ಕೋಟೆ ಕೊತ್ತಲದಲ್ಲಿ
ಕತ್ತಿ ಗೊರಸಿನ ಸದ್ದು
ಒಳಗೆ ಅಂತಃಪುರದಲ್ಲಿ
ರಾಣಿ ಒಂಟಿ.
ಹೆಪ್ಪುಗಟ್ಟಿದ ನೆತ್ತರಲ್ಲಿ
ಸೇಡು ಸೆಣಸಿನ ಹೆಜ್ಜೆ
ಒಳಗೆ ಮಿಡಿಯುವ ನಾಡಿ
ವಿವೇಕ ಒಂಟಿ.
ಕೋಟೆ ಕಲ್ಲುಗಳಿಂದ ಕಾದ ನಿಟ್ಟುಸಿರು
ಕತೆ ಬರೆಯುತ್ತಿದೆ ಮಣ್ಣು
ಕಾಯುತ್ತ ಕೂತಳು ರಾಣಿ ತುಂಬು ಬಸಿರು
ಕತ್ತಲಿನಾ ಕಣ್ಣು.
ಕತ್ತಲಿನ ಬತ್ತಿಗೆ ಹತ್ತೀತೇ ಬೆಳಕು
ಒಂಟಿ ರಾಣಿಯ ಮನಸು
ಸುತ್ತ ಮುಳ್ಳಿನ ನಡುವೆ ಅರಳೀತೆ ಹೂವು
ಈ ನೆಲದ ಕನಸು.
*****