ಕನ್ನಡದ ಪ್ರೇಮಿಗಳು ಅದೃಷ್ಟವಂತರು. ಅವರಿಗೆ ಕಣ್ತುಂಬಿಕೊಳ್ಳಲಿಕ್ಕೆ ಕನ್ನಂಬಾಡಿಯಿದೆ; ಕನಸು ಕಾಣಲಿಕ್ಕೆ ‘ಮೈಸೂರು ಮಲ್ಲಿಗೆ’ ಜೊತೆಯಿದೆ. ಧಗೆಯ ದಿನಗಳಲ್ಲಿ ಮಳೆಯ ಕಣ್ಣಾಮುಚ್ಚಾಲೆ ಸಂದರ್ಭದಲ್ಲಿ ಬೃಂದಾವನ ಭಣಭಣ ಎಂದರೂ, ಮಲ್ಲಿಗೆಯ ನರುಗಂಪು ನವನವೀನ. ೬೫ ರ ಸಂಭ್ರಮ ಎನ್ನುವುದು ಮಲ್ಲಿಗೆಯ ಘಮವನ್ನು ಮತ್ತಷ್ಟು ಹೆಚ್ಚಿಸಿದೆ.

ಸಿರಿಗೆರೆಯ ನೀರು,
ಮುತ್ತೂರು ತೇರು;
ಪ್ರಿಯತಮನ ಕರೆಗೆ
ಇವಳು ಸದಾ ಹೊರಗೆ,
ನನ್ನ ಹಸಿದ ಹಲ್ಲಿಗೆ
ನಿಮ್ಮ ಮೈಸೂರು ಮಲ್ಲಿಗೆ.

ಕೆ.ಎಸ್. ನರಸಿಂಹಸ್ವಾಮಿ (ಜನವರಿ ೨೬, ೧೯೧೫- ಡಿಸೆಂಬರ್ ೨೭, ೨೦೦೩) ಅವರ ಬಗ್ಗೆ ಲಂಕೇಶರು ಬರೆದ ಪುಟ್ಟ ಕವಿತೆಯಿದು. ಆರು ಪುಟ್ಟ ಸಾಲುಗಳಲ್ಲಿ ಕೆ‌ಎಸ್‌ಎನ್ ಅವರ ಜನಪ್ರಿಯ ಕವನ ಸಂಕಲನ ‘ಮೈಸೂರು ಮಲ್ಲಿಗೆ’ಯ ನವಿರುತನ, ಅನನ್ಯತೆ, ಸೊಗಡು ಹಾಗೂ ಮಿತಿಗಳು ಸಮರ್ಥವಾಗಿ ಮೂಡಿವೆ. ಲಂಕೇಶ್ ವ್ಯಕ್ತಿತ್ವದ ಭಾಗವಾದ ಕೆಣಕುವಿಕೆಯೂ ಕವಿತೆಯಲ್ಲಿದೆ. ‘ಮೈಸೂರು ಮಲ್ಲಿಗೆ’ ಕುರಿತು ಪ್ರಕಟವಾದ ಚಿಕ್ಕ ಜೊಕ್ಕ ವಿಮರ್‍ಶೆಯಿದು.

ಲಂಕೇಶರನ್ನು ಕಾಡಿದ ಹಾಗೂ ಕೆಣಕಿದ ‘ಮೈಸೂರು ಮಲ್ಲಿಗೆ’ ಕನ್ನಡದ ಸಹೃದಯರನ್ನು ಕಳೆದ ಆರೂವರೆ ದಶಕಗಳಿಂದ ಅನೇಕ ಮಾಧ್ಯಮಗಳ ಮೂಲಕ ಕಾಡುತ್ತಲೇ ಇದೆ. ೧೯೪೨ರಲ್ಲಿ ಸಂಕಲನ ಪ್ರಕಟಗೊಂಡಾಗ ಆವರೆಗೆ ಪ್ರಣಯದ ಪರಾಕಾಷ್ಠಯೆನ್ನಷ್ಟೇ ಕಂಡಿದ್ದ ಕನ್ನಡ ಸಾಹಿತ್ಯ ನವಿರು ಪ್ರೇಮದ ಸ್ವರ್ಶದಿಂದ ಪುಲಕಗೊಂಡಿದ್ದು ಈಗ ಇತಿಹಾಸ. ಆ ಪುಲಕ ನವನವೀನ ಎನ್ನುವುದು ಕೆ‌ಎಸ್‌ಎನ್ ಅವರ ಸಂಕಲನದ ಅಗ್ಗಳಿಕೆ. ಈ ಮಾತಿಗೆ ಕೃತಿ ೨೭ ಮುದ್ರಣಗಳನ್ನು ಕಂಡಿರುವುದು, ಈಗಲೂ ಬೇಡಿಕೆ ಕಳೆದುಕೊಳ್ಳದಿರುವುದೇ ಸಾಕ್ಷಿ. ಈಗಲೂ ನವ ವಧುವರರಿಗೆ ಉಡುಗೊರೆ ಕೊಡಲು ‘ಮೈಸೂರು ಮಲ್ಲಿಗೆ’ಗಿಂತ ಸೊಗಸಾದ ಪುಸ್ತಕ ಇನ್ನೊಂದಿಲ್ಲ, ಮಧ್ಯಮ ವರ್ಗದ ಪ್ರೇಮಿಗಳಂತೂ ಮಲ್ಲಿಗೆಯಲ್ಲಿ ತಮ್ಮನ್ನು ತಾವೇ ಕಂಡುಕೊಂಡಿದ್ದಾರೆ. ಈಮಟ್ಟಿಗೆ ಓದುಗ ತನ್ನನ್ನು ತಾನು ಗುರ್‍ತಿಸಿಕೊಂಡ ಕೃತಿ ಕನ್ನಡದಲ್ಲಿ ಮತ್ತೊಂದಿಲ್ಲ.

ಪುಸ್ತಕದ ಮಾತು ಬಿಡಿ. ಸಂಗೀತ, ನಾಟಕ, ಸಿನಿಮಾದ ಮೂಲಕವೂ ‘ಮೈಸೂರು ಮಲ್ಲಿಗೆ’ ಕನ್ನಡಿಗರ ಮನೆಮನಗಳ ಕದತಟ್ಟಿದೆ. ೧೯೮೨ರಲ್ಲಿ ಬಿಡುಗಡೆಯಾದ ‘ಮೈಸೂರು ಮಲ್ಲಿಗೆ’ ಧ್ವನಿಸುರುಳಿಯ ಮೂಲಕ ಅನಕ್ಷರಸ್ಥರ ನಾಲಗೆಯನ್ನೂ ಮಲ್ಲಿಗೆ ಗೀತೆಗಳು ತಲುಪಿವೆ. ‘ರಾಯರು ಬಂದರು ಮಾವನ ಮನೆಗೆ’, ‘ಒಂದಿರುಳು ಕನಸಿನಲಿ’, ‘ಆಕ್ಕಿ ಆರಿಸುವಾಗ’, ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ’, ‘ನಿನ್ನೊಲುಮೆಯಿಂದಲೇ’ ಮುಂತಾದ ಮಲ್ಲಿಗೆ ಗೀತೆಗಳು ಜನಪದ ಗೀತೆಗಳಂತೆ ಬಾಯಿಂದ ಬಾಯಿಗೆ ತಲುಪಿರುವುದುಂಟು, ೧೯೯೧ರಲ್ಲಿ ಗೀತೆಗಳನ್ನಾಧರಿಸಿದ ‘ಮೈಸೂರು ಮಲ್ಲಿಗೆ’ ಸಿನಿಮಾ ಬಿಡುಗಡೆಯಾಗಿತ್ತು. ಕವಿತೆಗಳಿಗಾಗಿ ಸಿನಿಮಾ ತಯಾರಾಗಿದ್ದು ಜಾಗತಿಕ ಸಿನಿಮಾ ಇತಿಹಾಸದಲ್ಲಿ ಆದೇ ದೊದಲು.

ಮಲ್ಲಿಗೆಯ ಜನಪ್ರಿಯತೆಗೆ ಕಾರಣವಾದರೂ ಏನು? ಉತ್ತರ ಸರಳವಾದುದು. ಕವಿ ಮಧ್ಯಮ ವರ್‍ಗದದರ ಕನಸುಗಳಿಗೆ ಶಬ್ಬದ ರೂಪ ಕೊಟ್ಟಿದ್ದರು. ಕೌಟುಂಬಿಕ ಹಾಗೂ ಗ್ರಾಮೀಣ ಚೌಕಟ್ಟಿನಲ್ಲಿ ತಿಳಿಜಲದಂಥ ಪ್ರೀತಿಯನ್ನು ಚಿತ್ರಿಸಿದ್ದರು. ವಿವಾಹಾನಂತರದ ಪ್ರೇಮವನ್ನು ಕೆ‌ಎಸ್‌ಎನ್ ಅವರಷ್ಟು ಕೋಮಲವಾಗಿ, ಪರಿಪೂರ್ಣತೆ ಎನ್ನುವಂತೆ ಚಿತ್ರಿಸಿದ ಕವಿ ಇನ್ನೊಬ್ಬರಿಲ್ಲ. ಮುದ್ದಣ ಮನೋರಮೆಯರ ಮೂಲಕ ಲಕ್ಷ್ಮಿನಾರಾಣಪ್ಪ ಗದ್ಯದಲ್ಲಿ ಸಾಧಿಸಿದ್ದನ್ನು ಕೆ‌ಎಸ್‌ಎನ್ ಪದ್ಯದಲ್ಲಿ ಬಹು ವಿಸ್ತಾರವಾಗಿ ಸಾಧಿಸಿದರು.

ನರಸಿಂಹಸ್ವಾಮಿ ಪಾಲಿಗೆ ಹಿರಿಯಣ್ಣನಂತಿದ್ದ ಮಾಸ್ತಿ ಅವರಿಗಂತೂ ಮಲ್ಲಿಗೆ ಕವಿತೆಗಳ ಕಂಡರೆ ವಿಪರೀತ ಅಕ್ಕರೆ. ‘ನರಸಿಂಹಸ್ವಾಮಿ ನಮ್ಮ ಹೊಸ ಸಾಹಿತ್ಯದ ಒಬ್ಬ ಶ್ರೇಷ್ಠ ವರ ಕವಿ. ಅವರ ‘ಮೈಸೂರು ಮಲ್ಲಿಗೆ’ ಯಾವ ಸಾಹಿತ್ಯಕ್ಕಾದರೂ ಗೌರವ ತರುವ ಸುಂದರ ಕೃತಿ’ ಎನ್ನುವುದು ಅವರ ಪ್ರೀತಿಯ ಮೆಚ್ಚುಗೆ.

‘ತಾರೆಗಳ ಮೀಟುವೆವು,
ಚಂದಿರನ ದಾಟುವೆವು
ಒಲುಮೆಯೊಳಗೊಂದು ನಾವು
ನಮಗಿಲ್ಲನೋವು, ಸಾವು’

ಎಂದು ಹಾಡುವ ಕವಿಯೇ

‘ಒಂದು ಗಂಡಿಗೊಂದು ಹೆಣ್ಣು
ಹೇಗೋ ಸೇರಿ ಹೊಂದಿಕೊಂಡು
ಕಾಣದೊಂದು ಕನಸ ಕಂಡು
ದುಃಖ ಹಗುರವೆನುತಿರೆ
ಪ್ರೇಮವೆನಲು ಹಾಸ್ಯವೇ?’

ಎಂದು ಬರೆಯುತ್ತಾರೆ. ಈ ಸಾಲುಗಳಲ್ಲಿ ಪ್ರೇಮ ನಶೆಯೂ ಹೌದು, ಔಷಧಿಯೂ ಹೌದು.

ಇಷ್ಟೆಲ್ಲ ಮೆಚ್ಚಿಗೆಯ ನಡುವೆಯೂ ‘ಮೈಸೂರು ಮಲ್ಲಿಗೆ’ ಟೀಕೆಗಳನ್ನೂ ಎದುರಿಸಿದೆ. ಮಲ್ಲಿಗೆಯ ಕವಿತೆಗಳಲ್ಲಿನದು ಇಹದ ಸಂಘರ್ಷಗಳೇ ಇಲ್ಲದ ಗಂಧರ್ವ ಜೀವನ. ಅಸಂಪೂರ್ಣ ತಿಳಿವಳಿಕೆಯಿಂದ ಇಂಥ ಕವಿತೆಗಳು ಹುಟ್ಟುತ್ತವೆ ಎನ್ನುವ ಮಾತುಗಳಿವೆ. ತಮ್ಮ ಕೊನೆಯ ದಿನಗಳಲ್ಲಿ ಕೆ‌ಎಸ್‌ಎನ್ ಬರೆದ ಕವಿತೆಯೊಂದರಲ್ಲಿನ ‘ನೊಂದ ನೋವನ್ನಷ್ಟೇ ಹಾಡಬೇಕೇನು? ಬೇಡವೇ ಯಾರಿಗೂ ಸಿರಿಮಲ್ಲಿಗೆ?’ ಎನ್ನುವ ಸಾಲುಗಳು ಕವಿಯ ಕಾವ್ಯಪ್ರಣಾಳಿಕೆ ಆಗಿರುವಂತೆಯೇ ಟೀಕೆಗಳಿಗೆ ಉತ್ತರವೂ ಹೌದು.

‘ಮೈಸೂರು ಮಲ್ಲಿಗೆ ಸಂಕಲನ ಪ್ರಕಟವಾಗಿ ೬೫ ವರ್ಷಗಳಾದವು. ಮಲ್ಲಿಗೆಗೆ ವಯಸ್ಸಾಯಿತು ಎ೦ದು ಕೊರಗಬೇಕಿಲ್ಲ ಪ್ರೇಮ-ರಸಿಕತೆಗೆ ವಯಸ್ಸಿನ ಹಂಗಿಲ್ಲ ಕನಸು ಕಾಣುವವರು ಇರುವವರೆಗೂ ಮಲ್ಲಿಗೆ ಬಾಡುವುದಿಲ್ಲ.
*****