ನನ್ನ ಈ ನಾಡಿನಲ್ಲಿ
ಭವ್ಯ ನಾಮ ಬೀಡಿನಲ್ಲಿ
ಬೇಗೆಯೇ ಬೆಟ್ಟವಾಗಿ
ಉತ್ತರಕ್ಕೆ ಕಾವಲು.
ಬೆವರೆಲ್ಲ ನದಿಗಳಾಗಿ
ಮೂರು ದಿಕ್ಕು ಕಡಲು.
ಅತ್ತ ಬೆಟ್ಟ ಇತ್ತ ನೀರು
ನಡುವೆ ನಗಲು ಎದ್ದವು-
ಮೂಳೆಗಳೇ ಮರಗಳಾಗಿ
ಆಸೆ ಹಸಿರು ಎಲೆಗಳು.
ಕನಸು ಬಿರಿವ ಹೂವು-
ಕಾಯಿ ನೆಲದ ಕಣ್ಗಳು.
ನನ್ನ ಈ ನಾಡಿನಲ್ಲಿ
ಮೇಲೆ ಮಹಲು ಮೋಡದಲ್ಲಿ
ಸೂರ್‍ಯ ಸಿಟ್ಟು ಸಹನೆ ಮೀರಿ
ತೆರೆಯ ಹರಿದು ಬಂದಿತು,
ಬೆಳಕ ಸೆರೆಯ ಬಿತ್ತಿ ಇಲ್ಲಿ
ಕತ್ತಿ ಹಿಡಿದು ನಿಂತಿತು.
ಸೆರೆಯ ಸಂಚು ಸರಳಿನಲ್ಲಿ
ಖಡ್ಗದಾಳಿ ಉರುಳಿನಲ್ಲಿ
ನಗಲು ಎದ್ದ ನೆಲದ ಮರ
ನರಳಿ ಬಿದ್ದವು
ತತ್ತರಿಸಿದ ಹೂವು ಉದುರಿ
ನೆತ್ತರಲ್ಲಿ ನೆಂದವು.
*****