ಚೈತ್ರ ವೈಶಾಖದ ಶುಕ್ಲ ಪೂರ್ಣಿಮೆ
ಎಲ್ಲೆಲ್ಲೂ ಬೆಳದಿಂಗಳು ಹರಡಿದ ಬಯಲು.
ಎಲ್ಲೇ ಕಂಡ ಬೆಳಕು ಎದೆಯೊಳಗೆ ಇಳಿದ
ಭಾವ. ಅವಳು ದುಃಖದ ಮಗುವಿಗೆ
ಹುಷಾರಾಗು ಎಂದು ಹಾಲು ಕುಡಿಸುತ್ತಿದ್ದಾಳೆ.
ಜಗದ ಜನರ ಬದುಕಿನ ಘಮ ಅರಳಿ
ಅಡುಗೆ ಮನೆಯ ತುಂಬ ಬಿಳಿಬಿಳಿ ಅನ್ನ.
ಅವನು ಮುಂಜಾನೆ ಸದ್ದಿಲ್ಲದೇ ನೇಗಿಲ ಹೂಳುತ್ತಿದ್ದಾನೆ.
ಬೆವರ ಹನಿಗಳು ಆಕಾಶದಲಿ ಇಂಗಿವೆ.
ಕಾಯಕ ಜಗವ ಅರಳಿಸಿದೆ. ಅದು ಆಸೆಯಲ್ಲ.
ನಿಯಮದ ಪಾಲನೆ ಮತ್ತೆ ಅರಳಿ, ಹೂವು ಹಣ್ಣು
ಪಶು ಪಕ್ಕಿಗಳ ಸಂತತಿ ಚಿಗುರಿ, ಬನದ ತುಂಬ
ಹಸಿರೆಲೆಗಳು.
ಶುಕ್ಲ ಪೂರ್ಣಿಮೆಯ ತಣ್ಣನೆಯ ಹಳದಿ
ಬೆಳಕಿಗೆ ಕವಿಬುದ್ಧ ಅರೆದು ಅರವಳಿಕೆಯ
ಮುಚ್ಚಳ ತೆಗೆದಾಗ, ಜಗದ ನಿದ್ದೆಯಲ್ಲೂ
ಚಲನೆ, ಬೆಳಕಿನ ಬೀಜಗಳ ಚಲನೆ, ಇತಿಹಾಸ
ಮನುಕುಲದ ಚಲನೆ, ಬೀಜ ಮೂಕಮರ್ಮರವಾಗಿ
ಹಸಿರು ಚಿಗುರುವೆ ಚಲನೆ, ಜಗದ ಅಣುತೃಣವೂ
ಬದಲಾಗದ ಭೂಮಿಯ ಆಕಾಶದ ಚಲನೆ
ಶಬ್ದಗಳ ನಿಶ್ಯಬ್ದಗಳ ಚಲನೆ, ಅದು ಮೋಹದ
ಮಾಯೆಯ ಆಚೆಯ ಚಲನೆ, ಅದು ಮೋಹದ
ಮಾಯೆಯ ಆಚೆಯ ಚಲನೆ, ಭಾವ ಬುದ್ದಿಗಳ
ಅರಮನೆ, ಅದು ಧಮ್ಮ. ಇದು ಹುಟ್ಟು ಗಟ್ಟಿ ಬಂಡೆಯ
ಮೆತ್ತಗಾಗಿಸಿದೆ ಬೆಳದಿಂಗಳು.
ಸತ್ಯದ ಬೆಳದಿಂಗಳು ಎಲ್ಲರ ಪಾತ್ರೆಗಳು
ತುಂಬಿವೆ ಅವರವರ ರುಚಿಗೆ, ಮತ್ತೆ
ಅವರಿವರ ಸ್ಥಿತಿಗತಿಗೆ ಕಂಡ ನೋಟದ ಒಳ ಹರವು
ಒಳಗೊಳಗೆ ಗಟ್ಟಿಯಾಗುವ ಕಾಯಕ, ಜಗದ ಕರುಣಿಯ
ತಿಳಿಗಾಳಿ ಗಂಧ ಸೂಸಿ ಅರಿತವರೆಲ್ಲಾ ಶರಣಬುದ್ದರು
ನಡೆನುಡಿಗಳ ಪಥದ ಜೀವ ದ್ರವ್ಯ ತಂಪು ಹನಿಹನಿಯಾಗಿ
ಎದೆಗಿಳಿದ ತಣ್ಣನೆಯ ರಾತ್ರಿ ಆತ್ಮಕಲ್ಯಾಣ ಲೋಕಕಲ್ಯಾಣ
ಕುದುರೆ ಏರಿ ಹೊರಟವರೆಲ್ಲರೂ, ಜೀವ ಪ್ರೀತಿಸಿ ದೇವ
ಪ್ರೀತಿಗೆ ಒಳಗಾದರು ಮತ್ತೆ ಪೂರ್ಣ ವಿಕಾಸದ ದಾರಿ
ನಿರ್ಮಾಣವಾಯಿತು ಎಲ್ಲಾ ಪರಂಪರೆಯ ಬೆಳದಿಂಗಳ
ಶೃತಿಯಲಿ.
*****