು ನಡೆಸಿಕೊಡುತ್ತೇನೆ. ನನ್ನ ಮಾತನ್ನು ನಂಬು ನಿನ್ನ ಸಂರಕ್ಷಣೆಯೇ ನನ್ನ ಗುರಿ. ನಿನಗೆ ಇಷ್ಟವಾದರೆ ಇಲ್ಲೇ ಇರು ಇಲ್ಲವಾದರೆ ದಂಡಕಾರಣ್ಯದಲ್ಲಿರು. ಅದರ ರಕ್ಷಣೆಗಾಗಿ ರಾಕ್ಷಸ ಸೈನಿಕರನ್ನು ನೇಮಿಸುತ್ತೇನೆ. ನಿನ್ನ ಕೂದಲು, ಕೊಂಕದಂತೆ ನೋಡಿಕೊಳ್ಳುತ್ತೇನೆ”

ಅಂದು ತಂಗಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಅವಳಿಗೆ ಅವಮಾನ ಮಾಡಿದ ರಾಮಲಕ್ಷ್ಮಣರ ಕೊಬ್ಬನ್ನು ಕರಗಿಸಲು ತಕ್ಕ ಪಾಠ ಕಲಿಸಬೇಕೆಂದು ಸೀತೆಯನ್ನು ಅಪಹರಣಮಾಡಿದೆ. ವೀರಾಧಿವೀರರಾದ ಅವರು ಹೆಣ್ಣುಮಗಳು ಎಂಬುದನ್ನು ಮರೆತು ಅವಳ ಮೂಗುಕೊಯ್ದು ವಿರೂಪ ಮಾಡಿ ಸ್ತ್ರೀಕುಲಕ್ಕೆ ಅವಮಾನಮಾಡಿದರಲ್ಲ, ಹೆಣ್ಣಿನ ಸೌಂದಯವಿರುವುದೇ ಮುಖದಲ್ಲಿ, ಲಕ್ಷಣವಾದ ಮೂಗಿನಲ್ಲಿ, ಮೂಗಿಲ್ಲದ ಮುಖ ಹೊತ್ತು ಹೇಗೆ ತಿರುಗುತ್ತಾಳೆ? ನನ್ನ ತಂಗಿ ಮಾಡಿದ ತಪ್ಪಾದರೂ ಏನು? ಅವರನ್ನು ಮೆಚ್ಚಿ ಮದುವೆಯಾಗಬೇಕೆಂದು ಕೇಳಿದ್ದು ದೊಡ್ಡ ಅಪರಾಧವೇ?! ಒಳ್ಳೆಯ ಮಾತಿನಲ್ಲಿ ತಿಳಿಹೇಳಿ ಕಳಿಸಬೇಕಾಗಿತ್ತು. ಗಂಡನನ್ನು ಕಳೆದುಕೊಂಡ ಹೆಣ್ಣು ರೂಪವಂತರಾದ ಸುಂದರ ತರುಣರನ್ನು ಕಂಡಾಗ ಮೋಹಿಸಿದ್ದು, ಬಯಸಿದ್ದು ಸಹಜವೇ. ಅದಕ್ಕಾಗಿ ಇಷ್ಟು ದೊಡ್ಡ ಶಿಕ್ಷೆಯೇ! ಅಕ್ಕ ತಂಗಿಯರೊಂದಿಗೆ ಹುಟ್ಟಿ ಬೆಳೆದಿದ್ದರೆ ವಾತ್ಸಲ್ಯದ ಅರಿವಾಗುತ್ತಿತ್ತು. ಹೆಣ್ಣಿನ ಸಂಕಟ, ಗೋಳು ಅವರಿಗೆ ಗೊತ್ತಾಗಬೇಕು. ಹೆಂಡತಿಯನ್ನು ಕಳೆದುಕೊಂಡು ಆ ರಾಮ ಕೊರಗಿ ಕಣ್ಣೀರಲ್ಲಿ ಕೈತೊಳೆಯಬೇಕು. ಆಗ ಗೊತ್ತಾಗುತ್ತದೆ. ಒಂದು ಹೆಣ್ಣನ್ನು ಅಳಿಸಿದರೆ, ಅಪಮಾನಿಸಿದರೆ, ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆಂದು, ಸೀತೆಯನ್ನು ಕದ್ದುತಂದೆ.

ಅಶೋಕವನದಲ್ಲಿ ಯಾರಿಗೂ ಗೊತ್ತಾಗದಂತೆ ಇಟ್ಟರೂ ವಿಷಯವೇನೂ ಗುಟ್ಟಾಗಿ ಉಳಿಯಲಿಲ್ಲ. ವಿಷಯ ಎಲ್ಲರಿಗೂ ಗೊತ್ತಾಯಿತು ಗೊತ್ತಾಗಲಿ ನನಗೇನು? ತನ್ನ ಹೆಂಡತಿಯನ್ನು ತನ್ನ ಅತ್ತಿಗೆಯನ್ನು ರಕ್ಷಿಸಲು ರಾಮಲಕ್ಷ್ಮಣರಿಬ್ಬರೂ ಬಂದೇ ಬರುತ್ತಾರೆ. ಒಂದು ಸಮುದ್ರವೇನು? ಏಳು ಸಮುದ್ರಗಳನ್ನಾದರೂ ದಾಟಿ ಬರುವ ಗುಂಡಿಗೆಯಿದೆ. ರಾಮಲಕ್ಷ್ಮಣರು ಅಸಾಮಾನ್ಯವೀರರಂತೆ! ಚಿಕ್ಕ ವಯಸ್ಸಿನಲ್ಲೇ ಅನೇಕ ರಾಕ್ಷಸರನ್ನು ಕೊಂದು ಕೀರ್ತಿವಂತರಾಗಿರುವರೆಂದು ಗೂಢಾಚಾರರ ವರದಿ; ಸಮಬಲ ಪರಾಕ್ರಮಿಗಳೊಂದಿಗೆ ಮುಖಾಮುಖಿಯಾಗಿ ಹೋರಾಡುವುದರಲ್ಲೊಂದು ಘನತೆಯಿದೆ. ಗೌರವವಿದೆ. ಸೀತೆಯನ್ನು ಒಪ್ಪಿಸಿ ಶರಣಾಗತನಾಗುವುದಕ್ಕಿಂತ ಯುದ್ಧದಲ್ಲಿ ಹೋರಾಡಿ ಮಡಿಯುವುದೇ ಮೇಲು. ಈ ದಶಮುಖನನ್ನು ಎದುರಿಸಿ ಹೋರಾಡಿ ಗೆಲ್ಲುವುದು ಸುಲಭದ ಮಾತಲ್ಲ. ಚಿಕ್ಕಂದಿನಿಂದಲೂ ನನಗೆ ಶಕ್ತಿ ಪ್ರದರ್ಶನದ ಹುಚ್ಚು. ಯಾರೊಡನೆಯಾದರೂ ಯುದ್ಧ ಮಾಡದಿದ್ದರೆ ಸಮಾಧಾನವೇ ಆಗುತ್ತಿರಲಿಲ್ಲ. ಇಂದ್ರಾದಿದೇವತೆಗಳು ಅಷ್ಟದಿಕ್ಪಾಲಕರನ್ನು ಬಿಡದೆ ಯಮನನ್ನು ಗೆದ್ದವನು ನಾನು? ಒಂದೇ ಎರಡೇ ಲೆಕ್ಕವಿಲ್ಲದಷ್ಟು ಸಮರಗಳನ್ನು ಎದುರಿಸಿದವನು; ನಾನು ಕೈಗೊಂಡ ದಿಗ್ವಿಜಯಗಳ ಸರಣಿಗಳು ನೆನಪಾದವು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾರೆ ಗೆಳತಿ
Next post ಎರಡೆ ದಿನ ಹಿಂದೆ ಇನಿವಕ್ಕಿ ಚಿಲಿಪಿಲಿ ದನಿಯ

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…