ಸೀತೆಯ ವೈಭವೀಕರಿಸಿದರು
ಅವಳ ಪತಿಭಕ್ತಿಗಾಗಿ
ಎಲ್ಲೂ ವೈಭವೀಕರಿಸಲಿಲ್ಲ
ಅವಳ ಧೀಃಶಕ್ತಿಗಾಗಿ
ಪರಿತ್ಯಕ್ತ ಹೆಣ್ಣೊಬ್ಬಳು
ಒಬ್ಬಂಟಿಗಳಾಗಿ ಮಕ್ಕಳ ಬೆಳೆಸಿದ
ಅವಳ ಆತ್ಮಶಕ್ತಿಗಾಗಿ!
ತರಲಿಲ್ಲವೇ ಗಾಂಧಾರಿ
ಕುರುರಾಜನಲಿ ಮಾನಸಿಕ ಸಮಸ್ಥಿತಿ?
ಉಕ್ಕಿಸಲಿಲ್ಲವೇ ದ್ರೌಪದಿ
ಪಾಂಡುಪುತ್ರರಲ್ಲಿ ಶಕ್ತಿಯ ವಾರಿಧಿ?
ತೋರಿಸಿಕೊಡಲಿಲ್ಲವೇ ಅವಳು
ಪಂಚಪತಿಯರಿಗೂ ನಿಷ್ಠಳಾಗಿರಬಹುದೆಂದು?
ಮರೆಯಲಿಲ್ಲವೇ ಊರ್ಮಿಳೆ
ವಿರಹದಲ್ಲೂ ತ್ಯಾಗದ ಮೇಲ್ಮೆಯನ್ನು?
ಅಂದಿಗೂ ಇಂದಿಗೂ ಒಂದೇ ದೃಷ್ಟಿ
ಯಾರೂ ಗುರುತಿಸಬಯಸುವುದಿಲ್ಲ
ಸ್ತ್ರೀಯರ ಅಂತಃಶಕ್ತಿಯನ್ನು-
ಪತ್ನಿಯಾಗಿ, ತಾಯಿಯಾಗಿ, ಉದ್ಯೋಗಸ್ಥೆಯಾಗಿ
ಆಕೆ ಮಾಡುವ ತ್ಯಾಗವನ್ನು.
ಎಷ್ಟು ಸ್ತ್ರೀಯರಿಲ್ಲ ನಮ್ಮ ನಿಮ್ಮ ನಡುವೆ
ಎಲ್ಲ ಕಡೆ ಸಮತೋಲನ ಕಾಯ್ದುಕೊಂಡು
ಗಂಧದಂತೆ ತೇಯುವ,
ಚಿನ್ನದಂತೆ ಕಾಯುವ ಸ್ತ್ರೀಶಕ್ತಿಗಳು
ಯಾರು ಗುರುತಿಸಬಯಸುತ್ತಾರೆ
ಅವರ ಶಕ್ತಿ ಸ್ವರೂಪವನ್ನು ?
ಕಾಲ ಬದಲಾದರೂ
ದೃಷ್ಟಿ ಬದಲಾಗಿಲ್ಲ!?
*****