ಮಳೆ ಬಿಡುವು ಕೊಟ್ಟಿದೆ
ಬಿಸಿಲು ಬಿದ್ದಿದೆ ನೆಲ ಆರಿದೆ
ಹಿರಿ ಹಿರಿ ಹಿಗ್ಗಿ ಓಡಿದರು ಬಯಲಿಗೆ
ಕುಣಿ ಕುಣಿದು ಕುಪ್ಪಳಿಸಿದರು ಜತೆ ಜತೆಗೆ
ಮೋಡದ ತೆರೆ ಸರಿಯಿತು ಗಾಳಿಗೆ
ಕಂಡಿತು ಬಣ್ಣ ಬಣ್ಣದ ಮಳೆಬಿಲ್ಲು
ಏಳು ವರ್ಣಗಳ ಕಸೂತಿ ಬಾಗಿದ
ಬಿಂಕದ ನೋಟ ಬಲು ಸುಂದರ
ಆಯಿತು ಆಗಸಕ ತೋರಣ
ಎಷ್ಟೊಂದು ಆಕರ್ಷಣೆ ಈ ಕಂಕಣ
ಎಳೆಯರೆಲ್ಲ ಕಂಡರು ಹಿಗ್ಗಿನಲಿ
ವಿಸ್ಮಯಕೆ ನಿಂದರು ಬೆರಗಾಗುತಲಿ
ಮನದಲಿ ಕಾಡಿದವು ತಲ್ಲಣಗಳು ನೂರೆಂಟು
ಗೆಳೆಯರೆಲ್ಲ ಕೂಡಿ ನಲಿದರೇನುಂಟು
ಗುರುಗಳ ಬಳಿ ಓಡಿದರು ಅರ್‍ತಿಯಲಿ
ಪ್ರಶ್ನೆಗಳ ಕೇಳಿದರು ಕೌತುಕದಲಿ
ತುಂತುರು ಹನಿಗಳ ಸೀಳಿದ ಚಿತ್ತಾರ
ಬೆಳಕಿನ ವಿಕಿರಣಗಳ ಚಮತ್ಕಾರ
ಎಂಥ ಅದ್ಭುತ ಸೃಷ್ಟಿ ಎನಲು
ಬಿಟ್ಟರು ಕಣ್ಘಳ ಅಚ್ಚರಿಯಲಿ
ಮೂಡುವುದು ಬಿನ್ನಾಣ ಕಲ್ಯಾಣ
ಸೂರ್‍ಯನ ಎದುರು ದಿಕ್ಕಿನಲಿ
ಆಗಸದ ಕುಸುರಿಗೆ ಕಾರಣವು
ಬೆಳಕಿನ ವರ್‍ಣ ವಿಭಜನೆಯು
ಪ್ರಕೃತಿ ನಿಘಂಟಿನಲಿ
ಏನೆಲ್ಲ ವೈಚಿತ್ರ್ಯಗಳುಂಟು ಎನಲು
ಹೊಳೆಯಿತು ಮಿಂಚು ಎಲ್ಲರ ಕಣ್ಣಿನಲು
ತೇಲಿತು ನಗೆಯೊಂದು ಮಂದಹಾಸದಲಿ
*****
೧೧ ಮಾರ್ಚ್ ೨೦೧೦ ರ ಸುಧಾ ವಾರಪತ್ರಿಕೆಯ ಎಳೆಯರ ಅಂಗಳದಲ್ಲಿ ಪ್ರಕಟ.
೨-೫-೨೦೧೦ ರ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟ.