ಕಡೆದು ನಿಲ್ಲಿಸಲಿಲ್ಲ ನಾನು
ಗಾಳಿ ಗೋಪುರದ ಗೋಡೆ, ಕಂಬಗಳ
ನೆಲ ಮುಗಿಲ ಗಾಳಿಯಲ್ಲಿ
ಕಟ್ಟಲಿಲ್ಲ ನಾನು ತಾಜಮಹಲುಗಳ..
ಕನಸಿನ ಬುತ್ತಿ ಬಿಚ್ಚಲಿಲ್ಲ.
ಸಾಮ್ರಾಜ್ಯಗಳ ನಾನು ಉರುಳಿಸಲಿಲ್ಲ.
ಮತ್ತೆ ಎತ್ತರಕೆ ನಿಲ್ಲಿಸಲಿಲ್ಲ.
ಮಹಲುಗಳ ಮಜಲುಗಳ
ರಾಜರುಗಳ ಹಳೆಮರಕ್ಕೆ
ಹೊಸ ಚಿಗುರು ಆಲಕ್ಕೆ
ಸಮಕಾಲೀನ ಭೂಮಿ ನೀರು
ಬೇರುಗಳು, ಬಿಳಲುಗಳು
ದಾರಿ ಸವೆಸಿದೆ ಕಾಲಚಕ್ರ
ಸಮಕಾಲೀನ ಬಿಳಲುಗಳ ತನಕ
ಸುರುಳಿಯಂತೆ ಸುತ್ತಿಕೊಂಡಿರುವ
ಹುತ್ತದಾಕೃತಿಯ ಬೇರುಗಳು,
ಬಿಳಲುಗಳ ಸರಿಸಿ ಹೊರಗೆ
ಬಂದು ಇಣಕುವ ನೋವು
ಹಾಹಾಕಾರಗಳು ಇರುಳಿನ
ಕತ್ತಲಿಗೆ ಶರಣು ಹೋಗಿ
ಮತ್ತೆ ಬೆಳಕುಗಾಣುವ
ಬೆಳಕು ಕತ್ತಲೆಯ ಆಟ
ಕನಸು ವಾಸ್ತವಗಳ ಕೂಟ.
*****