ಪಕ್ಕದ ಮನೆಯಲ್ಲಿ ಗಲಾಟೆಯೋ ಗಲಾಟೆ ಅದೇನು ಜಗಳವೋ ಮಾತುಕತೆಯೋ ಒಂದು ಗೊತ್ತಾಗುವಂತಿಲ್ಲ. ಶಾಮಣ್ಣನವರಿಗೆ ನಿದ್ರೆ ಭಂಗವಾಯಿತು. ಈ ಗಲಾಟೆಯನ್ನು ತಪ್ಪಿಸುವುದು ಹೇಗೆ ಎಂದು ಚಿಂತಿಸುತ್ತಾ ಒಂದು ಉಪಾಯ ಹುಡುಕಿದರು. ಎದ್ದವರೇ ಸೀದಾ ಒಂದು ದೊಡ್ಡ ಚೀಲವನ್ನು ಹಿಡಿದು ಪಕ್ಕದ ಮನೆ ಬಾಗಿಲು ಬಡಿದರು. ಒಳಗಿನಿಂದ ಒಬ್ಬ ಆಸಾಮಿ ಬಂದು “ಏನು ಬೇಕಿತ್ತು?” ಎಂದು ಕೇಳಿದ. “ನನಗೆ ಒಂದು ಕೇಜಿ ಫಿಶ್ ಬೇಕು. ಫ್ರೆಶ್ಶಾಗಿರೋದನ್ನು ಈ ಚೀಲದಲ್ಲಿ ತುಂಬಿಕೊಡು. ಹಣ ನಾನು ಕೊಡುತ್ತೇನೆ.” ಎಂದರು. ಆಸಾಮಿಗೆ ಕೆಟ್ಟ ಕೋಪಬಂದು, “ರೀ ಸ್ವಾಮಿ, ಇದೇನು ಫಿಶ್ ಮಾರ್ಕೆಟ್ ಕೆಟ್ಟು ಹೋಯಿತಾ, ನಿಮಗೆ ಫಿಶ್ ಕೊಡಲು?”
ಕೇಳಿದ. ಅಷ್ಟರಲ್ಲೇ ಒಳಗಿನಿಂದ ನಾಲ್ಕಾರು ಜನ ತಮ್ಮ ಗಲಾಟೆ ನಿಲ್ಲಿಸಿ ಬಾಗಿಲ ಬಳಿಗೆ ಬಂದರು. ಶಾಮಣ್ಣನವರು ಶಾಂತವಾಗಿ “ಹೌದಾ, ಇದು ಫಿಶ್ ಮಾರ್ಕೆಟ್ ಅಲ್ಲಾ, ಅಲ್ಲವೆ? ನನಗೆ ಹೊಳೆಯಲೇ ಇಲ್ಲ. ಅದೂ ಬೋರ್ಡು ಸಹ ತಾವು ಹಾಕಿಸಿಲ್ಲ. ಈ ಗಲಾಟೆಯನ್ನು ಕೇಳಿ ಇದು ಫಿಶ್ ಮಾರ್ಕೆಟ್ಟೇ ಹೌದು, ಬೋರ್ಡು ಬರೆಯುವುದಕ್ಕೆ ಕಳುಹಿಸಿರಬೇಕು ಎಂದುಕೊಂಡೆ. ಕ್ಷಮಿಸಿರಿ.” ಎಂದರು. ಅಂದಿನ ರಾತ್ರಿಯಿಂದಲೇ ಫಿಶ್ ಮಾರ್ಕೆಟ್ನಂತಹ ಗಲಾಟೆ ನಿಂತು ಎಲ್ಲರೂ ಗಪ್‌ಚಿಪ್ ಆಗಿ ಉಳಿದರು!
***