ಮುಚ್ಚಿದ ಗೂಡಿನ ಬಾಗಿಲು,
ಬಾಗಿಲಿಲ್ಲದ ಬೀದಿ ನಡುವೆ
ಲೋಕವ್ಯಾಪಾರಕ್ಕೆ ಸಾಕ್ಷಿ
ಒಂದು ಅಬ್ಬೇಪಾರಿ ಹೊಸಿಲು.
*
ಅತ್ತ ಬಾಯ್ದೆರೆದು
ಬಿದ್ದುಕೊಂಡಿರುವ
ಬಿನ್ನಾಣಗಿತ್ತಿ ಬೀದಿ ಆಹ್ವಾನಕ್ಕೆ
ಕ್ಷಣ ಕ್ಷಣವೂ
ಮರುಳಾಗಿ ಬೀಳುವ
ಅಸಂಖ್ಯ ಬಡಪಾಯಿ ಜೀವಗಳು
ಚೀತ್ಕಾರಗಳ ನುಂಗಿಯೇ
ಬಸಿರಾದ ಸಪಾಟು ಬೀದಿಯ
ಮೇಲೆ ಬಿಕ್ಕುಗಳೂ ಉಸಿರೆತ್ತದಂತೆ
ಹಗಲಿಡೀ ನಿಲ್ಲದ ಚಲನೆ
ನಿಶಿತ ಕತ್ತಲಿನಲಿ
ರಾತ್ರಿಗಳು ಗಾಢಮೌನ.
ಕ್ರಿಮಿಕೀಟ ಹುಳುಹುಪ್ಪಟೆ
ತೆವಳಿ ಆಕಳಿಸಿ
ಮೈಮುರಿಯುವ
ನಿಗೂಢ ಸದ್ದು.
ವೈಯ್ಯಾರದ ಬೀದಿ ಸೆಳೆತಕ್ಕೆ ಹೇವರಿಸಿ
ಮತ್ತಷ್ಟು ಮುದುರುವ ಹೊಸಿಲು.
*
ಇತ್ತಲಿನ ಬೆಚ್ಚನೆ ಗೂಡಿನ
ಬಾಗಿಲ ಮೇಲೆ
“ನಾಳೆ ಬಾ” ಮುದ್ರೆ
ಬಾಗಿಲು ತೆರೆಯುವುದು
ತೆರೆಯದಿರುವುದು ಒಳಗಿನವರಿಷ್ಟ
ತನ್ನ ಮುಟ್ಟಿದ ಮೆಟ್ಟಿದ
ಯಾವ ಹೆಜ್ಜೆಗಳನೂ
ತಟ್ಟಲಾರದ ಹೊಸಿಲ ಸಂಕಟ
ಮುಚ್ಚಿದ ಬಾಗಿಲಿಗೂ
ತೆರೆದು ಬಿದ್ದ ಬೀದಿಗೂ ನಡುವೆ
ಒಳಗಿಗೆ ಸಲ್ಲದೇ
ಹೊರಗಿಗೆ ಸೇರದೇ
ನಿಲುಕುಗಾಲಿನಲಿ ನಿಂತ ಹೊಸಿಲು
ಹುಡುಕುತ್ತದೆ ತನ್ನ ನಿಮ್ಮನೆ…..
*****