ಕನ್ನಡದ ಶ್ರೀಕಂಠ ಕಾಳಿಂಗರಾಯ
ಕನ್ನಡ ತಾಯ ದಯವಾಗಿ ನೀವು
ಕನ್ನಡದ ನೆಲದ ವರವಾಗಿ ನೀವು
ಆ ಅಂಥ ಉದಯದಲಿ
ನೀವಿದ್ದಿರಿ
ಎಬ್ಬಿಸಿದಿರಿ ಉದ್ದೀಪಿಸಿದಿರಿ
ಸತ್ತಂತೆ ಮಲಗಿದವರ ಎಚ್ಚರಿಸಿದಿರಿ
ಸುಮಧುರ ಗಾಯನದಿಂದ
ಹಾಡ ತುಂಬಿದಿರಿ ನಾಡ ತುಂಬಿದಿರಿ
ಪ್ರತಿಯೊಂದು ಪದಕೂ ಅರ್‍ಥ ತುಂಬಿದಿರಿ
ಕನ್ನಡ ಪುಷ್ಪೋದ್ಯಾನದ ತುಂಬಿಯೇ ಆದಿರಿ
ಕೇಳಿದವರ ಐಸಿರಿ
ರೋಮಾಂಚನಗೊಳಿಸಿದಿರಿ
ಜನಪದವನೆ ಕುಣಿಸಿದಿರಿ
ಕನ್ನಡ ನಾಡು ಋಣಿ ಕನ್ನಡ ಭಾಷೆ ಋಣಿ
ಓ ಮಹಾ ಗಾಯಕ
ಚೆಲುವ ಕನ್ನಡ ಕೋಗಿಲೆ
ಓ ಧ್ವನಿಗಳ ಖಣಿ
ಕನ್ನಡ ಕವಿಸಂಕುಲವೆ ನಿಮಗೆ ಋಣಿ
ಕಂಚಿನ ಕಂಠವೇ ಚಿನ್ನದ ಕಂಠವೇ
ಅದೇನು ಕಂಪನ ಅದೇನು ಗುಂಫನ
ಏನು ಇಳಿತ ಏನು ಭರತ
ಅದೇನು ಕರ್‍ಣರಸಾಯನ
ದೇವಳದ ಘಂಟಾನಾದವೋ
ಹಸುವಿನ ಮಣಿನಾದವೋ
ಶಂಖವೊ ಕೊಳಲೊ
ಝಣಝಣನೆ ಸುರಿದ ನಾಣ್ಯವೋ
ಭಾವ ಸುರಿಯಿತು ಎಲ್ಲಿಂದ
ಅರ್‍ಥ ಸೇರಿತು ಎಲ್ಲಿಂದ
ಎಲ್ಲ ನಿಮ್ಮ ಕಂಠದಿಂದ
ಕಂಠವೇನು ಜೇನು ಜೇನು
ನಿಮಗೆ ನೀವೆ ಮಾದರಿ
ಆದರೂ ಮುಂದಿನವರಿಗೆ ದಾರಿಯಾದಿರಿ
ಹೋಳಿಯ ಹುಣ್ಣಿಮೆ
ಓಕುಳಿ ಜೋಕುಳಿ
ದೀಪೋತ್ಸವ ನಿತ್ಯೋತ್ಸವ
ಗಂಗಾವತರಣ
ಅಳುವ ಕಡಲೊಳು ತೇಲಿ ಬರುತ್ತಿರುವ
ನಗೆಯ ಹಾಯಿದೋಣಿ
ಅದು ಆಗಲಿ ಇದು ಆಗಲಿ
ಅನಂತದಿಂದ ದಿಗಂತದಿಂದ
ಅಲ್ಲಿಂದಲಾಗಲಿ ಇಲ್ಲಿಂದಲಾಗಲಿ
ಎಲ್ಲಿಂದಾಗಲಿ, ಅವು ನಿಮ್ಮ ಕಂಠದಲ್ಲಿ ಬಂದು
ಜೀವ ಪಡೆದುವು
ಅಡಿಗರಾಗಲಿ ಬೇಂದ್ರೆಯಾಗಲಿ ವಿಶ್ವಕವಿ ಕುವೆಂಪುವಾಗಲಿ
ರಾಷ್ಟ್ರಕವಿ ಗೋವಿಂದ ಪೈ
ನಿಮ್ಮ ಸ್ವರದಿ ಮನೆಮನೆಗೆ ಬಂದು
ಕನ್ನಡಿಗರಿಗೆ ಸಿಕ್ಕರು
ಅವರು ಸೆರೆಸಿಕ್ಕರು
ಆಲಿಸಿದವರ ಪರವಶ
ಆಲಿಸಿದವರ ಮಂತ್ರಮುಗ್ಧ
ಆಲಿಸಿದವರ ತನ್ಮಯ
ಆಲಿಸಿದವರ ಮೈಪುಳಕ
ಹಾಡು ಕಳಕೊಂಡರೆ ನಾವು
ನಾವು ಕಳಕೊಂಡಂತೆಯೆ ಎಂದು
ಹಿಡಿಸಿ ನಮಗೆ ಹಾಡಿನ ಮೋಹ
ಹಾಡಲೆಂದೇ ಬಂದ ಹಕ್ಕಿ
ಹಾಡಿ ಹಾರಿ ಹೋದಂತೆ
ಲಯವಾಗಿ ಮಹಾಲಯದಲ್ಲಿ
ಉಳಿದ ಬಳುವಳಿ ಮಹಾಪೂರ
ತಾಳ ಲಯ ಗಾನ ಗಾಯನ ವಾಹಿನಿ
ಮಹಾ ಧ್ವನಿ ಸಮ್ಮೋಹಿನಿ
ಇದು ಇಲ್ಲಿ ಆರಂಭ
ಇಲ್ಲಿಗಿದು ಮುಗಿಯದೆನ್ನುವ ಭರವಸೆಯೆ
ಕನ್ನಡಿಗರು ನಿಮಗೀಯುವ ನಮನ
*****