Akay Akakievich Bashmachkin ಒಬ್ಬ ಸಾಮಾನ್ಯ ಗುಮಾಸ್ತ, ಸೇಂಟ್ ಪೀಟರ್‍ಸಬರ್ಗನ ಸಹಕಛೇರಿಯೊಂದರಲ್ಲಿ ಪಡಿಯಚ್ಚುಗಾರ. ನೋಡಲು ಅಂತಹ ಸುಂದರನಲ್ಲ. ಮುಖದ ತುಂಬಾ ಸಿಡುಬಿನ ಕಲೆಗಳನ್ನು ಹೊಂದಿದ ಸಣ್ಣದೇಹದ ವ್ಯಕ್ತಿ. ಆತನದು ಸೀಮಿತ ಪ್ರಪಂಚ. ತನ್ನ ಕಛೇರಿಗೆ ನಡೆದೇ ಹೋಗಿ ಬರುವ ಆತ ಸಣ್ಣ ಬಾಡಿಗೆಮನೆಯಲ್ಲಿ ವಾಸವಿದ್ದಾನೆ. ತೀರಾ ಸರಳ ಜೀವನದಲ್ಲಿ ನಕಲು ಮಾಡುವ ತನ್ನ ಉದ್ಯೋಗವನ್ನು ಅತಿಯಾಗಿ ಪ್ರೀತಿಸುತ್ತ ನೆಮ್ಮದಿಯ ಉಸಿರು ದೂಡುತ್ತ ಬದುಕುತ್ತಿದ್ದಾನೆ. ಆತನ ಮೊದಲ ಹೆಸರು Soenik. ಆದರೆ ಆತನ ತಾಯಿಯಿಂದ ಆತ ಅಕಾಕಿ ಅಕಾಕಿವಿಚ್ ಆದ.
ಆತನ ಇನ್ನೊಂದು ಮಹತ್ವದ ಆಸ್ತಿ ಎಂದರೆ ಅದು ಆತನ ಮೇಲಂಗಿ ಅಥವಾ ವೋವರ ಕೋಟ್. ಆ ಹಳೆಯ ವೋವರ ಕೋಟ್ ಆತನ ದಿನನಿತ್ಯದ ಪೋಷಾಕು. ಹಸಿರು ಬಣ್ಣದ ಆ ಕೋಟು ಕೆಂಪಗಾಗಿದೆ. ಆದರೂ ಅದನ್ನೆ ತೊಟ್ಟು ಕಛೇರಿಗೆ ಬರುವ ಆತ ಇತರ ತನ್ನಂತಹ ಗುಮಾಸ್ತರಿಂದ ಮೇಲಾಧಿಕಾರಿಗಳಿಂದ ಕೆಲವೊಮ್ಮೆ ಅವಹೇಳನಕ್ಕೆ ಗುರಿಯಾಗುತ್ತಾನೆ. ಆತನನ್ನು ಅವರೆಲ್ಲ ತಮಾಷೆ ಮಾಡಿ ನಕ್ಕರೂ ಆತನೆಂದೂ ಅದನ್ನು ವಿಪರೀತವಾಗಿ ತೆಗೆದುಕೊಳ್ಳುವುದಿಲ್ಲ. ಆತನ ಮೇಲಾಧಿಕಾರಿಯೊಬ್ಬ ಅಕಾಕಿಗೆ ಮುಂಬಡ್ತಿ ನೀಡಿದರೂ ಆತ ಅದನ್ನು ಒಪ್ಪಿಕೊಳ್ಳಲಿಲ್ಲ. ಕಾರಣ ಆತನಿಗೆ ಕಾಪಿರೈಟಿಂಗ ಕೆಲಸ ನೀಡುವ ತೃಪ್ತಿಯನ್ನು ಬೇರೆ ಕೆಲಸಗಳು ನೀಡಲಾರವು. ಐಶಾರಾಮಿ ಬದುಕಿನ ಯಾವ ವಾಂಛೆಯೂ ಇಲ್ಲದ ಆತ ತೃಪ್ತಿಯಿಂದ ಇದ್ದ.
ಇದು ರಶಿಯನ್ ಸಾಹಿತಿ Nikolay Gogal ನ ‘ದಿ ವೋವರ್ ಕೋಟ್’ ಎಂಬ ಸಣ್ಣಕಥೆಯಲ್ಲಿ ಬರುವ ನಾಯಕ ಅಕಾಕಿಯ ಚಿತ್ರಣ. ೧೯ನೇ ಶತಮಾಣದ ರಶಿಯಾದ ವಾಸ್ತವಿಕ ಚಿತ್ರಣ ನೀಡುತ್ತದೆ ಕಥೆ.
ಅಕಾಕಿಯ ಹಳೆಯ ಕೋಟು ಈಗ ಸೇಂಟ್ ಪಿಟರ್‍ಸಬರ್ಗನ ಚಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿದೆ. ಅದಕ್ಕಾಗೆ ಆತ ದರ್ಜಿ ಪೆಟ್ರೋವಿಚ್‌ನನ್ನು ಭೇಟಿಯಾಗಿದ್ದಾನೆ ಆದರೆ ಪೆಟ್ರೋವಿಚ್ ಆ ಮೇಲಂಗಿ ಸರಿಪಡಿಸಲಾಗದೆಂದು ಖಡಾಖಂಡಿತವಾಗಿ ಹೇಳುತ್ತಲೇ ಅಕಾಕಿಯ ಬಾಯಿಂದ ತಡೆದುಕೊಳ್ಳಲಾಗದ ನೋವಿನ ಆಕ್ರಂದನ ಅರಿಯದೇ ಹೊರಟಿದೆ. ಆತನ ಮತ್ತವನ ಮೇಲಂಗಿ ಸಂಬಂಧ ಅಂತಹುದು. ಅದಾತನ ಪೂರ್ಣ ಜಗತ್ತು. ಆದರೆ ಆ ಜಗತ್ತಿಗೆ ಇಂದಿನ ಜಗತ್ತನೊಂದಿಗೆ ಸ್ಪರ್ಧಿಸುವ ತಾಕತ್ತಿಲ್ಲ. ಸೇಂಟ್ ಪಿಟರ್‍ಸಬರ್ಗನ ಚಳಿಯಂತೂ ಕೊರೆವ ಕತ್ತಿಗಿಂತ ಹರಿತ. ಹೀಗಾಗಿ ಆತ ವ್ಯವಸ್ಥೆಯೊಂದಿಗೆ ಹೊಂದಾಣಿಕೆಗೆ ಸಿದ್ಧನಾಗುತ್ತಾನೆ. ಹೊಸ ಮೇಲಂಗಿಯ ಖರೀದಿಗೆ ತನ್ನ ಗುಮಾಸ್ತ ಗಿರಿಯಲ್ಲಿ ಬರುವ ಸಂಬಳದ ಕೆಲವು ರೂಬಲ್‌ಗಳ ತೆಗೆದಿಡಬೇಕು. ಹೀಗಾಗಿ ತನ್ನ ದೈನಂದಿನ ಊಟಕ್ಕೆ ಮಿತವ್ಯಯ ಮಾಡಿ ಅಂತೂ ಹೊಸ ಕೋಟು ಹೆಗಲೇರಿದೆ. ಹೊಸ ಕೋಟಿನ ಆಗಮನದೊಂದಿಗೆ ಅಕಾಕಿಯ ಹೊಸ ಜಗತ್ತು ತೆರೆದುಕೊಂಡಿದೆ.
ಆದರೆ ಹೊಸ ಕೋಟು ಆತನ ಬದುಕನ್ನೆ ಬಲಿ ತೆಗೆದುಕೊಳ್ಳುವುದು ಮಾತ್ರ ವಿಪರ್ಯಾಸ. ಹೊಸ ಕೋಟು ಆತನ ಜೀವನದ ಹೊಸ ಮಜಲನ್ನು ತೋರಿಸಿದೆ. ಸುಂದರ ಕೋಟು ಧರಿಸಿ ರಸ್ತೆಗಿಳಿದ ಅಕಾಕಿಗೆ ದಾರಿಯಲ್ಲಿ ಸುಂದರಿಯ ಕಾಲುಗಳು ಆಕರ್ಷಿಸುತ್ತವೆ. ಆತನ ವ್ಯಕ್ತಿತ್ವಕ್ಕೆ ತದ್ವಿರುದ್ಧವಾದ ಆಕಾಂಕ್ಷೆ ಅದು. ಬದುಕು ದಿಕ್ಕು ಬದಲಿಸಿದೆ. ಈಗಾತ ಮೊಟ್ಟಮೊದಲ ಬಾರಿಗೆ ಪಾರ್ಟಿಯೊಂದಕ್ಕೆ ಹಾಜರಾಗಿದ್ದಾನೆ. ಹೊಸ ಕೋಟಿನಲ್ಲಿ ಆತ ಎಲ್ಲರ ಆಕರ್ಷಣೆಯ ಕೇಂದ್ರ ಸ್ವಲ್ಪ ಸಮಯವಾಗುತ್ತಲೇ ಕತ್ತಲ ಜಾಡು ಹೆಚ್ಚಾಗಿ ಆತ ಮನೆಯ ದಾರಿ ತುಳಿದಿದ್ದಾನೆ. ಆದರೆ ರಾತ್ರಿಯ ಹೊತ್ತು ರಶಿಯಾದ ಬೀದಿಗಳಲ್ಲಿಯ ಮೋಸಕ್ಕೆ ಬಲಿಯಾಗುತ್ತಾನೆ. ಆಗಂತುಕರು ಏಕಾಂಗಿಯಾಗಿದ್ದ ಆತನ ಮೇಲೆ ಧಾಳಿ ಮಾಡಿ ಆತನ ಮುಖಕ್ಕೆ ಗುದ್ದಿ ಮೇಲಂಗಿಯನ್ನು ಕಸಿದುಕೊಂಡು ಘಾಸಿಗೊಳಿಸಿ ಹೋಗುತ್ತಾರೆ.
ಈಗಾತ ಸಂಪೂರ್ಣ ಜರ್ಜರಿತ. ಆಘಾತಗೊಂಡ ಅಕಾಕಿ ಪೋಲಿಸರಿಂದ ಬೇಡಿದ ಸಹಾಯ ಸಹಕಾರ ಸಿಗದೇ
ಕಂಗಾಲಾಗಿದ್ದಾನೆ. ಸ್ನೇಹಿತರೂ ನೀಡಿದ ಸಲಹೆಯಂತೆ ಗಣ್ಯವ್ಯಕ್ತಿಯೊಬ್ಬನನ್ನು ತನಗೆ ಸಹಾಯ ಮಾಡುವಂತೆ ವಿನಂತಿಸಿಕೊಂಡರೂ ಆತನ ಬೆಂಬಲವೂ ದಕ್ಕದೇ ನಿರಾಶಾವಾದಿಯಾಗಿ ಅದೇ ದುಃಖದಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಇಹಲೋಕ ತ್ಯಜಿಸುತ್ತಾನೆ. ಇದಾಗಿ ಸ್ವಲ್ಪದಿನಗಳಲ್ಲಿ ಅಕಾಕಿಯ ಆತ್ಮ ಅಲ್ಲೆಲ್ಲ ಅಲೆಯುತ್ತಿರುವುದು ಹಲವರ ಗಮನಕ್ಕೆ ಬರುತ್ತದೆ.
ಅದೊಂದು ರಾತ್ರಿ ಆ ಗಣ್ಯ ವ್ಯಕ್ತಿ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಹೊರಟಿದ್ದಾನೆ. ಅಕಾಕಿಯ ಮೇಲೆ ಆಕ್ರಮಣ ನಡೆದ ಅದೇ ಬ್ರೀಜ್‌ನ ಬಳಿಯಲ್ಲಿ ಪ್ರತ್ಯಕ್ಷವಾಗುವ ಅಕಾಕಿಯ ಆತ್ಮ ಗಣ್ಯವ್ಯಕ್ತಿಯ ಮೇಲೆರೆಗಿ ಆತನ ಮುಖಕ್ಕೆ ಗುದ್ದಿ ಆತನ ಹೊಸ ಉಣ್ಣೆಯ ವೋವರಕೋಟ್‌ನ್ನು ಕಸಿದುಕೊಂಡು ಹೊರಟುಹೋಗುತ್ತದೆ. ತೃಪ್ತಗೊಂಡ ಆತ್ಮ ಮತ್ತೆಂದೂ ಕಾಣಿಸಿಕೊಳ್ಳುವುದಿಲ್ಲ. ಇದು ಕಥೆಯ ಪೂರ್ಣ ತಾತ್ಪರ್‍ಯ.
ಕಥೆಯ ಆರಂಭದಲ್ಲಿ ಮೂಡಿಬರುವ ಒಬ್ಬ ಸಾಮಾನ್ಯ ಗುಮಾಸ್ತ ಸರಳಜೀವಿ. ಮೊದಲ ಬಾರಿಗೆ ತನ್ನ ಮೇಲಂಗಿಯ ಬದಲಾಯಿಸಿದ್ದು ಹೇಗೆ ಶೋಷಣೆಯ ಜಗತ್ತಿಗೆ ಪರಿಚಯ ಮಾಡಿಸುತ್ತದೆ ಎಂಬುದನ್ನು ಗೊಗಲ್ ಮಾರ್ಮಿಕವಾಗಿ ಪರಿಚಯಿಸಿದ್ದಾನೆ. ಹೊಸಕೋಟು ಅಕಾಕಿಯ ಯೋಚನೆ ಯೋಜನೆಗಳ ಜಾಡನ್ನು ಬದಲಾಯಿಸುತ್ತದೆ. ಅದನ್ನಾತ ಕಳೆದುಕೊಂಡಾಗ ಅನುಭವಿಸುವ ವೇದನೆ ಆತನಲ್ಲಾದ ಬದಲಾವಣೆಗೆ ಸಾಕ್ಷಿಯಾಗುತ್ತದೆ. ಆತನನ್ನು ಅಧಃಪತನಕ್ಕೂ ನೂಕುತ್ತದೆ. ಸ್ಥಿತಪ್ರಜ್ಞತೆಯನ್ನು ಕಳೆದುಕೊಳ್ಳುತ್ತಾನೆ. ಮಾನಸಿಕ ಸಂತೃಪ್ತಿಯನ್ನು ಕಳೆದುಕೊಂಡ ಆತ ಅಕಾಲ ಮೃತ್ಯುವಿಗೆ ಶರಣಾಗುತ್ತಾನೆ.
ಪಡೆದುಕೊಳ್ಳುವುದು ಮತ್ತು ಕಳೆದುಕೊಳ್ಳುವಿಕೆ, ಲಾಭ ಮತ್ತು ನಷ್ಟ ಬದುಕಿನಲ್ಲಿ ಎಂತಹ ಅಪರಿಹಾರಾರ್‍ಥ ವಿಪರ್ಯಾಸಗಳನ್ನು ಸೃಷ್ಟಿಸುತ್ತದೆ ಎಂಬುದು ಕಥೆಯ ಸಾರಾಂಶ. ೧೯ನೇ ಶತಮಾನದ ರಶಿಯಾದ ಸಾಮಾಜಿಕ ಬ್ರಷ್ಟ, ಅನಿಷ್ಟ ಚಟುವಟಿಕೆಗಳು ಕತೆಯಲ್ಲಿ ಹಾಸುಹೊಕ್ಕಾಗಿವೆ. ಅಧಿಕಾರಿಶಾಹಿಯ ಭ್ರಷ್ಟತೆ ಹೆಣ್ಣು ಗಂಡಿನ ಅನೈತಿಕ ಸಂಬಂಧಗಳನ್ನು ಗಣ್ಯವ್ಯಕ್ತಿಯ ಚಿತ್ರ ಬಿಚ್ಚಿಟ್ಟರೆ, ಅಸಹಾಯಕತೆ, ಶೋಷಣೆಗೆ ಬಲಿಯಾಗಿ ನರಳುವ ಅಕಾಕಿ ದೈನ್ಯತೆಗೆ ಸಾಕ್ಷಿಯಾಗುತ್ತಾನೆ. ರಶಿಯನ್ ಮೌಲ್ಯಗಳು, ಹದಗೆಟ್ಟ ನ್ಯಾಯಾಂಗ ವ್ಯವಸ್ಥೆ ಬಡವನಿಗೆ ಸಿಗದ ನ್ಯಾಯ, ಪೋಲಿಸ ವ್ಯವಸ್ಥೆಯ ನಿಷ್ರ್ಕೀಯ ಸ್ಪಂದನೆ, ಶ್ರೀಮಂತಿಕೆಯ ದುರಹಂಕಾರ ಎಲ್ಲವೂ ಒಂದೇ ಸಣ್ಣ ಕಥೆಯಲ್ಲಿ ವಾಸ್ತವಿಕ ನೆಲೆಗಟ್ಟಿನ ಮೇಲೆ ಹೆಣೆದ ಗೊಗಲ್ ಕಥಾಹಂದರ ಕಟ್ಟಿದ ಬಗೆ ಕೂಡ ಅನನ್ಯ.
ರಶಿಯನ್ ಸಾಹಿತಿ ನಿಕೊಲೆ ಗೊಗಲ್ ಸಣ್ಣ ಭೂಮಾಲಿಕನ ಮಗನಾಗಿ ಪೊಲ್ಟಾವಾದಲ್ಲಿ ೧೮೦೯ರಲ್ಲಿ ಜನಿಸಿದ ಇತ. ಚಿಕ್ಕ ವಯಸ್ಸಿನಿಂದಲೇ ಬರವಣಿಗೆಯ ಗೀಳು ಬೆಳೆಸಿಕೊಂಡ. ದಿ ಡೆಡ್ ಸೋಲ್, ದಿ ವೋವರ್ ಕೋಟ್ ಮುಂತಾದ ಕೃತಿಗಳ ಮೂಲಕ ಪ್ರಸಿದ್ಧ. ಆಧುನಿಕ ಜೀವನ ಪದ್ಧತಿಯ ಅಸ್ವಭಾವಿಕ ಚಿತ್ರಣವನ್ನು ಬಿಂಬಿಸುವ ಗೊಗೊಲ್‌ನ ಬರವಣಿಗೆಗಳನ್ನು ಮುಖ್ಯವಾಗಿ ಮೂರು ಗುಂಪುಗಳನ್ನಾಗಿ ವರ್‍ಗೀಕರಿಸಬಹುದಂತೆ -ಭೌಗೋಲಿಕ ಪರಿಸರಕ್ಕೆ ಸಂಬಂಧಿಸಿದಂತೆ. ಆತನ ಪ್ರಸಿದ್ಧ ಕಥೆ Dead souls ರಷ್ಯಾದ ಪರಿಸರವನ್ನು ಒಳಗೊಂಡರೆ, Taras babla ಎನ್ನುವ ಸಣ್ಣಕಥೆ ಉಕ್ರೇನಿಯನ್ ಬ್ಯಾಕ್ ಗ್ರೌಂಡ ಹಿನ್ನೆಲೆ ಹೊಂದಿದೆ. The Overcoat ಸೇಂಟ್ ಪೀಟರ್‍ಸಬರ್ಗನ ಪರಿಸರದಲ್ಲಿ ಒಡಮೂಡಿದೆ. ಇತ ೧೮೫೨ರಲ್ಲಿ ಚಿಕ್ಕ ವಯಸ್ಸಿನಲ್ಲೆ ಮರಣ ಹೊಂದಿದ.
*****