ಸೆರಗಿನಿಂದ ಕೈಒರಸಿಕೊಂಡು ದಾರಿಯಲ್ಲಿ ಬರುತ್ತಿದ್ದ ನೀಲಜ್ಜಿಯನ್ನು ಕಂಡು ಸಂಗಮ್ಮ ಕೇಳಿದಳು – “ಎಲ್ಲಿಗೆ ಹೋಗಿದ್ದೆ ನೀಲಜ್ಜಿ ?”
“ನಿಮ್ಮ ಮನೆಗೆ ಹೋಗಿದ್ದೆ. ಮುಕ್ಕು ಮಜ್ಜಿಗೆ ಸಿಕ್ಕಾವೆಂದು ?”
“ಏನಂದರು ?” ಸಂಗಮ್ಮನ ಪ್ರಶ್ನೆ.
“ಮಜ್ಜಿಗೆ ಆಗಿಲ್ಲವೆಂದರು” ನೀಲಜ್ಜಿಯ ಪಡಿನುಡಿ.
“ಯಾರು ಹೇಳಿದರು ಹೀಗೆ ?”
“ನಿನ್ನ ಸೊಸೆ ನಿಂಬೆಕ್ಕ.”
“ಆಕೆಗೇನು ಅಧಿಕಾರ ಹಾಗೆ ಹೇಳಲಿಕ್ಕೆ. ಬಾನನ್ನೊಡನೆ” ಎಂದಳು ಸಂಗಮ್ಮ.
ಸಂಗಮ್ಮ ಮುಂದೆ ಮುಂದೆ, ನೀಲಜ್ಜಿ ಹಿಂದೆ ಹಿಂದೆ. ಹತ್ತುಮಾರು ಹೋಗುವಷ್ಟರಲ್ಲಿ ಮನೆ ಬಂತು. ಸಂಗಮ್ಮ ಬಿರಬಿರನೆ ತಲೆವಾಗಿಲು ಹೊಕ್ಕು ಪಡಸಾಲೆಯನ್ನು ಏರಿದಳು. ನೀಲಜ್ಜಿಯು ಮೆಲ್ಲನೆ ನಡೆದು ಬಂದು ಮೆಟ್ಟುಗಟ್ಟೆಯ ಬಳಿ ನಿಂತುಕೊಂಡಳು.
“ತಾ ಇಲ್ಲಿ. ಮಜ್ಜಿಗೆ ಒಯ್ಯುವುದಕ್ಕೆ ಏನು ತಂದಿರುವಿ?” ಎನ್ನುತ್ತ ಸಂಗವ್ವನು ಆಕೆ ಕೊಟ್ಟ ಚಿಕ್ಕ ಗಡಿಗೆಯನ್ನು ತೆಗೆದುಕೊಂಡು ಅಡಿಗೆ ಮನೆ ಹೊಕ್ಕಳು. ಸಂಗಮ್ಮನು ಮರಳಿ ಬರುವ ದಾರಿಯನ್ನೇ ಮಿಕಿಮಿಕಿ ನೋಡುತ್ತ ನೀಲಜ್ಜಿ ನಿಂತುಕೊಳ್ಳುವಷ್ಟರಲ್ಲಿ ಸಂಗಮ್ಮ ಹೊರಕ್ಕೆ ಬಂದೇ ಬಿಟ್ಟಳು. “ನಿನ್ನ ಮಕ್ಕಳ ಹೊಟ್ಟೆ ತಣ್ಣಗಾಗಲಿ ಸಂಗೂ” ಎಂದು ನೀಲಜ್ಜಿ ಹರಕೆ ನುಡಿಯಾಡುತ್ತಿರುವಾಗಲೇ ಸಂಗಮ್ಮ –
“ಇಗಾ ಅಜ್ಜಿ. ಈ ಹೊತ್ತು ಮಜ್ಜಿಗೆ ಆಗಿಲ್ಲ” ಎನ್ನುತ್ತ ಆಕೆಯ ಗಡಿಗೆಯನ್ನು ಇದ್ದಕ್ಕಿದ್ದ ಹಾಗೆ ಒಪ್ಪಿಸಿದಳು. “ಅಯಽ ! ಅದೇ ಮಾತು ಖರೇ ಅಯ್ತಲ್ಲ” ಎನ್ನುತ್ತ ನೀಲಜ್ಜಿ ತನ್ನ ಮನೆಯ ಹಾದಿ ಹಿಡಿದಳು.
ಮಜ್ಜಿಗೆ ಆಗಿಲ್ಲವೆಂದು ಹೇಳುವುದಕ್ಕೆ ಸೊಸೆಗೇನು ಅಧಿಕಾರ ? ಆ ಮಾತನ್ನು ಅತ್ತೆಯಾದವಳೇ ಹೇಳಬೇಕು ಅಲ್ಲವೇ ?
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು